ವೀರೇಶ ಗೋನವಾರ- ಎಂ.ಮಾರುತಿ ಶಿಕ್ಷಕರ ಸೇವೆ ಅನುಪಮ: ಗಣ್ಯರ ಅಭಿಮತ
ಸಿಂಧನೂರು : ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಶಾಲೆಯ ಮಕ್ಕಳ ಶೈಕ್ಷಣಿಕ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಕಲಮಂಗಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಆಂಗ್ಲಭಾಷಾ ಶಿಕ್ಷಕ ವೀರೇಶ ಗೋನವಾರ ಮತ್ತು ಸಮಾಜ ವಿಜ್ಞಾನ ಶಿಕ್ಷಕ ಎಂ.ಮಾರುತಿ ಶಿಕ್ಷಕದ್ವಯರ ಸೇವೆ ಅನುಪಮ ಎಂದು ಗಣ್ಯರು ಅಭಿಪ್ರಾಯಪಟ್ಟರು.
ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾದ ವೀರೇಶ ಗೋನವಾರ-ಎಂ.ಮಾರುತಿ ಇವರ ವರ್ಗಾವಣೆ ನಿಮಿತ್ತ ಶಾಲಾ ಎಸ್.ಡಿ.ಎಮ್.ಸಿ, ಶಾಲಾ ಸಿಬ್ಬಂದಿ ವರ್ಗ, ಗ್ರಾಮದ ವಿವಿಧ ಸಂಘ-ಸಂಸ್ಥೆಗಳು ಮತ್ತು ಗ್ರಾಮಸ್ಥರ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಬೀರಪ್ಪ ಶಂಭೋಜಿ ಅವರು ಮಾತನಾಡುತ್ತಾ, ಶ್ರೀಯುತ ವೀರೇಶ ಗೋನವಾರ ಅವರು ಕಳೆದ 11-ವರ್ಷಗಳ ಕಾಲ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ ತಮ್ಮ ವಿಷಯದಲ್ಲಿ ಪ್ರತಿ ವರ್ಷವೂ ಇಂಗ್ಲಿಷ್ ವಿಷಯದಲ್ಲಿ ಉತ್ತಮ ಫಲಿತಾಂಶವನ್ನು ನೀಡುವುದರ ಜೊತೆಗೆ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಲ್ಲಿಯೂ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ನಮ್ಮ ಇಲಾಖೆಯ ಜೊತೆಗೆ ತಾಲ್ಲೂಕು ಆಡಳಿತ, ಕಂದಾಯ, ಪಂಚಾಯತ್ ರಾಜ್ ಮತ್ತು ಗ್ರಾಮಾಣಾಭಿವೃದ್ಧಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಕೈಜೋಡಿಸಿ ಸರ್ಕಾರಗಳ ಅನೇಕ ಮಹತ್ವಕಾಂಕ್ಷಿ ಯೋಜನೆಗಳ ಯಶಸ್ವಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಸಿಂಧನೂರು ಆದರ್ಶ ವಿದ್ಯಾಲಯ (ಆರ್.ಎಮ್.ಎಸ್.ಎ) ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಬಸವರಾಜ ಬಾದರ್ಲಿ ಅವರು ಮಾತನಾಡುತ್ತಾ, ಶಿಕ್ಷಕರು ತಮ್ಮ ಪಾಠ-ಬೋಧನೆಯ ಜೊತೆಗೆ ಸಾಮಾನ್ಯ ಜ್ಞಾನ, ಉತ್ತಮ ಮೌಲ್ಯಗಳನ್ನು ತಮ್ಮ ವಿದ್ಯಾರ್ಥಿಗಳಲ್ಲಿ ಬಿತ್ತಬೇಕು. ಕಲಮಂಗಿ ಶಾಲೆಯ ಶಿಕ್ಷಕರು ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅತ್ಯಂತ ಪರಿಶ್ರಮದಿಂದ ಶಾಲೆಯ ವಾತಾವರಣವನ್ನು ಸುಂದರವಾಗಿ ನಿರ್ಮಾಣ ಮಾಡಿದ್ದಾರೆ. ಶಿಕ್ಷಕರು ಮನಸ್ಸು ಮಾಡಿದರೆ ಏನೆಲ್ಲವನ್ನೂ ಸಾಧಿಸುತ್ತಾರೆ ಎನ್ನುವುದಕ್ಕೆ ಈ ಶಾಲೆಯೇ ಉದಾಹರಣೆ ಎಂದರು.
