ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಒಬ್ಬ ಶ್ರೇಷ್ಠ ಪರಿಸರವಾದಿ ಮತ್ತು ಸ್ವಾವಲಂಬಿ ಅರಣ್ಯ ಸೃಷ್ಟಿಕರ್ತ ಅಬ್ದುಲ್ ಕರೀಂ

ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ್

ಒಬೊಬ್ಬರಿಗೆ ಒಂದು ರೀತಿಯ ಹುಚ್ಚು ಕೆಲವರ ಹುಚ್ಚು ಸಕಾರಾತ್ಮಕವಾದರೆ, ಕೆಲವರ ಹುಚ್ಚು ನಕಾರಾತ್ಮಕ. ಕೆಲವರಿಗೆ ತಾವು ಮಾಡಿದ ಅಲ್ಪ ಕೆಲಸವನ್ನೇ ದೊಡ್ಡದಾಗಿ ಪ್ರಚಾರ ಪಡೆಯುವ ಹುಚ್ಚು ಇನ್ನೂ ಕೆಲವರಿಗೆ ತಾವು ಮಾಡಿದ ಬಹು ದೊಡ್ಡ ಕೆಲಸದ ಬಗ್ಗೆ ಯಾವುದೇ ಪ್ರಚಾರ ಪಡೆಯದ ಹುಚ್ಚು ಈ ಎಲ್ಲಾ ಹುಚ್ಚುಗಳ ಮಧ್ಯೆ ದುಬೈನಲ್ಲಿ ಕೈತುಂಬಾ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ಬಂಜರು ಭೂಮಿಯಲ್ಲಿ ಕಾಡು ಬೆಳೆಸುವ ಹುಚ್ಚು ಅಬ್ದುಲ್ ಕರೀಂ ಅವರದ್ದು.

ಹೌದು ಕಬ್ದುಲ್ ಕರೀಂ ಅವರು ಕೇರಳದ ಬಂಜರು ಗುಡ್ಡಗಾಡು ಭೂಮಿಯಲ್ಲಿ ಗಿಡ ನೆಡುವ ಕೆಲಸದಲ್ಲಿ ನಿರತರಾದಾಗ ಎಲ್ಲರೂ ಆತನನ್ನು ಹುಚ್ಚ ಎಂದೇ ಕರೆದರು. ಆದರೆ ಅಂದಿನ ಅವರ ಗಿಡನೆಡುವ ಹುಚ್ಚು ಇಂದು ಬಹುದೊಡ್ಡ ಕಾಡು ಆಗಿ ಬದಲಾಗಿದೆ. ಬಂಜರು ನೆಲದಲ್ಲಿ ಕಾಡು ಬೆಳೆಸಿದ್ದು ನಿಜಕ್ಕೂ ಸಕಾರಾತ್ಮಕ ಹುಚ್ಚು ಅಲ್ಲವೇ? ಅವರ ಈ ಸಕಾರಾತ್ಮಕ ಹುಚ್ಚು ಕೆಲಸದ ಹಿಂದೆ ಅಪಾರ ಶ್ರಮ ಮತ್ತು ಬದ್ಧತೆ ಅಡಗಿದೆ.

