ವಿಧಾನ ಪರಿಷತ್ತಿನ ಸದಸ್ಯರಾದ ಪಿ.ಎಚ್.ಪೂಜಾರ ಅವರು ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವಾರು ಕಠಿಣ ಪ್ರಸಂಗಗಳನ್ನು ಎದುರಿಸಿ ಅವುಗಳ ಆಳದಲ್ಲಿ ಗಟ್ಟಿಗೊಂಡವರು, ಇದೇ ದಿ. ೧೬, ಅವರ ಹುಟ್ಟು ಹಬ್ಬ, ಈ ಪ್ರಯುಕ್ತ ಅವರ ಸಾಧನೆಯನ್ನು ಕುರಿತು ಈ ಲೇಖನ.
ಜೀವನದ ಕಾಳಗದಲ್ಲಿ ತನ್ನ ಜನರಿಗೋಸ್ಕರ ತನ್ನ ನಾಡಿಗೋಸ್ಕರ ನಿರ್ವಂಚನೆಯಿಂದ, ನಿಸ್ವಾರ್ಥದಿಂದ, ಹೋರಾಟ ಮಾಡಿದವರು ಜನಮನದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ ಎಂಬ ಮಾತೊಂದಿದೆ. ಈ ಮಾತು ವಿಧಾನ ಪರಿಷತ್ತಿನ ಸದಸ್ಯರಾದ ಪಿ.ಎಚ್.ಪೂಜಾರ ಅವರಿಗೆ ಅನ್ವಯವಾಗುತ್ತದೆ. ಅವರು ೧೭ ವರ್ಷ ಅಧಿಕಾರದಿಂದ ವಂಚಿತರಾಗಿದ್ದರು. ಈ ಸುಧೀರ್ಘ ಅವಧಿಯಲ್ಲಿಯೂ ಜನಸಂಪರ್ಕ ಬಿಟ್ಟವರಲ್ಲ. ಅವರು ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದುದರಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ ಸುಯೋಗ ಅವರಿಗೆ ಒದಗಿ ಬಂದಿತು.
ಈ ಕಾಲ ಘಟ್ಟದಲ್ಲಿ ೧೭ ವರ್ಷದ ನಂತರ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವುದು ಸಾಮಾನ್ಯ ಮಾತಲ್ಲ. ಒಳ್ಳೆಯತನಕ್ಕೆ ಒಳ್ಳೆಯದು ಆಗಿಯೇ ಆಗುತ್ತದೆ ಎನ್ನುವುದಕ್ಕೆ ಪೂಜಾರವರೆ ಸಾಕ್ಷಿ.
ಇದು ಒಬ್ಬ ಸಹೃದಯಿ ಜನನಾಯಕನಿಗೆ ಜನತೆ ಕೊಟ್ಟ ಗೌರವ. ಇದರಿಂದ ಪೂಜಾರ ಅವರ ರಾಜಕೀಯ ವನವಾಸ ಕೊನೆಗೊಂಡಿತು, ಅವರ ಅಭಿಮಾನಿ ಮಹಾ ಬಳಗ ಸಂತಸ ಪಟ್ಟಿತು.
ಇನ್ನು ಮುಂದೆ ರಾಜಕೀಯ ಬೇಡ ಎಂದು ತಿಳುವಳಿಕೆ ಹೇಳುವವರಿಗೂ ಸಹಿತ ಪೂಜಾರ ಅವರ ಅಭೂತಪೂರ್ವ ಬೆಳವಣಿಗೆಯನ್ನು ಕಂಡು ಆಶ್ಚರ್ಯವಾಗಿದೆ. ಪೂಜಾರ ಅವರ ರಾಜಕೀಯ ಮುಗಿದೇ ಹೋಯಿತು ಎಂದು ಅಪಹಾಸ್ಯ ಮಾಡುವವರಿಗೆ ದಿಗ್ಭ್ರಮೆಯಾಗಿದೆ. ಅವರ ಅಚಲವಾದ ನಂಬಿಕೆ, ಜನತೆ ಅವರಲ್ಲಿಟ್ಟ ಪ್ರೀತಿ, ಅವರನ್ನು ಕೈಬಿಡಲಿಲ್ಲ. ಅವರು ವಿಧಾನ ಪರಿಷತ್ತಿಗೆ ಆಯ್ಕೆಯಾದರು.
