
ಬೆಂಗಳೂರು: ಮಂಕುತಿಮ್ಮನ ಕಗ್ಗ ಜೀವನಾನುಭವದ ಎಲ್ಲಾ ವಿಷಯಗಳನ್ನೂ ಒಳಗೊಂಡಿದೆ; ಮನುಷ್ಯ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾದ ಮೌಲ್ಯಗಳು ತುಂಬಿಕೊಂಡಿವೆ; ಇವನ್ನೆಲ್ಲ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಾದರಿಯಾದವರು ಡಿವಿಜಿ, ಅದಕ್ಕೇ ಅವರು ಪ್ರಸಿದ್ಧರಾದರು ಎಂದು ಲೇಖಕ, ಅಖಿಲ ಭಾರತ ವಿದ್ಯಾರ್ಥಿ ಸಾಹಿತ್ಯ ಪರಿಷತ್ತಿನ ತಿಮ್ಮಣ್ಣ ಭಟ್ ಯಲ್ಲಾಪುರ ಅವರು ಕಗ್ಗದಲ್ಲಿ ಕೌಟುಂಬಿಕ ಮೌಲ್ಯಗಳು ಕುರಿತ ಉಪನ್ಯಾಸದಲ್ಲಿ ನುಡಿದರು. ಅವರು ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿ ಇರುವ ಲೆಕ್ಕಾಧಿಕಾರಿಗಳ ಸಂಘದಲ್ಲಿ ಉಪನ್ಯಾಸ ನೀಡುತ್ತಿದ್ದರು. “ಉಪ್ಪಿಷ್ಟು, ಸಿಹಿಯಿಷ್ಟು” “ಅತಿ ಕಕ್ಕುಲತೆ ಬೇಡ” “ಹಿತವಿರಲಿ ಮಿತವಿರಲಿ” “ಕೊರತೆಯೊಂದನು ನೀನು ನೆನೆ ನೆನೆದು” “ಮುದಿಕುರುಡಿ” ಮುಂತಾದ ಕಗ್ಗಗಳ ವಿಸ್ತಾರ ವಿಶ್ಲೇಷಣೆಯನ್ನು ತಮ್ಮ ಒಂದು ಗಂಟೆಗೂ ಮಿಗಿಲಾದ ಸುಧೀರ್ಘ ಉಪನ್ಯಾಸದಲ್ಲಿ ಮಾಡಿ, ಇತ್ತೀಚೆಗೆ ಎಲ್ಲವೂ ಅತಿ ಎನ್ನುವಷ್ಟು ವ್ಯಾವಹಾರಿಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿ, ಇಂತಹ ಕಾರ್ಯಕ್ರಮಗಳು ಮುಂದುವರಿಯಬೇಕೆಂದು ಆಶಿಸಿದರು.
ಇನ್ನೊಂದು ಉಪನ್ಯಾಸ ಕಾರ್ಯಕ್ರಮದಲ್ಲಿ ಡಾಕ್ಟರ್ ನಮೃತಾ ಉಮೇಶ್ ಅವರು, ಕಗ್ಗದ ಕುರಿತ ಉಪನ್ಯಾಸದ ಮುಂದುವರಿದ ಭಾಗವಂತೆ, ಮೆಂಟಲ್ ಹೆಲ್ತ್ ಹಾಗೂ ಡೆಂಟಲ್ ಹೆಲ್ತ್ ಹೇಗೆ ಒಂದಕ್ಕೊಂದು ಪೂರಕ ಎಂಬುದನ್ನು ನಗುತ್ತಲೇ ತಿಳಿಸಿ, ಸಭಿಕರ ಮನ ಗೆದ್ದು, ಹಲ್ಲುಗಳಿಗೂ ಮಾನವನ ಆರೋಗ್ಯಕ್ಕೂ ಹೇಗೆ ಅವಿನಾಭಾವ ಸಂಬಂಧವಿದೆ? ಎಂಬುದನ್ನು ತಿಳಿಸಿಕೊಡುತ್ತಾ, ಹಲ್ಲುಗಳ ಆರೋಗ್ಯಕ್ಕೆ , ಆರೋಗ್ಯ ಸಂರಕ್ಷಣೆಗೆ, ಹಲ್ಲುಗಳ ಅಂದಕ್ಕೆ ಇತ್ತೀಚೆಗೆ ಯಾವ ಯಾವ ಸಂಶೋಧನೆಗಳಾಗಿವೆ? ಈ ಸಂಶೋಧನೆಗಳ ಸಹಾಯದಿಂದ ನೋವಿಲ್ಲದೆ ಚಿಕಿತ್ಸೆ ಪಡೆಯುವ ಬಗೆಯನ್ನು ಪಿ ಪಿ ಟಿ ಪ್ರದರ್ಶನದ ಮೂಲಕ ವಿವರವಾಗಿ ತಿಳಿಸಿಕೊಟ್ಟರು.