1970 ರ ದಶಕದಲ್ಲಿ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ಕರೀಂ ಅಲ್ಲಿನ ಬಿಸಿಯುಸಿರಿಗೆ ಬೇಸತ್ತು ಹೋಗಿದ್ದರು. ಸದಾ ಒತ್ತಡದ ಕೆಲಸ. ನೆಮ್ಮದಿ ಎಂಬುದು ಮರಿಚಿಕೆ. ಬಿಸಿಲಿನ ಬೇಗೆ ಮೂಳೆ ಕರಗಿಸುತ್ತಿತ್ತು ಚರ್ಮ ಸುಟ್ಟು ಹೋಗುತ್ತಿತ್ತು ಹವಾ ನಿಯಂತ್ರಕಗಳ ವಾಸನೆಯೂ ಅಲರ್ಜಿಯನ್ನುಂಟು ಮಾಡಿತ್ತು ವಿವಿಧ ರೀತಿಯ ಮಾಲಿನ್ಯಗಳು ಮನಸ್ಸಿನಲ್ಲಿ ನಗರಗಳ ಬಗ್ಗೆ ಬಲವಾದ ದ್ವೇಷವನ್ನು ಹುಟ್ಟುಹಾಕಿದವು. ಇದೆಲ್ಲದರಿಂದ ಬೇಸತ್ತ ಕರೀಂ ಕೈತುಂಬಾ ಸಂಬಳದ ಕೆಲಸಕ್ಕೆ ಗುಡ್ ಬಾಯ್ ಹೇಳಿ ತಮ್ಮ ಊರಿಗೆ ಮರಳಿದರು. 1977ರಲ್ಲಿ ಕೇರಳದ ಪುಲಿಯಮ್ ಕುಲಂನಲ್ಲಿ 5 ಎಕರೆ ಗುಡ್ಡಗಾಡಿನ ಜಮೀನನ್ನು ಕೇವಲ 3750 ರೂಪಾಯಿಗೆ ಖರೀದಿಸಿದಾಗ ಜನರು ಅವರನ್ನು ಹುಚ್ಚ ಎಂದು ಕರೆದರು. ಈ ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ತುಂಬಾ ಕಡಿಮೆ ಬಂಜರು ಭೂಮಿಗೆ ಅಷ್ಟೊಂದು ಭಾರಿ ಬೆಲೆಯ ಕೊಟ್ಟು ಖರೀದಿಸಿದ್ದಕ್ಕೆ ಅವರನ್ನು ಹುಚ್ಚ ಎಂದಿದ್ದರು.

ಕರೀಂ ಅವರ ಮೊದಲ ಸವಾಲೆಂದರೆ ಕೆಲಸಕ್ಕೆ ಕಾರ್ಮಿಕರ ಅಲಭ್ಯತೆ, ಸಸಿಗಳನ್ನು ನೆಡಲು ಗುಂಡಿ ಅಗಿಯಬೇಕಾಗಿತ್ತು. ಅದಕ್ಕಾಗಿ ಕಾರ್ಮಿಕರ ಅಗತ್ಯವಿತ್ತು, ಬೇರೆ ಕಡೆಯಿಂದ ಕಾರ್ಮಿಕರನ್ನು ಕರೆತರುವ ಬದಲು ಸ್ಥಳೀಯರನ್ನು ನೇಮಿಸಿಕೊಳ್ಳಲು ನಿರ್ಧರಿಸಿದರು. ಅದಕ್ಕಾಗಿ ಅವರು ಕೇಳಿದಷ್ಟು ಕೂಲಿ ಹಣ ಪಾವತಿಸಲು ಸಿದ್ದರಾದರು. ಇದರಿಂದ ಸ್ಥಳೀಯ ಕಾರ್ಮಿಕರಿಗೆ ಒಂದಿಷ್ಟು ಕೆಲಸದ ಭರವಸೆಯೂ ದೊರೆತಿತ್ತು.

ಮಳೆಗಾಲದಲ್ಲಿ ಕರೀಂ ಅವರು ಕಾರ್ಮಿಕರ ನೆರವಿನಿಂದ ಜಮೀನಿನಲ್ಲಿ ಗಿಡ ನೆಡಲು ಪ್ರಾರಂಭಿಸಿದರು. ನೂರಾರು ಸಸಿಗಳನ್ನು ನೆಟ್ಟರು. ಅದೇ ಜಮೀನಿನಲ್ಲಿ ಒಂದು ಬಾವಿ ಇತ್ತಾದರೂ ನೀರಿಲ್ಲದೇ ಬತ್ತಿ ಹೋಗಿತ್ತು ಗಿಡಗಳಿಗೆ ನೀರುಳ್ಳಿಸಲು ಒಂದು ಮೈಲಿ ದೂರದಿಂದ ಮೋಟಾ‌ರ್ ಸೈಕಲ್ ಮೂಲಕ ಖಾಲಿ ಡಬ್ಬಗಳಲ್ಲಿ ನೀರನ್ನು ಹಾಕಿದರು. ಮೊದಲ ವರ್ಷ ಕಳೆಯುವುದರೊಳಗೆ ಕೇವಲ ಒಂದು ಸಸಿ ಮಾತ್ರ ಬದುಕುಳಿದಿತ್ತು ಕರೀಂರ ಈ ವ್ಯರ್ಥ ಪ್ರಯತ್ನ ನೋಡಿ ಜನರು ಮತ್ತೆ ಹುಚ್ಚ ಎಂದು ನಕ್ಕರು.