ಅವರು ಒಟ್ಟು ಎಂಟು ಸಲ ಚುನಾವಣೆಗೆ ನಿಂತಿದ್ದಾರೆ. ಬಿಜೆಪಿ ಪಕ್ಷ ಏನೂ ಇಲ್ಲದಾಗ ಅವರು ಆ ಪಕ್ಷದಲ್ಲಿ ಇದ್ದರು. ಪಕ್ಷ ಸೋಲುತ್ತದೆ ಎಂದು ತಿಳಿದಾಗಲೂ ಪಕ್ಷದ ಆದೇಶಕ್ಕೆ ತಲೆಬಾಗಿ ಚುನಾವಣೆಗೆ ನಿಂತಿದ್ದಾರೆ. ಹೀಗಾಗಿ ಅವರು ಐದು ಸಲ ಸೋತಿದ್ದಾರೆ. ಮೂರು ಸಲ ಗೆದ್ದಿದ್ದಾರೆ. ಪಿ.ಎಚ್.ಪೂಜಾರ ಅವರು. ಸೋಲು ಗೆಲವುಗಳನ್ನು ಸಮನಾಗಿ ಸ್ವೀಕರಿಸಿದ ಹೃದಯವಂತ ಜನನಾಯಕರು. ಕೆಲಸದ ಸದ್ದು ಬಹುದೂರದವರೆಗೆ ಕೇಳಿಸುವಂತೆ ಮಾತಿನ ಸದ್ದು ಕೇಳಿಸುವುದಿಲ್ಲ. ಕೆಲಸಕ್ಕೆ ಇರುವ ಬೆಲೆ ಮಾತಿಗೆ ಎಂದೂ ಬರುವುದಿಲ್ಲ. ಪಿ.ಎಚ್.ಪೂಜಾರವರು ಕೆಲಸದಿಂದ ಗುರುತಿಸಿಕೊಂಡವರು ಮಾತಿನಿಂದ ಗುರುತಿಸಿಕೊಂಡವರಲ್ಲ.
ಪಾಂಡವರಿಗೆ ೧೨ ವರ್ಷ ವನವಾಸ ಒಂದು ವರ್ಷ ಅಜ್ಞಾತವಾಸವಾಗಿತ್ತು. ಶ್ರೀರಾಮ ಚಂದ್ರನಿಗೆ ೧೪ ವರ್ಷ ವನವಾಸವಾಗಿತ್ತು. ಆದರೆ ಪಿ ಎಚ್ ಪೂಜಾರವರಿಗೆ ೧೭ ವರ್ಷ ರಾಜಕೀಯ ವನವಾಸವಾಗಿದೆ. ಪಾಂಡವರ ಹಿಂದೆ ಶ್ರೀಕೃಷ್ಣ ಪರಮಾತ್ಮನೇ ಇದ್ದ. ಶ್ರೀರಾಮ ಚಂದ್ರ ಸ್ವತಃ ದೇವಾಂಶ ಸಂಭೂತನಾಗಿದ್ದ ಆದರೆ ಪಿ.ಎಚ್.ಪೂಜಾರರ ಹಿಂದೆ ಅವರು ನಂಬಿದ ಆಧ್ಯಾತ್ಮಿಕ ಶಕ್ತಿ ಹಾಗೂ ಜನತಾ ಜನಾರ್ಧನನ ಆಶೀರ್ವಾದವಿತ್ತು. ಹೀಗಾಗಿ ಅವರು ತಮ್ಮ ರಾಜಕೀಯ ವನವಾಸ ಮುಗಿಸಿ ಪುನಃ ಅಧಿಕಾರಕ್ಕೆ ಬಂದರು. ಜಿಲ್ಲೆಯಲ್ಲಿಯಾಗಲಿ ರಾಜ್ಯದಲ್ಲಿಯಾಗಲಿ ೧೭ ವರ್ಷ ರಾಜಕೀಯ ಅಧಿಕಾರ ವಂಚಿತರಾಗಿ ಪುನಃ ಅಧಿಕಾರ ಪಡೆಯುತ್ತಿರುವುದು ಅಪರೂಪವೆನ್ನಬಹುದು. ಅಂಥ ಅಪರೂಪದ ವ್ಯಕ್ತಿಗಳಲ್ಲಿ ಪಿ.ಎಚ್.ಪೂಜಾರವರು ಒಬ್ಬರು.
