
ಬಳ್ಳಾರಿ / ಕಂಪ್ಲಿ : ನದಿಯಲ್ಲಿ ಬತ್ತಿದ ನೀರು. ಅಂತರ್ಜಲ ಕುಸಿತ. ಕುಡಿಯಲು ನೀರಿಲ್ಲ. ಎತ್ತ ನೋಡಿದರೂ ನೀರಿಲ್ಲ. ಆದ್ದರಿಂದ ನೀರಿನ ದಾಹ ನೀಗಿಸಿಕೊಳ್ಳಲು ಜನರು ಪರದಾಡುವ ಜೊತೆಗೆ ಮೂಕ ದನಕರುಗಳ, ಪ್ರಾಣಿ, ಪಕ್ಷಿಗಳ ರೋಧನೆ ಅಷ್ಟಿಷ್ಟಲ್ಲ. ಇಂತಹ ನೀರಿನ ಬವಣೆಗೆ ತತ್ತರಿಸಿದ ಜನರು ಕುಡಿಯುವ ನೀರು ಒದಗಿಸಬೇಕೆಂಬ ಹಕ್ಕೋತ್ತಾಯ ಮಾಡುತ್ತಿದ್ದಾರೆ.
ಹೌದು..! ತಾಲೂಕಿನ ಸಣಾಪುರ ಗ್ರಾ. ಪಂ. ವ್ಯಾಪ್ತಿಯ ಇಟಗಿ ಗ್ರಾಮ ಬಳಿಯಲ್ಲಿ ಹಾದು ಹೋಗಿರುವ ತುಂಗಭದ್ರಾ ನದಿ ನೀರು ಬತ್ತಿರುವುದು ಜನ ಜಾನುವಾರುಗಳ ಆಕ್ರಂದನದೊಂದಿಗೆ ಬೆಳೆಗಳು ಇಲ್ಲದಿದ್ದರೂ ನೀರನ್ನಾದರೂ ಕೊಡಿ ಸ್ವಾಮಿ ಎಂದು ಇಲ್ಲಿನ ರೈತರು ಮತ್ತು ಜನರು ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಆಗ್ರಹಿಸಿದರು.
ಇಲ್ಲಿನ ನದಿಯಲ್ಲಿ ನೀರಿಲ್ಲದಿರುವುದನ್ನು ಕಂಡ ಇಟಗಿ, ಸಣಾಪುರ, ನಂ.2 ಮುದ್ದಾಪುರ, ಮಣ್ಣೂರು ಸೂಗೂರು, ಕ್ಯಾಂಪ್‌ಗಳ ಜನರು ಕುಡಿಯಲು ನದಿಗೆ ನೀರು ಹರಿಸಬೇಕೆಂದು, ರೈತರು ಮತ್ತು ಜನರು ನದಿ ಸ್ಥಳದಲ್ಲಿ ಪ್ರತಿಭಟಿಸುವ ಮೂಲಕ ಒತ್ತಾಯಿಸಿದರು.
ನಂತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ತುಂಗಭದ್ರ ಜಲಾಶಯ ರೈತರ ಜೀವನಾಡಿಯಾಗಿದೆ. ಆದರೆ, ಕಂಪ್ಲಿ ತಾಲೂಕು ವ್ಯಾಪ್ತಿಯ ಇಟಗಿ ಬಳಿಯಲ್ಲಿರುವ ತುಂಗಭದ್ರಾ ನದಿಯಲ್ಲಿ ನೀರು ಸಂಪೂರ್ಣವಾಗಿ ಬತ್ತಿದೆ. ಮತ್ತು ಈ ಬಾರಿ ಮಳೆ ಇಲ್ಲದ ಪರಿಣಾಮ ಅಂತರ್ಜಲ ಮಟ್ಟವೂ ಕ್ಷೀಣಿಸಿದೆ. ಇದರಿಂದ ಗ್ರಾಮಗಳಲ್ಲಿ ಕುಡಿಯುವ ನೀರಿನ ಬರ ಎದುರಾಗಿದೆ. ಜನರು ಮತ್ತು ಜಾನುವಾರುಗಳು ನೀರಿಗಾಗಿ ದಿನನಿತ್ಯ ಪರದಾಡುವಂತಾಗಿದೆ. ಒಂದೊಪ್ಪತ್ತು ಊಟ ಬಿಡಬಹುದು. ಆದರೆ, ಕುಡಿಯಲಿಕ್ಕೆ ನೀರಿಲ್ಲಂದರೆ ಬದುಕು ಕಷ್ಟವಾಗುತ್ತದೆ. ಈಗಾಗಲೇ ಮಲೆನಾಡಿನಲ್ಲಿ ಮಳೆಯಾದ ಹಿನ್ನಲೆ ತುಂಗಭದ್ರಾ ಜಲಾಶಯಕ್ಕೆ ಸುಮಾರು 20ಕ್ಕೂ ಹೆಚ್ಚು ಟಿಎಂಸಿ ಯಷ್ಟು ನೀರು ಸಂಗ್ರಹವಾಗಿದೆ. ಇದರಲ್ಲಿ ಒಂದಿಷ್ಟು ಟಿಎಂಸಿ ಯಷ್ಟು ನೀರನ್ನು ನದಿಗೆ ಹರಿಸಿದರೆ, ನದಿ ಭಾಗದ ಇಟಗಿ, ಸಣಾಪುರ ಮತ್ತು ಇತರೆ ಗ್ರಾಮಗಳ ಜನರಿಗೆ ಮತ್ತು ಜಾನುವಾರುಗಳಿಗೆ ಅನುಕೂಲದ ಜೊತೆಗೆ ನೀರಿನ ದಾಹ ನೀಗಿಸಲು ಸಾಧ್ಯ ಎಂದರು.
ತದ ನಂತರ ರೈತ ಮುಖಂಡ ಇಟಗಿ ಶರಣೇಗೌಡ ಮಾತನಾಡಿ, ಕಳೆದ ಬಾರಿ ಮುಂಗಾರು ಮಳೆಯಿಂದಾಗಿ ಜಲಾಶಯ ತುಂಬಿ, ನದಿ ಮತ್ತು ಕಾಲುವೆಗಳಿಗೆ ಅಪಾರ ಪ್ರಮಾಣದಷ್ಟು ನೀರು ಪೋಲಾಗಿತ್ತು. ಆದರೆ, ಈ ಸಲ ನದಿಗೆ ನೀರಿಲ್ಲದಂತಾಗಿದೆ. ಮಳೆ ಕೈಕೊಟ್ಟ ಪರಿಣಾಮ ರೈತರು ಕಂಗಾಲಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕುಡಿಲಿಕ್ಕಾದರೂ ನದಿಗೆ ನೀರು ಹರಿಸಬೇಕೆಂಬ ಒತ್ತಾಯ ಮಾಡಬೇಕಾಗಿದೆ. ಮಳೆ ಇಲ್ಲದ ಪರಿಣಾಮ ಅಂತರ್ಜಲ ಕುಸಿತದಿಂದ ಕುಡಿಯಲಿಕ್ಕೆ ನೀರಿಲ್ಲದಂತಾಗಿದೆ. ಒಂದೆರಡು ದಿನದಲ್ಲಿ ನದಿಗೆ ನೀರು ಹರಿಸದಿದ್ದರೆ, ಈ ಭಾಗದ ರೈತರೆಲ್ಲರೂ ಒಂದುಗೂಡಿ ಬಳ್ಳಾರಿ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ, ಜಿಲ್ಲಾಧಿಕಾರಿಗೆ ಕುಡಿಯಲು ನೀರು ಬಿಡುಸುವಂತೆ ಮನವಿ ಮಾಡಲಾಗುವುದು. ಒಂದು ವೇಳೆ ಮನವಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ತಾಳುತ್ತದೆ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಎ.ನಾಗರಾಜಗೌಡ, ವೆಂಕಟರಾಮರಾಜು, ವೈ.ರಮಣಯ್ಯ, ಜಿ.ಈರಣ್ಣ, ರಾಮರಾಜು, ಕೃಷ್ಣಂರಾಜು, ವಿರೇಶ, ಅಚ್ಚುತ್ತರಾಯ್ ವರ್ಮ, ಕೆ.ರಘುರಾಮ್, ರಾಮಣ್ಣ, ಕೆ.ಚಂದ್ರಪ್ಪ, ಗುಂಡುರಾವ್, ನಾರಾಯಣಾಚಾರ್, ಎಂ.ಸತ್ಯಪ್ಪ, ಸಿದ್ದಲಿಂಗಪ್ಪಗೌಡ ಸೇರಿದಂತೆ ಇಟಗಿ, ಸಣಾಪುರ, ನಂ.2 ಮುದ್ದಾಪುರ, ಮಣ್ಣೂರು, ಕ್ಯಾಂಪ್ ಗಳ ರೈತರು ಮತ್ತು ಜನರಿದ್ದರು.