ಮುಂದಿನ ಮಳೆಗಾಲದಲ್ಲಿ ಹೊಸ ಸಸಿಗಳನ್ನು ನೆಡಲು ಸ್ಥಳೀಯ ಅರಣ್ಯ ಇಲಾಖೆಗೆ ಭೇಟಿ ನೀಡಿದರು. ಭಾರತ ಸರ್ಕಾರ ಪ್ರಾರಂಭಿಸಿದ್ದ ಅರಣ್ಯೀಕರಣ ಉಪಕ್ರಮದ ಭಾಗವಾಗಿ ಸಸಿಗಳನ್ನು ಉಚಿತವಾಗಿ ನೀಡುತ್ತಿತ್ತು ಅವುಗಳನ್ನು ತಂದು ಗಿಡನೆಡುವ ಕಾರ್ಯ ಮುಂದುವರೆಸಿದರು. ಆದರೆ ಅವುಗಳೂ ಸಹ ಅಲ್ಲಿನ ವಾತಾವರಣಕ್ಕೆ ಬದುಕುಳಿಯಲಿಲ್ಲ.

ಛಲ ಬಿಡದ ತ್ರಿವಿಕ್ರಮನಂತೆ 1980ರಲ್ಲಿ ಮತ್ತೆ ಮೂರನೇ ಪ್ರಯತ್ನಕ್ಕೆ ಮುನ್ನುಡಿ ಬರೆದರು. ಈ ಬಾರಿ ಹೊಸ ಸಸಿಗಳನ್ನು ತಂದು ನೆಡುವ ಬದಲು ಮಳೆಗಾಲದಲ್ಲಿ ಸ್ಥಳೀಯ ಕಾಡಿನಿಂದ ಒಂದಿಷ್ಟು ಸಸಿಗಳನ್ನು ಕಿತ್ತು ತಂದು ನೆಟ್ಟರು. ಮಳೆಗಾಲದ ನಂತರವೂ ಸಸಿಗಳಿಗೆ ನೀರಿನ ವ್ಯವಸ್ಥೆ ಮಾಡಿದರು. ಈ ಬಾರಿ ಒಂದಿಷ್ಟು ಸಸಿಗಳು ಬದುಕಿದವು. ಅವರಲ್ಲಿ ಆಶಾಭಾವನೆಯನ್ನು ಚಿಗುರಿಸಿದವು. ಮುಂದಿನ ಮಳೆಗಾಲಕ್ಕೆ ಮತ್ತಷ್ಟು ಗಿಡಗಳನ್ನು ನೆಟ್ಟರು. ಸಂಪೂರ್ಣ ಕೆಂಪು ಕೆಂಪಾಗಿದ್ದ ಭೂಮಿ ನಿಧಾನವಾಗಿ ಹಸಿರಾಗತೊಡಗಿತ್ತು ಗಿಡಗಳೆಲ್ಲ ಬೇರು ಬಿಟ್ಟು ಹೊಸ ಚಿಗುರು ಕಾಣತೊಡಗಿತ್ತು.