ಗ್ರಾಮದ ನಿವೃತ್ತ ಪೋಸ್ಟ್ ಮಾಸ್ಟರ್ ಹಾಗೂ ಶ್ರೀ ಚೆನ್ನಮಲ್ಲಕಾರ್ಜುನ ಗ್ರಾಮಾಭಿವೃದ್ಧಿ ಸಮಿತಿಯ ಹಿರಿಯ ಸಲಹೆಗಾರರಾದ ಶರಣೇಗೌಡ ಅವರು ಮಾತನಾಡುತ್ತಾ, ಶಿಕ್ಷಕರಿಬ್ಬರೂ ಈ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಿದ್ದಾರೆ. ವೀರೇಶ ಗೋನವಾರ ಈ ಶಾಲೆಯಲ್ಲಿ ಪ್ರಭಾರಿ ಮುಖ್ಯಗುರುಗಳಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ತಾಲೂಕಾ ಮಟ್ಟದ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ಶಾಲೆಗೆ ಸರ್ಕಾರಿ ಮತ್ತು ಸಂಘ-ಸಂಸ್ಥೆಗಳಿಂದ ವಿವಿಧ ಭೌತಿಕ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಪಡೆಯುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಶಿಕ್ಷಕ ಎಂ.ಮಾರುತಿ ಅವರ ವಿಷಯದಲ್ಲಿ ಪ್ರತಿ ವರ್ಷವೂ 5-6 ವಿದ್ಯಾರ್ಥಿಗಳು ಶೇಕಡಾ 100ರಷ್ಟು ಅಂಕಗಳನ್ನು ಪಡೆದಿದ್ದಾರೆ ಎಂದರು.
ಗ್ರಾಮದ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ದುರುಗೇಶ ಕಲಮಂಗಿ ಅವರು ಮಾತನಾಡುತ್ತಾ, ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಇಬ್ಬರೂ ಶಿಕ್ಷಕು ಮಕ್ಕಳ ಕಣ್ಮಣಿಯಾಗಿದ್ದರು. ಮಕ್ಕಳಿಗೆ ಪಾಠದ ಜೊತೆಗೆ ಮುಂದಿನ ಜೀವನದ ಗುರಿಗಳನ್ನು ಹೇಳಿಕೊಟ್ಟಿದ್ದಾರೆ. ಇವರಿಬ್ಬರ ಈ ಅಭೂತಪೂರ್ವ ಸೇವೆಯನ್ನು ಕಲಮಂಗಿ ಗ್ರಾಮದ ವಿದ್ಯಾರ್ಥಿಗಳು ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ ಎಂದರು.
ತಾಲೂಕಿನ ವಿರುಪಾಪುರ ಶಾಲೆಯ ಮುಖ್ಯೋಪಾಧ್ಯಾಯರಾದ ರಮಾದೇವಿ ಶಂಭೋಜಿ ಅವರು ಮಾತನಾಡುತ್ತಾ, ವೀರೇಶ ಅವರು ಉತ್ತಮ ಶಿಕ್ಷಕರು ಜೊತೆಗೆ ಸಾಹಿತ್ಯ, ಸಂಘಟನೆ, ಸಂಸ್ಕೃತಿ ವಿವಿಧ ಕ್ಷೇತ್ರಗಳಲ್ಲಿಯೂ ಸಹ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆಯಾದ ಸಂದರ್ಭದಲ್ಲಿ ಹಗಲು-ರಾತ್ರಿ ಪರಿಶ್ರಮದಿಂದ ಅತ್ಯಂತ ಯಶಸ್ವಿಯಾಗಿ ಸಾಹಿತ್ಯ ಸಮ್ಮೇಳನವನ್ನು ಮಾಡಿದ ಕೀರ್ತಿ ಶ್ರೀಯತರಿಗೆ ಸಲ್ಲುತ್ತದೆ ಎಂದರು.