ಪೂಜಾರವರಿಗೆ ಮೂರು ಮಹತ್ವದ ನಂಬಿಕೆಗಳಿವೆ. ದೇವರಿದ್ದಾನೆ ಎನ್ನುವ ಅಚಲವಾದ ನಂಬಿಕೆ, ದೃಢ ಸಂಕಲ್ಪದ ಶಕ್ತಿ ಹಾಗೂ ಅಪರಮಿತ ಆತ್ಮವಿಶ್ವಾಸ ಇವು ಅವರಿಗೆ ರಾಜಕೀಯ ಪುನರ್ ಜನ್ಮವನ್ನು ನೀಡಿದವು. ಪೂಜಾರ ಎನ್ನುವ ಹೆಸರಿನಲ್ಲೇ ಪೂಜೆ ಎನ್ನುವ ಆಧ್ಯಾತ್ಮದ ನಂಟಿದೆ. ಆಧ್ಯಾತ್ಮ ಎಂದೂ ನಂಬಿದವರನ್ನು ಕೈ ಬಿಡುವುದಿಲ್ಲ. ಆಧ್ಯಾತ್ಮದ ನಂಬಿಕೆ ಶಕ್ತಿಯದೋತಕ. ಅದು ಪೂಜಾರವರಿಗೆ ರಕ್ತಗತವಾಗಿದೆ. ರಾಜಕೀಯದಲ್ಲಿ ಹೀಗೂ ಆಗಬಹುದೇ? ಅಂದುಕೊಂಡವರಿಗೆ ಪೂಜಾರವರನ್ನು ನೋಡಿ ಆಗಬಹುದು ಎನ್ನಬೇಕು. ಅವರು ಬರೆಯುವಂತ ಜೀವನವನ್ನು ಬದುಕಿದ್ದಾರೆ. ಅವರ ಬದುಕು ಓದುವಂತ ಸುಂದರವಾದ ಕತೆಯಂತಿದೆ.
ಬದುಕಿನಲ್ಲಿ ಅವರು ಅನುಸರಿಸಿಕೊಂಡು ಬಂದ ಧರ್ಮ ನಿಷ್ಠೆ, ಸಹಾನುಬೂತಿ. ಸಹಕಾರ, ಸಹಾಯ, ತಾಳ್ಮೆ ಅವರ ಈ ವಿಶೇಷ ಗುಣಗಳು ವಿಧಾನ ಪರಿಷತ್ತಿಗೆ ಆಯ್ಕೆಯಾಗಲು ಶಕ್ತಿ ತುಂಬಿದವು. ಯಾರಾದರು ಆಗಿದ್ದರೆ ರಾಜಕೀಯ ಮರೆತು ತಮ್ಮ ಮನೆಯಲ್ಲಿ ಕೂಡುತ್ತಿದ್ದರು. ಆದರೆ ಪೂಜಾರವರು ಎಂದೂ ದೃತಿಗೆಡಲಿಲ್ಲ, ಅವರ ತಾಳ್ಮೆ ದೊಡ್ಡದು. ಅದಕ್ಕಿಂತ ಅವರ ಆತ್ಮವಿಶ್ವಾಸ ದೊಡ್ಡದು, ಅವರು ಎಂದೂ ಜನಸಂಪರ್ಕವನ್ನು ಬಿಡಲಿಲ್ಲ. ಅದೇ ಅವರನ್ನು ರಾಜಕೀಯದಲ್ಲಿ ಫೀನಿಕ್ಸ್ ಪಕ್ಷಿಯಂತೆ ಎದ್ದು ಬರುವಂತೆ ಮಾಡಿತು.