ಆದರೆ ಅವರ ಸಂತೋಷ ಅಲ್ಪಕಾಲಿಕವಾಗಿತ್ತು ಸುಮಾರು ಒಂದು ವರ್ಷದ ನಂತರ ಕರೀಂ ಕಾಡು ಬೆಂಕಿಗೆ ಆಹುತಿಯಾದಾಗ ಅವರ ಕನಸು ಬೂದಿಯಾಯಿತು. ಬೆಂಕಿಯ ಕೆನ್ನಾಲಿಗೆ ಹಸಿರನ್ನು ನುಂಗಿತ್ತು. ಭೂಮಿಯನ್ನು ಮತ್ತೊಮ್ಮೆ ಬಂಜರು ಮಾಡಿತ್ತು ಅವರ ಎಲ್ಲಾ ಪ್ರಯತ್ನಗಳು ಕ್ಷಣಮಾತ್ರದಲ್ಲಿ ಬೂದಿಯಾಗುವುದನ್ನು ನೋಡಿ ತುಂಬಾ ದುಃಖಿತರಾದರು. ಆದರೆ ಪ್ರಯತ್ನದಿಂದ ಹಿಂದೆ ಸರಿಯಲಿಲ್ಲ. ಹೊಸ ಶಕ್ತಿಯೊಂದಿಗೆ ಮತ್ತೆ ಗುದ್ದಲಿ ಹಿಡಿದು ನೆಲ ಬಗೆದು ಸಸಿಗಳನ್ನು ನೆಟ್ಟರು. ಅಂದಿನಿಂದ ಕರೀಂ ಹಿಂತಿರುಗಿ ನೋಡಲೇ ಇಲ್ಲ. ಅವರ ಕನಸು ಹಿಂದೆಂದೂ ಕಾಣದ ರೀತಿಯಲ್ಲಿ ನನಸಾಗಲು ಪಾರಂಭಿಸಿತು. 5 ಎಕರೆಯಿಂದ ಪ್ರಾರಂಭವಾದ ಅವರ ಹಸಿರೀಕರಣ ಪ್ರಕ್ರಿಯೆ ಕಾಲಕಾಲಕ್ಕೆ ವಿಸ್ತರಿಸಿತು. ಅಕ್ಕಪಕ್ಕದ ಜಮೀನುಗಳನ್ನು ಖರೀದಿಸಿದರು. ಅಲ್ಲಿಯೂ ಸಸಿಗಳನ್ನು ನೆಡುತ್ತಾ ಬೆಳೆಸಿ ಪೋಷಿಸಿದರು. 5 ಎಕರೆಯಿಂದ ಪ್ರಾರಂಭವಾದ ಅವರ ಕಾಡು ಈಗ 32 ಎಕರೆಗೆ ವಿಸ್ತರಿಸಿದೆ. ಅಂದು ಕರೀಂ ಅವರನ್ನು ಹುಚ್ಚ ಎಂದಿದ್ದ ಜನರು ಇಂದು ಪವಾಡ ಪುರುಷ ಎಂದಿದ್ದಾರೆ.

ನಿಜಕ್ಕೂ ಪವಾಡವೇ ಆಗಿದೆ. ಬಂಜರು ಇಳಿಜಾರು ಭೂಮಿಯಲ್ಲಿ ಕಾಡು ಬೆಳೆಸುವುದು ಸುಲಭದ ಕೆಲಸವಲ್ಲ, ಅಲ್ಲವೇ? ಬಂಜರು ಭೂಮಿಯಲ್ಲಿ ಕಾಡು ಬೆಳೆಯಲು ಅವರು ಹೂಮಸ್ ವಿಧಾನವನ್ನು ಬಳಸಿದರು. ಅಂದರೆ ಉದುರಿದ ಎಲೆಗಳನ್ನು ಅಲ್ಲಿಯೇ ಕೊಳೆಯುವಂತೆ ಮಾಡಿದರು. ಇದರಿಂದ ಅಲ್ಲಿನ ಮಣ್ಣಿನ ಫಲವತ್ತತೆ ಹೆಚ್ಚಾಯಿತು. ಗಿಡಗಳು ವೇಗವಾಗಿ ಬೆಳೆದು ಮರಗಳಾಗಲು ಸೂಕ್ತ ಫಲವತ್ತತೆ ದೊರೆಯಿತು. ಬಂಜರು ಮಣ್ಣನ್ನು ಫಲವತ್ತೆಯ ಮಣ್ಣನ್ನಾಗಿಸುವಲ್ಲಿ ಬಳಸಿದ ಅವರ ಸಾಮಾನ್ಯ ಜ್ಞಾನ ಮತ್ತು ಕಠಿಣ ಪರಿಶ್ರಮ ಅನುಕರಣೀಯವಾಗಿದೆ.