ಕಲಮಂಗಿ ವಲಯದ ಸಿ.ಆರ್.ಪಿ. ಗಳಾದ ಚಿದಾನಂದ ಪೊಲೀಸ್ ಪಾಟೀಲ ಅವರು ಮಾತನಾಡಿ, ಶಿಕ್ಷಕರು ಸದಾ ತಮ್ಮ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಾರೆ. ಅಂತಹ ಶಿಕ್ಷಕನ್ನು ಗ್ರಾಮಸ್ಥರು, ಯುವಕರು ಮತ್ತು ಜನಪ್ರತಿನಿಧಿಗಳು ಗೌರವದಿಂದ ಕಾಣಬೇಕು. ನಾನು ಶಿಕ್ಷಕ ತರಬೇತಿಯನ್ನು ಪಡೆಯುವ ಕಾಲದಿಂದಲೇ ವೀರೇಶ ಗೋನವಾರ ಅವರ ಕಾರ್ಯ-ವೈಖರಿಗಳನ್ನು ಆದರ್ಶವಾಗಿಟ್ಟುಕೊಡು ಬೆಳೆದಿದ್ದೇನೆ ಎಂದು ಹೇಳುತ್ತಾ, ಕಥೆಯೊಂದನ್ನು ಹೇಳುವ ಮೂಲಕ ಶಿಕ್ಷಕನ ಮಹತ್ವವನ್ನು ನೆರೆದಿದ್ದ ಗಣ್ಯರಿಗೆ, ಮಕ್ಕಳಿಗೆ, ಪಾಲಕರಿಗೆ ತಿಳಿಸಿಕೊಟ್ಟರು.
ಸುಝಲಾನ್ ಪೌಂಢೇಷನ್‌ನ ಕಾರ್ಯಕ್ರಮ ಅನುಷ್ಠಾನ ಸಂಸ್ಥೆ ರಾಣೆಬೆನ್ನೂರು ಮೂಲದ ನೀಡ್ಸ್ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಉಳುವಪ್ಪ ಅವರು ಮಾತನಾಡುತ್ತಾ, ವೀರೇಶ ಗೋನವಾರ ಅವರು ಕಳೆದ ಹಲವಾರು ವರ್ಷಗಳಿಂದ ನಮ್ಮ ಸಂಸ್ಥೆಯೊಟ್ಟಿಗೆ ಕೈಜೋಡಿಸಿ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ. ಪುಣೆ ಮೂಲದ ಸುಝಲಾನ್ ಪೌಂಢೇಷನ್ ವತಿಯಿಂದ ದಾವಣಗೆರೆಯಲ್ಲಿ ನಡೆದ ರಾಷ್ಟ್ರ ಮಟ್ಟದ 3600 ಕಾರ್ಯಾಗಾರದಲ್ಲಿಯೂ ಭಾಗವಹಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಗ್ರಾಮದ ಶ್ರೀ ಚೆನ್ನಮಲ್ಲಿಕಾರ್ಜುನ ಗ್ರಾಮಾಭಿವೃದ್ಧಿ ಸಮಿತಿಗೆ ಸಲಹೆ ಮತ್ತು ಮಾರ್ಗದರ್ಶನಳನ್ನು ನೀಡುತ್ತಾ ಬಂದಿದ್ದಾರೆ ಎಂದರು.
ಆದರ್ಶ ವಿದ್ಯಾಲಯ ಶಾಲೆಯ ಆಂಗ್ಲಭಾಷಾ ಶಿಕ್ಷಕ ಕೆ.ಮಲ್ಲಪ್ಪ ಅವರು ಮಾತನಾಡುತ್ತಾ, ಕಳೆದ 25-ವರ್ಷಗಳಿಂದಲೂ ನಮ್ಮ-ಅವರ ನಡುವೆ ಸ್ನೇಹವಿದೆ. ಇಲ್ಲಿಯವರೆಗೆ ಕಲಂಮಗಿ ಶಾಲೆಯ ಮಕ್ಕಳಿಗೆ ದೊರಕಿರುವ ಇವರ ಜ್ಞಾನವೂ ನಗರ ಶಾಲೆಯ ವಿದ್ಯಾರ್ಥಿಗಳಿಗೆ ಸಿಗುವಂತಾಗಲಿ ಎಂದು ಹೇಳಿದರು.