ಪೂಜಾರ ಅವರನ್ನು ಹೇಗಾದರೂ ಮಾಡಿ ರಾಜಕೀಯದಿಂದ ದೂರವಿಡಬೇಕೆನ್ನುವ ಪ್ರಭಲ ಶಕ್ತಿಗೆ ವಿಧಾನ ಪರಿಷತ್ತ ಸದಸ್ಯರಾಗುವುದರ ಮೂಲಕ ಉತ್ತರಿಸಿದ್ದಾರೆ. ಅದಕ್ಕೆ ಅವರ ಅಭಿಮಾನಿಗಳ ಶ್ರಮವಿದೆ. ಅವರ ಸ್ವಾಭಿಮಾನೀ ಆತ್ಮೀಯ ಸ್ವೇಹ ಬಳಗ ದೊಡ್ಡದು. ಪೂಜಾರವರು ಅವರನ್ನು ಎಂದು ಕೈಬಿಟ್ಟಿಲ್ಲ. ಆ ಬಳಗದ ಶಕ್ತಿ ಅವರನ್ನು ಅಧಿಕಾರಕ್ಕೆ ತಂದಿತು. ಅವರಲ್ಲಿ ವಿದ್ವತ್ತು ತುಂಬಿಕೊಂಡವರ ಸರಳತೆ ಇದೆ. ಅವರು ಶ್ರೇಷ್ಠವಾದುದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ, ಶ್ರೇಷ್ಠವಾದುದನ್ನು ಮೆಚ್ಚುತ್ತಾರೆ.
ಪೂಜಾರ ಅವರು ವಯೋವೃದ್ಧ ನಿರ್ಗತಿಕರಿಗೆ ಹಸಿವು ಇಂಗಿಸಲು ಬಾಗಲಕೋಟೆಯಲ್ಲಿ ಚಾರಟೇಬಲ್ ಟ್ರಸ್ಟ ಸ್ಥಾಪಿಸಿ “ಕರುಣೆೆಯ ತುತ್ತು” ಎನ್ನುವ ವಿನೂತನ ಯೋಜನೆ ರೂಪಿಸಿದರು. ಆ ಯೋಜನೆಯ ಮೂಲಕ ಆಯ್ಕೆಯಾದ ನಿರ್ಗತಿಕರ ಮನೆಯ ಬಾಗಿಲಿಗೆ ಊಟ ಕಳಿಸುವುದು ಪೂಜಾರವರ ಹೃದಯ ವೈಶಾಲ್ಯತೆಗೊಂದು ಉದಾಹರಣೆಯಾಗಿದೆ. ಗುಣದ ಹಿಂದೆ ಬೆನ್ನು ಹತ್ತದೆ, ಹಣದ ಹಿಂದೆ ಬೆನ್ನು ಹತ್ತುವ ಈ ಕಾಲದಲ್ಲಿ ಪಿ.ಎಚ್ ಪೂಜಾರಂಥವರು ಅಪರೂಪ. ಅವರು ಪಾಲಿಸಿಕೊಂಡು ಬಂದ ಧರ್ಮ ಹಾಗೂ ಸಾತ್ವಿಕ ಗುಣ ಪೂಜಾರವರಿಗೆ ರಕ್ಷಾಕವಚವಾಗಿ ರಕ್ಷಿಸಿ ಉನ್ನತ ಸ್ಥಾನಕ್ಕೆ ಏರುವಂತೆ ಮಾಡಿತು.
