ಕಾಯಕ ಬಂಧುಗಳ ಸಭೆಯಲ್ಲಿ ತಾ. ಪಂ. ಐಇಸಿ ಸಂಯೋಜಕ ಸೋಮನಾಥ ನಾಯಕ ಸಲಹೆ
ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಕೂಲಿಕಾರರಿಗೆ ಕೆಲಸ ನೀಡುವ ಉದ್ದೇಶದಿಂದ ದುಡಿಯೋಣ ಬಾ ಅಭಿಯಾನ ಪ್ರಾರಂಭಿಸಿದ್ದು, ಕೂಲಿಕಾರರು ನರೇಗಾ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ತಾ. ಪಂ. ಐಇಸಿ ಸಂಯೋಜಕ ಸೋಮನಾಥ ನಾಯಕ ರವರು ಹೇಳಿದರು.
ತಾಲೂಕಿನ ಯರಡೋಣ ಗ್ರಾಮ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಆಯೋಜಿಸಿದ್ದ ಕಾಯಕ ಬಂಧುಗಳ ಸಭೆಯಲ್ಲಿ ಮಾತನಾಡಿದರು.
ಬೇಸಿಗೆ ಆರಂಭವಾಗಿದ್ದು ಸ್ಥಳೀಯ ಜನರಿಗೆ ಮನರೇಗಾ ಯೋಜನೆಯಡಿ ಕೆಲಸ ನೀಡಿ, ವಲಸೆ ತಪ್ಪಿಸುವ ಉದ್ದೇಶದಿಂದ ಎಲ್ಲ ಗ್ರಾ. ಪಂ. ವ್ಯಾಪ್ತಿಯಲ್ಲಿ ನರೇಗಾ ಕೂಲಿಕಾರರಿಗೆ ಕೆಲಸ ಆರಂಭಿಸಲಾಗಿದ್ದು ಕಾಯಕ ಬಂಧುಗಳು ನಮೂನೆ-6 ಸಲ್ಲಿಸಿ ಕೆಲಸ ಪಡೆದುಕೊಳ್ಳಬೇಕು.
ನರೇಗಾ ಕೆಲಸಕ್ಕೆ ಬರುವ ಕೂಲಿಕಾರರು ಕಡ್ಡಾಯವಾಗಿ ಎರಡುಬಾರಿ ಹಾಜರಾತಿ ಹಾಕಬೇಕು, ಅಳತೆಗೆ ತಕ್ಕಂತೆ ಕೆಲಸ ಮಾಡಿ ಪೂರ್ಣ ಕೂಲಿ ಪಡೆಯಿರಿ ಎಂದರು.
ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಗಳಾದ ಶಿವರಾಜ್ ಅವರು ಮಾತನಾಡಿ ಯೋಜನೆಯಡಿ ಮಹಿಳೆಯರು, ವಿಶೇಷ ಚೇತನರು, ಲಿಂಗತ್ವ ಅಲ್ಪ ಸಂಖ್ಯಾತರು, ದುರ್ಬಲ ವರ್ಗದ ಕುಟುಂಬದವರು ಸೇರಿದಂತೆ ಎಲ್ಲ ನೊಂದಾಯಿತ ಕೂಲಿಕಾರರಿಗೆ ನಿರಂತರವಾಗಿ ಕೆಲಸ ನೀಡಲಾಗುತ್ತದೆ ಎಂದರು. ನಂತರ ಸಭೆಯಲ್ಲಿ ಕಾಯಕ ಬಂಧುಗಳು ನಮೂನೆ-6 ನ್ನು ಸಲ್ಲಿಸಿದರು.
ಈ ವೇಳೆ ಗ್ರಾಮ ಪಂಚಾಯತಿ ಗಣಕಯಂತ್ರ ನಿರ್ವಾಹಕರಾದ ಗ್ಯಾನಪ್ಪ ಕುಂಟೋಜಿ, ರಮೇಶ್ ಉಪ್ಪಾರ, ಬಿಎಫ್ಟಿ ಯಮನೂರು, ಗ್ರಾಮ ಕಾಯಕ ಮಿತ್ರರಾದ ಶಿಲ್ಪಾ , ಕಾಯಕ ಬಂಧುಗಳ ಬೀರಪ್ಪ, ಮಲ್ಲಯ್ಯ, ಶರಣಪ್ಪ , ಸರಸ್ವತಿ, ಹನುಮಂತ, ಮಾರುತಿ ಬಸವರಾಜ್ ಸೇರಿ ಇತರರಿದ್ದರು.
- ಕರುನಾಡ ಕಂದ ಪತ್ರಿಕೆ




