ಕರೀಂ ಅವರು ಮರಗಳನ್ನೇನೋ ಬೆಳೆಸಿದರು. ಅದಕ್ಕೆ ಪ್ರತಿಯಾಗಿ ಮರಗಳು ಸುತ್ತಮುತ್ತಲ ಪ್ರದೇಶದ ನೀರಿನ ಮಟ್ಟವನ್ನು ಏರಿಸಿದವು ಬತ್ತಿ ಹೋಗಿದ್ದ ಬಾವಿಯಲ್ಲಿ ನೀರು ತುಂಬಿತ್ತು ಇದರಿಂದ ಉತ್ತೇಜಿತರಾದ ಕರೀಂ ತಮ್ಮ ಜಮೀನಿನಲ್ಲಿ ಅಲ್ಲಲ್ಲಿ ಬಾವಿಗಳನ್ನು ತೋಡಿಸಿದರು. ಅವುಗಳೆಲ್ಲಾ ನೀರಿನಿಂದ ತುಂಬಿದವು. ಇಳಿಜಾರಿಗೆ ಅಡ್ಡಲಾಗಿ ಅಲ್ಲಲ್ಲಿ ಕೆರೆಗಳನ್ನು ನಿರ್ಮಿಸಿದರು. ಮಳೆಗಾಲದಲ್ಲಿ ಕೆರೆಗಳು ತುಂಬಿಕೊಂಡವು ಒಂದು ಕಾಲದಲ್ಲಿ ಬಂಜರಾಗಿದ್ದ ಬೆಟ್ಟವು ಈಗ ನೀರಿನ ಸೆಲೆಯಾಯಿತು. ಹತ್ತು ಕಿ.ಮೀ ವ್ಯಾಪ್ತಿಯಲ್ಲಿನ ಹಳ್ಳಿಗಳ ಜಮೀನುಗಳ ಅಂತರ್ಜಲ ಮಟ್ಟವೂ ಹೆಚ್ಚಾಗಿದೆ. ಕರೀಂ ಅವರ ಕಾಡಿನಲ್ಲಿ ಕೆಲವು ಅಪರೂಪದ ಜಾತಿಯ ಮರಗಳು ಸೇರಿದಂತೆ ಆಸಂಖ್ಯಾತ ಔಷಧಿಯ ಸಸ್ಯಗಳಿವೆ. ಅವರ ಅರಣ್ಯವು ಜೀವವೈವಿಧ್ಯದಿಂದ ಸಮೃದ್ಧವಾಗಿದ್ದು, ಸುಮಾರು 800 ಜಾತಿಯ ಮರಗಳು ಮತ್ತು 300 ಜಾತಿಯ ಔಷಧೀಯ ಸಸ್ಯಗಳನ್ನು ಹೊಂದಿದೆ. ಅವರ ಕಾಡಿನಲ್ಲಿ ಅಸಂಖ್ಯಾತ ಪ್ರಾಣಿಗಳು, ಪಕ್ಷಿಗಳು, ಕೀಟಗಳು, ಚಿಟ್ಟೆಗಳು, ಪತಂಗಗಳು, ಸರೀಸೃಪಗಳು, ಉಭಯವಾಸಿಗಳು ವಾಸಿಸುತ್ತಿವೆ.

ಕರೀಂ ಅವರ ಕಾಡಿನಲ್ಲಿ ಈಗ ಲಕ್ಷಕ್ಕೂ ಅಧಿಕ ಲೀಟರ್ ನೀರು ಸಂಗ್ರಹವಾಗುತ್ತಿದೆ. ಬೇಸಿಗೆಯಲ್ಲಿ ಇಡೀ ಗ್ರಾಮಕ್ಕೆ ನೀರಿನ ಆಸರೆಯಾಗಿದೆ. ಸುತ್ತಮುತ್ತಲ ಗ್ರಾಮಸ್ಥರು ನೀರಾವರಿ ಮತ್ತು ಗೃಹೋಪಯೋಗಿ ಉದ್ದೇಶಗಳಿಗಾಗಿ ಕರೀಂ ಅವರ ಜಮೀನಿನಿಂದ ಉಚಿತವಾಗಿ ನೀರನ್ನು ಪಡೆಯುತ್ತಾರೆ. ಕರೀಂ ಅವರು ಸ್ಥಳೀಯ ಜನರಿಗೆ ಕೆಲಸ ನೀಡಿದ್ದರಿಂದ ಈಗ ಅವರೆಲ್ಲ ಆರ್ಥಿಕವಾಗಿ ಸಬಲರಾದರು. ಜೊತೆಗೆ ಅವರ ಹಳ್ಳಿಗೆ ವಿದ್ಯುತ್, ರಸ್ತೆ, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೇವೆಗಳು ಬಂದವು , ಆದಕ್ಕಾಗಿ ಅವರೆಲ್ಲ ಕರೀಂರಿಗೆ ಧನ್ಯವಾದ ಹೇಳುತ್ತಾರೆ.