ಪ್ರತಿಭಟನೆಗೆ ಸಾಥ್ ನೀಡಿದ ಕುರಿಗಳು
ಇಲ್ಲಿನ ನದಿ ತಟದಲ್ಲಿ ರೈತರು ಮತ್ತು ಗ್ರಾಮಗಳ ಜನರು ನೀರಿಗಾಗಿ ಪ್ರತಿಭಟನೆ ನಡೆಸಿದರು. ಆದರೆ, ಇಲ್ಲಿನ ಜನರ ರೋಧನೆ ಜೊತೆಗೆ ನೀರಿಗಾಗಿ ದಿನನಿತ್ಯದಲ್ಲಿ ಸಂಕಷ್ಟ ಅನುಭವಿಸುತ್ತಿರುವ 40ಕ್ಕೂ ಹೆಚ್ಚು ಕುರಿ (ಮೇಕೆಗಳು ಒಳಗೊಂಡಂತೆ)ಗಳು ಸಹ ನಮಗೂ ಕುಡಿಯಲು ನೀರು ಕೊಡಿ ಎಂದು ಮೂಕ ಕುರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸಾಥ್ ನೀಡಿರುವುದು ಕಂಡು ಬಂತು. ಮನುಷ್ಯ ಎಲ್ಲಿಯಾದರೂ ನೀರು ಹುಡಿಕಿಕೊಂಡು ಹೋಗಿ ದಾಹ ನೀಗಿಸಿಕೊಳ್ಳುತ್ತಾನೆ. ಆದರೆ, ಕುರಿಗಳಾದ ನಾವು ಎಲ್ಲೆಂತ ಹೋಗಿ ನೀರು ಕುಡಿಯಲಿಕ್ಕೆ ಆಗುತ್ತದೆ. ದೂರದ ಊರುಗಳಿಗೆ ಹೋಗಬೇಕೆಂದರೆ, ಕಳ್ಳ ಕಾಕರ ಭಯ. ಮತ್ತು ನಮ್ಮ ಮಾಲೀಕರು ಬಿಡುವುದಿಲ್ಲ. ಇಷ್ಟು ದಿನ ಇಲ್ಲಿನ ನದಿ ನೀರನ್ನೇ ಅವಲಂಭಿಸಿ ಜೀವನ ನಡೆಸುತ್ತಾ ಬಂದಿದ್ದೇವು. ಆದರೆ, ಈಗ ನದಿಯಲ್ಲಿ ನೀರು ಖಾಲಿಯಾಗಿದ್ದು, ನಮ್ಮ ಪಾಡು ಕಷ್ಟದ ಪಾಡಾಗಿದೆ. ಆದ್ದರಿಂದ ಇಲ್ಲಿ ನಡೆಸಿದ ರೈತರ ಮತ್ತು ಜನರ ಪ್ರತಿಭಟನೆಯನ್ನು ಸರ್ಕಾರ ಮತ್ತು ಅಧಿಕಾರಿಗಳು ಆಲಿಸಿ, ನೀರು ಹರಿಸಿದರೆ, ಮನುಷ್ಯರಿಗೂ ಮತ್ತು ನಮಗೂ ನೀರಿನ ದಾಹ ತಣಿಸಲು ಸಾಧ್ಯ ಎಂಬುದು ಅಳಲಾಗಿತ್ತು.
ವರದಿ : ಜಿಲಾನಸಾಬ್ ಬಡಿಗೇರ್




















