ವಿಜಯನಗರ / ಹೊಸಪೇಟೆ: ಇಂದಿರಾ ಆವಾಸ್ ಯೋಜನೆಯ ಅನುದಾನವನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ವಿಜಯನಗರ ಜಿಲ್ಲೆಯ ಮರಬ್ಬಿಹಾಳು ಗ್ರಾಮ ಪಂಚಾಯಿತಿಯ ಪಿಡಿಒ, ಅಧ್ಯಕ್ಷ ಮತ್ತು ಸದಸ್ಯೆಗೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 90,000 ರೂಪಾಯಿ ದಂಡ ವಿಧಿಸಿ ವಿಜಯನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಮಂಗಳವಾರ ತೀರ್ಪು ಪ್ರಕಟಿಸಿದೆ.
ಮರಬ್ಬಿಹಾಳು ಗ್ರಾಮ ಪಂಚಾಯಿತಿಯ ಪಿಡಿಒ ವಸಂತರಾಜ್, ಗ್ರಾ.ಪಂ ಸದಸ್ಯೆ ಹನುಮವ್ವ ಹಾಗೂ ಗ್ರಾಪಂ ಅಧ್ಯಕ್ಷ ರಾಮಚಂದ್ರ ನಾಯ್ಕ ಶಿಕ್ಷೆಗೆ ಒಳಗಾದ ಅಪರಾಧಿಗಳು. ಇವರು ಇಂದಿರಾ ಆವಾಸ್ ಯೋಜನೆಯ ಸರ್ಕಾರಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಶಿಕ್ಷೆ ವಿಧಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಡಿ ವೈ ಎಸ್ ಪಿ ಎನ್.ಆರ್. ಮಹಾಂತರಡ್ಡಿ ಅವರು ತನಿಖೆ ನಡೆಸಿ, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988ರ 22 0 420, ថ໐ 13(1)(2), 13(2) 468, 471ರ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಡಿ.ನಾರಾಯಣ ಅವರು ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
ವರದಿ : ಜಿಲಾನಸಾಬ್ ಬಡಿಗೇರ್




