ಸಿಂಧನೂರು ತಾಲೂಕಾ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷರಾದ ಬಸವರಾಜ ಅವರು ಮಾತನಾಡುತ್ತಾ, ಸರ್ಕಾರಿ ನೌಕರರು ಹರಿಯುವ ನೀರಿದ್ದಂತೆ ಅವರು ಮುಂದೆ ಸಾಗುತ್ತಲೇ ಇರುತ್ತಾರೆ. ಬಂದಿರುವ ಶಿಕ್ಷಕರಿಂದ ಜ್ಞಾನವನ್ನು ಪಡೆದುಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯಗುರು ಮಲ್ಲಪ್ಪ ಬಾದರ್ಲಿ ಅವರು ಮಾತನಾಡುತ್ತಾ, ಇವರಿಬ್ಬರ ವರ್ಗಾವಣೆಯಿಂದ ನನ್ನ ಎಡಗೈ ಮತ್ತು ಬಲಗೈಗಳನ್ನು ಕಳೆದುಕೊಂಡಂತಾಗಿದೆ. ಶಾಲೆಯ ಕಳೆದ ಹತ್ತು ವರ್ಷಗಳ ಸರಾಸರಿ ಫಲಿತಾಂಶವು ತಾಲೂಕಿಗಿಂತ ಹೆಚ್ಚಿದೆ. ಶಾಲೆಯ ಎಲ್ಲಾ ಶಿಕ್ಷಕರ ಸತತ ಪರಿಶ್ರಮದಿಂದ ಈ ವರ್ಷ ಶೇ.100ರಷ್ಟು ಫಲಿತಾಂಶ ದಾಖಲಾಗಿದೆ. ಸದಾ ಮಕ್ಕಳ ಮತ್ತು ಶಾಲೆಯ ಬಗ್ಗೆ ಚಿಂತಿಸುತ್ತಿದ್ದ ಈರ್ವರ ವರ್ಗಾವಣೆಯಿಂದ ಶಾಲೆಯು ಬಡವಾಗಿದೆ. ಅವರ ಮುಂದಿನ ವೃತ್ತಿ ಜೀವನ ಚೆನ್ನಾಗಿರಲಿ ಎಂದು ಶುಭಹಾರೈಸಿ ಮಾತನಾಡಿದರು.
ಸನ್ಮಾನವನ್ನು ಸ್ವೀಕರಿಸಿದ ವೀರೇಶ ಗೋನವಾರ ಅವರು ಮಾತನಾಡುತ್ತಾ, ಕಲಮಂಗಿ ಗ್ರಾಮಸ್ಥರನ್ನು ಇಲಾಖೆಯು ಸದಾ ನೆನಪಿಡುತ್ತದೆ. ಇಂದು ಲಕ್ಷಗಟ್ಟಲೇ ಬೆಲೆ ಬಾಳುವ ಅಂದಾಜು 3.27 ಎಕರೆ ಭೂಮಿಯನ್ನು ಗ್ರಾಮಸ್ಥರು ಕೊಂಡುಕೊಂಡು ಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ. ಗ್ರಾಮಸ್ಥರ ಮತ್ತು ಗ್ರಾಮ ಪಂಚಾಯತಿಯ ಸಹಕಾರದಿಂದ 2021-22ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಶಾಲೆಗೆ ಅನೇಕ ಭೌತಿಕ ಸೌಲಭ್ಯಗಳನ್ನು ತಂದುಕೊಡುವಲ್ಲಿ ಕಾರಣರಾಗಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮಸ್ಥರ ಋಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಹೆಚ್.ಎಫ್,ಮಸ್ಕಿ, ಆದರ್ಶ ವಿದ್ಯಾಲಯದ ಪ್ರಭಾರಿ ಮುಖ್ಯಗುರು ಕೆ.ಸಾವನ್, ಶಾಲೆಯ ವಿಜ್ಞಾನ ಶಿಕ್ಷಕಿ ರೂಪಾ ಬಿ., ಗ್ರಾಮದ ಮುಖಂಡರಾದ ಹುಸೇನಪ್ಪ, ಪ್ರಾಥಮಿಕ ಶಾಲೆಯ ಮುಖ್ಯಗುರು ಶಿವಯೋಗಿ ಹಿರೇಗೌಡರ, ಗ್ರಾಮದ ಮುಖಂಡರಾದ ಹನುಮಂತಪ್ಪ ಕೆಸರಟ್ಟಿ, ನಿವೃತ್ತ ಶಿಕ್ಷಕ ವೀರೇಶಪ್ಪ ಅಂಗಡಿ ಮಾತನಾಡಿದರು.
