ಬಳ್ಳಾರಿ / ಕಂಪ್ಲಿ :ತಾಲ್ಲೂಕಿನಲ್ಲಿ ಮುಂಗಾರು ಮಳೆ ಕೊರತೆಯಿಂದ ಬಿತ್ತನೆ ಪ್ರಮಾಣ ಕುಂಠಿತಗೊಂಡಿದೆ. ಕೊಳವೆ ಬಾವಿಗಳನ್ನು ನಂಬಿಕೊಂಡು ಬೆಳೆದ ಬೆಳೆಗಳಿಗೆ ನೀರು ಸಾಲದೆ ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಪರಿತಪಿಸುವಂತಾಗಿದ್ದು, ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದು ಬೆಳೆಗಳು ಒಣಗಲಾರಂಭಿಸಿವೆ.
ತಾಲ್ಲೂಕಿನಲ್ಲಿ 22,991 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಮಳೆ ಕೊರತೆ ಮತ್ತು ಜಲಾಶಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗದ ಹಿನ್ನೆಲೆಯಲ್ಲಿ 8027 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. 4421 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 128 ಹೆಕ್ಟೇರ್ ಪ್ರದೇಶದಲ್ಲಿ ಜೋಳ, 694 ಹೆಕ್ಟೇರ್ ಮೆಕ್ಕೆಜೋಳ, 232 ಹೆಕ್ಟೇರ್ ಸಜ್ಜೆ,899 ಹೆಕ್ಟೇರ್ ತೊಗರಿ,1054 ಹೆಕ್ಟೇರ್ ಸರ‍್ಯಕಾಂತಿ, 129 ಹೆಕ್ಟೇರ್ ಕಬ್ಬು, 129 ಹೆಕ್ಟೇರ್ ಪ್ರದೇಶದಲ್ಲಿ ಕಿರುಧಾನ್ಯ ಬೆಳೆಯಲಾಗಿದೆ.
ತಾಲ್ಲೂಕಿನಲ್ಲಿ 7047 ಕೊಳವೆ ಬಾವಿಗಳಿದ್ದು, 200 ಕೊಳವೆ ಬಾವಿಗಳಲ್ಲಿ ನೀರು ಬರಿದಾಗಿದೆ, ನೀರಿನ ಕೊರತೆಯಿಂದಾಗಿ 48 ಏತನೀರಾವರಿ ಯೋಜನೆ ಸ್ಥಗಿತಗೊಂಡಿವೆ. ನೀರಿನ ಕುಸಿತದಿಂದಾಗಿ ಬೆಳೆಗೆ ನೀರಿಲ್ಲದಂತಾಗಿದೆ. ಇದರಿಂದಾಗಿ ಬಿತ್ತನೆಗಾಗಿ ಸಾವಿರಾರು ರೂಗಳನ್ನು ವೆಚ್ಚ ಮಾಡಿರುವ ರೈತರು ಸಂಕಷ್ಟವನ್ನು ಎದುರಿಸುವಂತಾಗಿದೆ.
ತಾಲ್ಲೂಕಿನ ಮೆಟ್ರಿ ಹೊರವಲಯದಲ್ಲಿ ಎಕರೆಗೆ ಸುಮಾರು 16 ಸಾವಿರ ರೂ ನೀಡಿ ಜಮೀನು ಗುತ್ತಿಗೆ ಪಡೆದು ಹತ್ತಿಯನ್ನು ಬೆಳೆಯಲಾಗಿದ್ದು, ನೀರು ದೊರಕದೇ ಎರಡು ತಿಂಗಳ ಸಸಿಗಳ ಬೆಳವಣಿಗೆ ಕುಂಠಿತಗೊಂಡಿದೆ. ಒಂದು ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆಯಲು 12 ರಿಂದ 15 ಸಾವಿರ ರೂ ರ‍್ಚು ಮಾಡಿರುವ ರೈತರು ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದಿರುವುದರಿಂದ ಸಂಕಷ್ಟಕ್ಕೀಡಾಗಿದ್ದಾರೆ. ಬೆಳೆಯನ್ನು ಉಳಿಸಿಕೊಳ್ಳಲು ರೈತ ದಂಪತಿಗಳು ಕೊಡಗಳಿಂದ ನೀರು ತಂದು ಬೆಳೆಗಳಿಗೆ ಹಾಕುತ್ತಿದ್ದಾರೆ.
ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದಾಗಿ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಬೆಳೆ ಬೆಳೆದಿರುವ ರೈತರು ವಿಮೆ ಮಾಡಿಸಿಕೊಳ್ಳಬೇಕು.
- ಸಿ.ಎ.ಮಂಜುನಾಥ್ ರೆಡ್ಡಿ,
ಸಹಾಯಕ ಕೃಷಿ ನಿರ್ದೇಶಕ ಸಿರುಗುಪ್ಪ, ಕಂಪ್ಲಿ.
ವರದಿ : ಜಿಲಾನಸಾಬ್ ಬಡಿಗೇರ್




















