ಆ ಚಿತ್ರದ ರಿಮೇಕ್ ಗೆ ಹಾಕಿತ್ತಾ ಪ್ಲಾನ್?
‘ಸಂಪತ್ತಿಗೆ ಸವಾಲ್’ 1974 ರಲ್ಲಿ ಬಿಡುಗಡೆಗೊಂಡ ಭಾರತೀಯ ಚಿತ್ರರಂಗದಲ್ಲಿ ಅದ್ಭುತವೆಂದೇ ಹೇಳಬಹುದಾದ ಕನ್ನಡ ಚಲನಚಿತ್ರ. ಅಣ್ಣಾವ್ರು ಓಹೀಲೆಶ್ವರ ಚಿತ್ರದಲ್ಲಿ ಹಿನ್ನಲೆ ಗಾಯಕರಾಗಿ ಹಾಡಿದ್ದರೂ, ಹಿಟ್ ಆಗಿದ್ದು ಮಾತ್ರ ‘ಯಾರೇ ಕೂಗಾಡಲಿ ಊರೇ ಹೊರಾಡಲಿ’ ಗೀತೆ. ಅಲ್ಲಿಂದ ತಮ್ಮ ಚಿತ್ರಗಳಿಗೆ, ಬೇರೆ ನಟರ ಚಿತ್ರಗಳಿಗೆ, ಭಕ್ತಿ ಗೀತೆಗಳಿಗೆ ಅವರ ಧ್ವನಿ ಇದ್ದರೆ ಅದರ ಆನಂದವೇ ಬೇರೆ. ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ನಟ ಅವರು ಅದು ಶುರುವಾಗಿದ್ದು ಸಂಪತ್ತಿಗೆ ಸವಾಲ್ ಚಿತ್ರದಿಂದ. ವಜ್ರಮುನಿ, ಮಂಜುಳಾ, ಬಾಲಣ್ಣ, ರಾಜಮ್ಮ ಅವರ ಅಮೋಘ ಅಭಿನಯ ಇಂದಿಗೂ ಜನಮಾನಸದಿಂದ ಅಳಿಸದೇ ಹಾಗೇ ಉಳಿದಿದೆ.
ಇಂದಿಗೂ ನಮ್ಮೂರಿನ ನಾಟಕಗಳಲ್ಲಿ ನೋಡಿ ಗೌಡ, ಸಾಹುಕಾರ, ರಾಜಕಾರಣಿಗಳು ಕೆಟ್ಟವರಾಗಿ ಕ್ರೂರಿಯಾಗಿ ಇರುತ್ತಾರೆ. ನಾಯಕ ಬಡವ, ಒಳ್ಳೆಯವನು ಇದ್ದು ಗೌಡನ, ಸಾಹುಕಾರನ, ರಾಜಕಾರಣಿಯ ಅಹಮ್ಮಿಗೆ ಕೊಡಲಿ ಪೆಟ್ಟು ಕೊಡುತ್ತಾನೆ. ಯಾವುದೇ ನಾಟಕ ಏನೇ ಕತಾ ವಸ್ತು ಹೊಂದಿದ್ದರೂ ಕೊನೆಗೆ ನಾಟಕದ ಅಂತ್ಯ ಬರುವುದು ಗೌಡನ, ಸಾಹುಕಾರನ, ರಾಜಕಾರಣಿಯ ಬುಡಕ್ಕೆನೇ. ಇದು ಮೊದಲಿನಿಂದಲೂ ಬಂದ ಸಾಮಾಜಿಕ ನಾಟಕ ಪದ್ಧತಿ ಎನ್ನಬಹುದು. ಅನಾದಿ ಕಾಲದಿಂದಲೂ ಬಡವರ, ಶ್ರಮಿಕರ, ರೈತರ ಮೇಲೆ ದುಡ್ಡಿದ್ದವರು ದರ್ಪ ಮಾಡುತ್ತಲೇ ಬಂದಿದ್ದಾರೆ. ನಾವು ಸಹಿಸುತ್ತಲೇ ಬಂದಿದ್ದೇವೆ. ಇದಕ್ಕೆ ನೇರವಾಗಿ ಪ್ರತಿಕಾರ ತೀರಿಸಲಂತೂ ಆಗದ ಮಾತು, ಹೀಗಿದ್ದಾಗ ಇವರ ದರ್ಪಕ್ಕೆ, ದೌರ್ಜನ್ಯಕ್ಕೆ ಉತ್ತರ ಕೊಡಲು ಪ್ರಾರಂಭ ಆಗಿದ್ದೆ ಈ ಸಾಮಾಜಿಕ ನಾಟಕಗಳು. ಅಲ್ಲಿಗೆ ಪೌರಾಣಿಕ ನಾಟಕಗಳು ಹಿಂದೆ ಸರಿದು ಸಾಮಾಜಿಕ ನಾಟಕಗಳು ಹೆಚ್ಚಿದವು. ಅದೇ ಸಾಹುಕಾರ, ಗೌಡ, ರಾಜಕಾರಣಿಯನ್ನು ಆ ನಾಟಕಕ್ಕೆ ಮುಖ್ಯ ಅತಿಥಿಯಾಗಿ ಆಮಂತ್ರಿಸಿ, ನಾಟಕದ ವೇದಿಕೆಯ ಮುಂದೆಯೇ ಕೂಡಿಸಿ ಅವರಿಗೆ ನೇರಾನೇರ ಬೈಯುವುದು, ಅಂತ್ಯಗೊಳಿಸುವುದು ಸಾಮಾಜಿಕ ನಾಟಕಗಳಲ್ಲಿ ಸಾಮಾನ್ಯವಾಗಿ ರೂಢಿಯಾಗಿ ಹೋಯಿತು. ಉತ್ತರ ಕರ್ನಾಟಕವೆಂದರೆ ಕಲಾ ಪೋಷಕರ ನಾಡು. ಚಿತ್ರರಂಗ ಇನ್ನೂ ಅಷ್ಟಾಗಿ ಬೆಳೆಯದ ಕಾಲಘಟ್ಟದಲ್ಲಿ ಮನೋರಂಜನೆಯ ಮಾಧ್ಯಮ ನಾಟಕಗಳು ಎಂದರೆ ತಪ್ಪಾಗಲಾರದು.