ಅವರು ಈಗ ಅದೇ ಕಾಡಿನಲ್ಲಿ ಮನೆ ಕಟ್ಟಿಕೊಂಡು ಅಲ್ಲಿಯೇ ವಾಸಿಸುತ್ತಿದ್ದಾರೆ. ಅವರ ಕಾಡಿನಲ್ಲಿ ನಿಂತಾಗ ಇದು ಬಂಜರು ಭೂಮಿ ಎನಿಸುವುದೇ ಇಲ್ಲ. ಇಡೀ ತೋಟ ಹಚ್ಚಹಸಿರಿನಿಂದ ಕಂಗೊಳಿಸುತ್ತದೆ. ಅದು ಎಲ್ಲಾ ಋತುಗಳಲ್ಲೂ ತಂಪಾಗಿರುತ್ತದೆ. ಬೇಸಿಗೆಯಲ್ಲೂ ಇಲ್ಲಿನ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಟುವುದಿಲ್ಲ. ಮಧ್ಯಾಹ್ನವೇ ಕತ್ತಲೆಯಾಗುತ್ತದೆ. ಕಾಡು ಅಷ್ಟೊಂದು ದಟ್ಟವಾಗಿದೆ. ಸಮೃದ್ಧವಾದ ಜೈವಿಕ ವೈವಿಧ್ಯತೆಯನ್ನು ಹೊಂದಿರುತ್ತದೆ. ಇದುವರೆಗಿನ ಮಾನವ ನಿರ್ಮಿತ ಅತ್ಯುತ್ತಮ ಕಾಡುಗಳಲ್ಲಿ ಇದೂ ಸಹ ಒಂದಾಗಿದೆ. ಈ ಕಾಡಿಗೆ ಯಾವುದೇ ಸೈನ್‌ ಬೋರ್ಡ್ ಇಲ್ಲ, ಭದ್ರತಾ ಸಿಬ್ಬಂದಿ ಇಲ್ಲ, ತಂತಿ ಬೇಲಿ ಇಲ್ಲ, ಕಾವಲುಗಾರನೂ ಇಲ್ಲ.