ನಂತರ, ನಾಡಿನ ಖ್ಯಾತ ಗಾಯಕಿ ಗಂಗೂಬಾಯಿ ಹಾನಗಲ್ ಅವರ ಮಗಳ ಶಿಷ್ಯೆ ಶ್ರುತಿ ಗೌಡ, ಮೈಸೂರು, ಶ್ರೇಷ್ಠ ತಬಲಾ ವಾದಕ ಶೇಷಗಿರಿ ಹಾನಗಲ್ ಅವರ ಶಿಷ್ಯ ಶಂಕರ್ ಕುಲಕರ್ಣಿ ಹಾಗೂ ನಾಡಿನ ಖ್ಯಾತ ಹಾರ್ಮೋನಿಯಂ ವಾದಕ ಪಂಡಿತ ವಸಂತ ಕನಕಾಪುರ ಅವರ ಶಿಷ್ಯ ನರಸಿಂಹ ಕಲಕುರ್ಣೆ ಅವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ, ಆ ಸಂಗೀತ ದಿಗ್ಗಜರೇ ನೆನಪಿಗೆ ಬರುವಂತೆ ಮಾಡಿ ಜನರನ್ನು ಮಂತ್ರಮುಗ್ಧರನ್ನಾಗಿಸಿತು.
ಕಾರ್ಯಕ್ರಮದಲ್ಲಿ ಅಶೋಕ ಎಸ್ ಪರ್ವತಿ ಅವರಿಂದ ಕನ್ನಡಕ್ಕೆ ಅನುವಾದಗೊಂಡ, ಪಿ ಎಸ್ ಕುಲಕರ್ಣಿಯವರ ಕೃತಿ ಮಾತಾ ಪಿತೃಗಳ ಕೊಡುಗೆ ಪುಸ್ತಕದ ಆರನೇ ಮುದ್ರಣವನ್ನು ಖ್ಯಾತ ಸಾಹಿತಿ ಎಂ ವಿಶ್ವನಾಥ್ ಹಾಗೂ ವೇದಿಕೆಯ ಮೇಲಿದ್ದ ಗಣ್ಯರು ಬಿಡುಗಡೆಗೊಳಿಸಿದರು. ಖ್ಯಾತ ಲೇಖಕರಾದ
ಕ ವೆಂ ನಾಗರಾಜ, ಸಿದ್ದಣ್ಣ ಸೊನ್ನದ, ಪ್ರಭಾಕರ ಗಂಗೊಳ್ಳಿ, ಸಿತಾರ ವಾದಕಿ ಚಂದ್ರಕಲಾ ಹೆಗಡೆ, ಅಂಕಣಕಾರ ವಿಲಾಸ ಹುದ್ದಾರ್, ಸಂಘದ ಸದಸ್ಯರಾದ ಕೃಷ್ಣಮೂರ್ತಿ, ಸತ್ಯನಾರಾಯಣ, ಕುಮಾರಸ್ವಾಮಿ, ಸುಜಯ ನಾಗರಾಜ್, ವತ್ಸಲಾ ಆರ್, ನಂಜುಂಡಸ್ವಾಮಿ ಅವರು ಅನುವಾದಕ ಅಶೋಕ ಪರ್ವತಿ, ಉಪನ್ಯಾಸಕರು ಹಾಗೂ ಕಲಾವಿದರನ್ನು ಸನ್ಮಾನಿಸಿದರು.
ಮೃತ್ಯುಂಜಯ ತೇಜಸ್ವಿ ಅವರಿಂದ ರಚಿತವಾದ ಕನ್ನಡದ ವಂದೇ ಮಾತರಂ ಗೀತೆಯನ್ನು ಅಣೆಕಟ್ಟು ಮಧುಸೂದನ ರಾವ್ ಹಾಡಿ, ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಬಿ ಎನ್ ಶಿವರಾಂ, ಕೆ ಸಿ ವಿಶ್ವೇಶ್ವರ, ವಾಸುದೇವ ಕಾರಂತ್, ಚಂದ್ರಶೇಖರ ಶಿಡ್ಲಘಟ್ಟ, ಎನ್ ಆರ್ ರಾಘವೇಂದ್ರ ರಾವ್, ಪ್ರಕಾಶ ಪೂರ್ಣಮಠ, ತಿಪ್ಪೇಸ್ವಾಮಿ ಇತರ ಗಣ್ಯರು ಉಪಸ್ಥಿತರಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