ಶ್ರೀ ಖಾಸ್ಗತೇಶ್ವರ, ಶ್ರೀ ಹುಚ್ಚೇಶ್ವರ, ಶ್ರೀ ಗುಬ್ಬಿ ವೀರಣ್ಣಕಂಪನಿ, ಶ್ರೀ ಸುಬ್ಬಯ್ಯ ನಾಯ್ಡು ಅವರ ಕಂಪನಿ, ಹೀಗೆ ಅನೇಕ ಪ್ರಸಿದ್ಧ ನಾಟಕ ಕಂಪನಿಗಳು ನಾಡಿನ ಮನೆ ಮಾತಾಗಿದ್ದು ಸುಳ್ಳಲ್ಲ.
ಶ್ರೀ ಪಿ ಬಿ ದುತ್ತರಗಿ ಈ ನಾಡು ಕಂಡ ಶ್ರೇಷ್ಠ ನಾಟಕ ರಚನೆಕಾರರು. ಇಂದಿನ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಊರಿನವರು. ಅವರ ಅನೇಕ ನಾಟಕಗಳು ಚಲನಚಿತ್ರಗಳಾಗಿವೆ. ‘ಸಂಪತ್ತಿಗೆ ಸವಾಲ್’ ಅವರ ಮೊದಲ ವರ್ಗ ಸಂಘರ್ಷ ನಾಟಕ. ಆ ನಾಟಕವನ್ನು ಅವರು ಬರೆದದ್ದು ಇಂದಿನ ಇಲಕಲ್ಲ ತಾಲೂಕಿನ ಸಿದ್ದನಕೊಳದ ಕಲಾ ಪೋಷಕ ಮಠದಲ್ಲಿ. ಈ ಮಠ ಕಲಾ ಪೋಷಕ ಮಠವೆಂದು ಖ್ಯಾತಿಯಾಗಲು ಕಾರಣವೇನೆಂದರೆ ಕಲಾ ಪ್ರತಿಭೆಗಳನ್ನು ಗುರುತಿಸಿ, ಬೆಳೆಸಿ, ಪೋಷಿಸುವ ಮಠವಾಗಿದೆ. ಇಂದಿಗೂ ಸಹ ಅನೇಕ ಕಲಾ ಪ್ರತಿಭೆಗಳನ್ನು ಗುರುತಿಸುವ ಏಕೈಕ ಮಠ. ವರ್ಷದ ಎಲ್ಲಾ ದಿನವೂ ಅನ್ನದಾಸೋಹ ಇರುತ್ತದೆ. ಬೇರೆ ಮಠಗಳಿಗೆ ಹೋದರೆ ನೀವು ಕಾಣಿಕೆ ಸಲ್ಲಿಸಬೇಕು, ಆದರೆ ಈ ಮಠದಲ್ಲಿ ಅಲ್ಲಿನ ಸ್ವಾಮಿಗಳೇ ಆಶೀರ್ವಾದ ರೂಪದಲ್ಲಿ ಅವರ ಬಳಿ ಇರುವಷ್ಟು ಹಣ ನೀಡುತ್ತಾರೆ, ಸ್ವಾಮಿಗಳು ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಾರೆ. ಎಲ್ಲಾ ದೃಷ್ಟಿಯಿಂದಲೂ ಸಿದ್ದನಕೋಳ ಮಠ ಬಹಳ ವಿಶಿಷ್ಟ ಮಠವಾಗಿದೆ. ಈ ಮಠದ ಆಶ್ರಯದಲ್ಲಿ ಪಿ ಬಿ ದುತ್ತರಗಿ ಅವರು ಸಂಪತ್ತಿಗೆ ಸವಾಲ್ ನಾಟಕ ರಚಿಸಿದ್ದು ಎಂಬುದು ಬಾಗಲಕೋಟೆ ಜಿಲ್ಲೆಯವರಾದ ನಮಗೆ ಹೆಮ್ಮೆಯ ಸಂಗತಿ. ಆ ಚಿತ್ರಕ್ಕೂ, ನಮಗೂ, ರಾಜಣ್ಣನಿಗೂ ಬಿಡಿಸಲಾಗದ ನಂಟು.