ವೇದಿಕೆಯ ಮೇಲೆ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ನೀಲಪ್ಪ ತಾವರಗೇರಾ, ಉಪಾಧ್ಯಕ್ಷೆ ದೇವಮ್ಮ ನಾಗಪ್ಪ, ಮಾಜಿ ಅಧ್ಯಕ್ಷ ವಿಶ್ವನಾಥರೆಡ್ಡಿ, ಚಿಕ್ಕಭೇರ್ಗಿ ಮುಖ್ಯಗುರು ಬಾಲಕೃಷ್ಣ, ಗಂಗಾಧರ, ಶಾಲೆಯ ಶಿಕ್ಷಕರಾದ ರವಿಚಂದ್ರ, ಬಸವರಾಜ, ನಿವೃತ್ತ ಶಿಕ್ಷಕ ಸುಭಾಷಚಂದ್ರ ಪತ್ತಾರ, ಬಸವರಾಜ ಆನೆಗುಂದಿ, ಭೀಮರಡ್ಡಿ, ಉಮೇಶ, ವೆಂಕಣ್ಣ ಬೇರ್ಗಿ, ಸೋಮಲೀಂಗಪ್ಪ, ಶಾಮಣ್ಣ, ಶ್ರೀ ಚೆನ್ನಮಲ್ಲಕಾರ್ಜುನ ಗ್ರಾಮಾಭಿವೃದ್ಧಿ ಸಮಿತಿಯ ಶರಣೇಗೌಡ ಪೊಲೀಸ್ ಪಾಟೀಲ್, ಅನುರಾಧಾ, ಬಸು ಕುಲಕರ್ಣಿ, ದ್ವಿದಸ ರೂಪಾ ಕರ್ಣೆ, ಅಟೆಂಡರ್ ಮಂಜುನಾಥ ತುರ್ವಿಹಾಳ, ಅತಿಥಿ ಶಿಕ್ಷಕರು, ಗ್ರಾಮಸ್ಥರು, ಯುವಕರು, ಹಳೆಯ ವಿದ್ಯಾರ್ಥಿಗಳು, ಸೇರಿದಂತೆ ಅನೇಕರಿದ್ದರು.
ವಿದ್ಯಾರ್ಥಿಗಳಾದ ಸಾನಿಯಾಬೇಗಂ, ಮೌಲಮ್ಮ, ಆಶ್ಪಿಯಾಬಾನು, ಮಲ್ಲಿಕಾ, ಹುಲಿಗೆಮ್ಮ ಜಿ, ಹಳೆಯ ವಿದ್ಯಾರ್ಥಿನಿ ದುರುಗಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಹೂ ಮಳೆ: ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಿಗೆ ಶಾಲಾ ವಿದ್ಯಾರ್ಥಿಗಳು ಹೂಮಳೆ ಗೈಯುವ ಮೂಲಕ ಶಾಲಾ ಆವರಣದಿಂದ ಮುಖ್ಯರಸ್ತೆಯವರೆಗೆ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಭಾಗವಹಿಸಿದ್ದ ಮಕ್ಕಳ ಕಣ್ಣುಗಳು ಒದ್ದೆಯಾಗಿದ್ದವು.
- ಕರುನಾಡ ಕಂದ ಸುದ್ದಿ




