ಕೃಷಿಕ ಮನೆತನದಿಂದ ಬಂದ ಪಿ.ಎಚ್.ಪೂಜಾರವರು ಕೃಷಿಕರಂತೆ ಗಟ್ಟಿಗರು, ಎಂತಹ ಕಠಿಣ ಪ್ರಸಂಗ ಎದುರಾದರೂ ಧೈರ್ಯದಿಂದ ಎದುರಿಸುವ ಎದೆಗಾರಿಕೆ ಅವರದು. ಬಾಗಲಕೋಟೆ ತಾಲೂಕಿನ ತುಳಸಿಗೇರಿಯಲ್ಲಿ ದಿನಾಂಕ ೧೬/೦೭/೧೯೫೪ ರಂದು ಜನಿಸಿದ ಪೂಜಾರವರಿಗೆ ಈಗ ೭೨ ವರ್ಷ ವಯಸ್ಸು, ಯುವಕರ ಹುರುಪು ಹುಮ್ಮಸ್ಸನ್ನು ಅವರಲ್ಲಿ ಈಗಲೂ ಕಾಣಬಹುದಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಬಹುದೂರದ ಹಾದಿ ತುಳಿದು. ಏಳು ಬೀಳುಗಳನ್ನು ಕಂಡು ಹಲವಾರು ಚಳುವಳಿಗಳ ಮೂಲಕ ಅನುಭವದ ಆಗರವಾಗಿದ್ದಾರೆ. ಅವರು ಕಟ್ಟಿ ಬೆಳೆಸಿದ ಪಕ್ಷ ಅವರನ್ನು ಕೈ ಹಿಡಿದಿದ್ದರಿಂದ ಬಿಜೆಪಿಯ ಅಭಿಮಾನಿ ಕಾರ್ಯಕರ್ತರಿಗೆ ಎಲ್ಲಿಲ್ಲದ ಸಂತಸ. ಅವರ ಕ್ರೀಯಾಶೀಲತೆ ಅವರನ್ನು ಉನ್ನತ ಸ್ಥಾನಕ್ಕೇರುವಂತೆ ಮಾಡಿತು.
ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವನವನ್ನು ತನಗೆ ಹಾಗೂ ತನ್ನ ಸುತ್ತಣ ಜನರಿಗೆ ಪ್ರಯೋಜನಕಾರಿಯಾಗುವಂತೆ ಬದುಕಬೇಕು. ಆಗ ಚಮತ್ಕಾರವೇ ಸೃಷ್ಠಿಯಾಗುತ್ತದೆ ಎಂದು ಹೇಳುತ್ತಾರೆ. ಪಿ.ಎಚ್.ಪೂಜಾರವರು ಜನಸಾಮಾನ್ಯರಿಗೆ ಪ್ರಯೋಜನವಾಗುವಂತಹ ಬದುಕನ್ನು ರೂಪಿಸಿಕೊಂಡರು. ಅದರ ಪರಿಣಾಮವಾಗಿ ಅವರ ಬದುಕಿನಲ್ಲಿ ಚಮತ್ಕಾರವೇ ಸೃಷ್ಠಿಯಾಯಿತು. ವೈರಿಯೂ ಮೆಚ್ಚುವಂತ ಬದುಕನ್ನು ರೂಪಿಸಿಕೊಳ್ಳುವುದು ಬಹಳ ಜನರಿಗೆ ಸಾಧ್ಯವಿಲ್ಲ. ಅದು ಪಿ.ಎಚ್.ಪೂಜಾರಂಥ ನಿಷ್ಕಲ್ಮಶ ಹೃದಯವಂತರಿಗೆ ಮಾತ್ರ ಸಾಧ್ಯ. ಅವರ ಜೀವನ ಸುಖ, ಶಾಂತಿ, ಸಂತೋಷ, ಆನಂದಗಳಿಂದ ಕೂಡಿರಲಿ ಎಂಬುದು ಅವರ ಅಭಿಮಾನಿಗಳೆಲ್ಲರ ಹಾರೈಕೆಯಾಗಿದೆ.
ಲೇಖನ ಜಗದೀಶ ಹದ್ಲಿ ,ತಿಮ್ಮಾಪುರ




















