ಮಾನವೀಯತೆಯ ಮೌಲ್ಯಾಧಾರಿತ ತತ್ವ ಸಿದ್ಧಾಂತಗಳನ್ನು ಜಾಗತಿಕ ಪ್ರಪಂಚಕ್ಕೆ ಸಾರಿದ, ಮನುಕುಲದ ಶ್ರೇಷ್ಠ ಸಂತ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಆಚರಿಸುವಂತೆ ಹಾಗೂ ಬಸವಣ್ಣನವರನ್ನು ರಾಷ್ಟ್ರೀಯ ಪ್ರಜಾಪ್ರಭುತ್ವದ ನಾಯಕರಾಗಿ ಘೋಷಿಸುವಂತೆ ಶರಣ ಸಂಗಮೇಶ ಎನ್ ಜವಾದಿ ರವರು ಕೇಂದ್ರ ಮಂತ್ರಿ ಮಂಡಲಕ್ಕೆ, ವಿಶೇಷವಾಗಿ ದೇಶದ ಪ್ರಧಾನ ಮಂತ್ರಿಗಳಾದ ಗೌರವಾನ್ವಿತ ಶ್ರೀ ನರೇಂದ್ರ ಮೋದಿಯವರಿಗೆ ವಿನಯಪೂರ್ವಕವಾಗಿ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, “12ನೇ ಶತಮಾನದಲ್ಲಿಯೇ ‘ಕಾಯಕವೇ ಕೈಲಾಸ’, ‘ಇವನಾರವ ಇವನಾರವ ಇವನಾರವ ಎನ್ನದೆ ಇವ ನಮ್ಮವ’ ಎಂಬ ಸಮಾನತೆಯ ತತ್ವವನ್ನು ಜಗತ್ತಿಗೆ ಸಾರಿದ ಬಸವಣ್ಣನವರು ಪ್ರಜಾಪ್ರಭುತ್ವದ ಮೊದಲ ಪ್ರತಿಪಾದಕರು. ಅನುಭವ ಮಂಟಪದ ಮೂಲಕ ಸಂಸದೀಯ ಚರ್ಚೆಯ ಪರಂಪರೆಗೆ ನಾಂದಿ ಹಾಡಿದ ಮಹಾಪುರುಷರು. ಇಂತಹ ವಿಶ್ವಮಾನವರ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಿ, ಅವರನ್ನು ರಾಷ್ಟ್ರೀಯ ಪ್ರಜಾಪ್ರಭುತ್ವದ ನಾಯಕ ಎಂದು ಘೋಷಿಸುವುದರಿಂದ ದೇಶದ ಯುವಪೀಳಿಗೆಗೆ ಬಸವ ತತ್ವದ ಪರಿಚಯವಾಗುತ್ತದೆ. ಸಮಾನತೆ, ಭ್ರಾತೃತ್ವ, ಕಾಯಕ, ದಾಸೋಹ ತತ್ವಗಳು ರಾಷ್ಟ್ರದ ಅಡಿಪಾಯವಾಗುತ್ತವೆ” ಎಂದು ಅಭಿಪ್ರಾಯಪಟ್ಟರು.
“ಕೇಂದ್ರ ಸರ್ಕಾರವು ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮುಂಬರುವ ಬಸವ ಜಯಂತಿಯಿಂದಲೇ ರಾಷ್ಟ್ರಮಟ್ಟದ ಆಚರಣೆಗೆ ಚಾಲನೆ ನೀಡಬೇಕು” ಎಂದು ಸಂಗಮೇಶ ಜವಾದಿ ಆಗ್ರಹಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