ಕರೀಂ ಅವರು ಕೇರಳ ರಾಜ್ಯದ ಅನೇಕ ಶಾಲೆಗಳಲ್ಲಿ ಅರಣ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ ತರಗತಿಗಳನ್ನು ನಡೆಸಿದ್ದಾರೆ. ಶಾಲಾ ಇನ್ನೂ ಎಷ್ಟು ಕಾಲ ಕೇವಲ ಬಿಜಗಣಿತ, ಅಂಕಗಣಿತ, ರೇಖಾಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರಗಳನ್ನು ಕಲಿಯಬೇಕು. ಇದೆಲ್ಲಕ್ಕಿಂತ ಹೆಚ್ಚಾಗಿ ಅವರು ಪರಿಸರಶಾಸ್ತ್ರವನ್ನು ಅಧ್ಯಯನ ಮಾಡುವಂತಾಗಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೆ ಪರಿಸರ ಉಳಿಯುತ್ತದೆ” ಎನ್ನುತ್ತಾರೆ ಕರೀಂ, ಆಸ್ತಿತ್ವದಲ್ಲಿರುವ ಕಾಡುಗಳು ಕಣ್ಮರೆಯಾಗುವ ಮೊದಲು ಅವುಗಳನ್ನು ಸಂರಕ್ಷಿಸುವಂತೆ ಕರೀಂ ಮನವಿ ಮಾಡುತ್ತಾರೆ. ಕರೀಂ ಅವರು ಅರಣ್ಯ ಕ್ಷೇತ್ರಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ 1998ರಲ್ಲಿ ಕೇರಳ ಅರಣ್ಯ ಸಂಶೋಧನಾ ಸಂಸ್ಥೆ ಅವರನ್ನು ಗೌರವಿಸಿತು. 2005ರಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ತನ್ನ ಇಂಡಿಯಾ ‘ಇನ್‌ಸ್ಪೆರ್ಡ್’ ಸರಣಿಯಲ್ಲಿ ಕರೀಂ ಅವರ ಪ್ರಯತ್ನಗಳನ್ನು ಶ್ಲಾಘಿಸುವ ಪೂರ್ಣ ಪುಟದ ಜಾಹೀರಾತನ್ನು ನೀಡುವ ಮೂಲಕ ಅವರ ಅರಣ್ಯ ಸಂರಕ್ಷಣಾ ಪ್ರಯತ್ನಗಳನ್ನು ಶ್ಲಾಘಿಸಿದೆ. 2009ರಲ್ಲಿ ಲಿಮಾಕ್ ಬುಕ್ ಆಫ್ ರೆಕಾರ್ಡ್ಸ್ನ ವರ್ಷದ ವ್ಯಕ್ತಿಯಾಗಿ ಗೌರವ ಪಡೆದಿದ್ದಾರೆ. ಅವರ ಪರಿಸರ ಕಾಳಜಿಯನ್ನು ಮೆಚ್ಚಿದ ಕೇರಳ ಸರ್ಕಾರವು ಆರನೇ ತರಗತಿ ಪಠ್ಯದಲ್ಲಿ ಕರೀಂ ಅವರ ಬಗ್ಗೆ ಒಂದು ಅಧ್ಯಾಯವನ್ನು ಸೇರಿಸಿದೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ ಸಿ) ಯು ನಾಲ್ಕನೇ ತರಗತಿ ಪಠ್ಯದಲ್ಲಿ ಅವರ ಕಾಡಿನ ಬಗ್ಗೆ ಪಠ್ಯ ಸೇರಿಸಿದೆ. ಅವರ ಪ್ರಯತ್ನಗಳು ಭಾರತವನ್ನು ಮೀರಿ ಬೆಳೆದಿವೆ ಮತ್ತು ಜಾಗತಿಕ ಮನ್ನಣೆಯನ್ನು ಗಳಿಸಿವೆ. ಯುಎಸ್.ಎಯ ಹಾರ್ಡ್ ಫೋರ್ಡ್ ಕನೆಕ್ಟಿಕಟ್‌ನ ಟ್ರಿನಿಟಿ ಕಾಲೇಜು ಸಂಶೋಧನೆಗಾಗಿ ಅವರ ಕಾಡನ್ನು ಆಯ್ಕೆ ಮಾಡಿದೆ. ಅವರು ಅಲ್ಲಿನ ವಿದ್ವಾಂಸರಿಗೆ ಆನ್ಸೆನ್ ಉಪನ್ಯಾಸ ನೀಡಿದ್ದಾರೆ.

ಹಲವಾರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಅವರ ಕಾಡಿಗೆ ಭೇಟಿ ನೀಡುತ್ತಿದ್ದಾರೆ. ಜಾಗತಿಕ ತಾಪಮಾನ ಏರಿಕೆ ಮತ್ತು ಅದನ್ನು ನಿಯಂತ್ರಿಸುವ ತಂತ್ರಗಳಿಗೆ ಇವರ ಕಾಡು ಅನೌಪಚಾರಿಕ ಕಲಿಕೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಕರೀಂ ಅವರ ಕಾಡಿನ ಕಥೆಯು ಪ್ರಪಂಚದಾದ್ಯಂತದ ಪರಿಸರವಾದಿಗಳು ಮತ್ತು ಪ್ರಕೃತಿ ಪ್ರಿಯರಿಗೆ ಸ್ಫೂರ್ತಿ ನೀಡುತ್ತದೆ. ಕರೀಂ ಅವರ ಅರಣ್ಯವು ಇಂದು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕಾಗಿ ಕಾಸರಗೋಡಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಅಲ್ಲಿಗೆ ಭೇಟಿ ನೀಡಬೇಕಾದರೆ ಒಂದು ಕಟ್ಟುನಿಟ್ಟಿನ ಕ್ರಮವಿದೆ. ಅದೇನೆಂದರೆ ಅಲ್ಲಿ ಪ್ಲಾಸ್ಟಿಕ್ ಮತ್ತು ಇನ್ನಿತರೆ ಪರಿಸರ ಮಾರಕ ವಸ್ತುಗಳ ನಿಷಿದ್ದವಿದೆ. ಇದೂ ಸಹ ಕಾಡನ್ನು ಉಳಿಸುವ ಪ್ರಯತ್ನವಲ್ಲವೇ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!