ಅಣ್ಣಾವ್ರ ಮೊದಲ ಚಲನಚಿತ್ರ 1954 ರಲ್ಲಿ ಬಿಡುಗಡೆಯಾದ ‘ಬೇಡರ ಕಣ್ಣಪ್ಪ’ ಚಿತ್ರವನ್ನು 1988 ರಲ್ಲಿ ಶಿವಣ್ಣ ಅವರಿಗೆ ‘ಶಿವ ಮೆಚ್ಚಿದ ಕಣ್ಣಪ್ಪ’ ನಾಗಿ ರಿಮೇಕ್ ಮಾಡಿದರು. ಹೀಗಿದ್ದಾಗ ಅಭಿಮಾನಿಗಳ ನಿರೀಕ್ಷೆ ಎಂದಿಗೂ ಊಹಿಸಲು ಸಾಧ್ಯವಾಗದೆ ಇರದು. ಏಕೆಂದರೆ ರಾಜ್ ವಂಶವನ್ನು ರಕ್ತಗತವಾಗಿ ಆರಾಧಿಸುವ ನಮ್ಮಂತ ಅಭಿಮಾನಿಗಳ ಬಳಗವೇ ಇದೆ. ಒಂದು ಸಲ ಅಣ್ಣವರಿಗೆ ರಾಜ್ ವಂಶದ ಅಭಿಮಾನಿಗಳು ಬಂದು “ಅಣ್ಣಾವ್ರೇ, ಸಂಪತ್ತಿಗೆ ಸವಾಲ್ ಚಿತ್ರವನ್ನು ಶಿವಣ್ಣ ಅವ್ರಿಗೆ ರಿಮೇಕ್ ಮಾಡಿದ್ರೆ ಹೇಗೆ?” ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರಂತೆ. ಅದಕ್ಕೆ ಅಣ್ಣಾವ್ರು “ನನ್ನ ಪಾತ್ರ ಶಿವಣ್ಣ ಮಾಡ್ತಾರೆ ಸರಿ, ಆದ್ರೆ ವಜ್ರಮುನಿ, ಬಾಲಣ್ಣ ಅವರ ಪಾತ್ರವನ್ನ ಯಾರಿಂದ ಮಾಡ್ಸೋದು?” ಎಂದರಂತೆ. ಸಂಪತ್ತಿಗೆ ಸವಾಲ್ ಕೇವಲ ರಾಜಕುಮಾರ ಒಬ್ಬರಿಂದ ಅಲ್ಲ, ಅಲ್ಲಿ ಎಲ್ಲರ ಪಾತ್ರ ಇದೆ ಎಂದು ಹೇಳುತ್ತಾ, ತನ್ನ ಸಹ ನಟರನ್ನು ಮೇರು ಸ್ಥಾನದಲ್ಲಿ ನೋಡುವ ಗುಣ ಅಣ್ಣಾವ್ರಲ್ಲಿ ಇತ್ತು ಎನ್ನುವದಕ್ಕೆ ಸಾಕ್ಷಿ ಈ ನಿದರ್ಶನ. ಸಂಪತ್ತಿಗೆ ಸವಾಲ್ ಚಲನಚಿತ್ರ ಬಂದು 40 ವರ್ಷದ ಮೇಲಾಯ್ತು ಇಂದಿಗೂ ನಾವು ಆ ಚಿತ್ರದ ಬಗ್ಗೆ ಮಾತಾಡುತ್ತಿದ್ದೇವೆ. ಹೊಸ ತಂತ್ರಜ್ಞಾದೊಂದಿಗೆ ಬಿಡುಗಡೆ ಆಗಿ ಹೌಸ್ ಫುಲ್ ಓಡುವ ಚಲನಚಿತ್ರ ವಾಗಿದೆ. ಅದೊಂದೇ ಅಲ್ಲ ಅಣ್ಣಾವ್ರ ಎಲ್ಲಾ ಚಲನಚಿತ್ರಗಳು ಸರ್ವಕಾಲಿಕ ಮಹತ್ವವುಳ್ಳವುಗಳಾಗಿವೆ.
ಹುಟ್ಟುಹಬ್ಬದ ಶುಭಾಶಯಗಳು ರಾಜಣ್ಣ.
-ಚಿರಂಜೀವಿ ರೋಡಕರ್.




















