ಬಳ್ಳಾರಿ / ಕಂಪ್ಲಿ : ಗಾಣಿಗ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿ, ಗಾಣಿಗ ಸಮುದಾಯ ಸಂಘದ ಎಮ್ಮಿಗನೂರು ಘಟಕದಿಂದ ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.
ನಂತರ ಅಧ್ಯಕ್ಷ ಎಸ್.ಶರಣಬಸವನಗೌಡ ಮಾತನಾಡಿ, ತಾಲೂಕು ವ್ಯಾಪ್ತಿಯ ಎಮ್ಮಿಗನೂರು ಗ್ರಾಮದಲ್ಲಿ 80ಕ್ಕೂ ಹೆಚ್ಚು ಗಾಣಿಗ ಕುಟುಂಬಗಳು ವಾಸಿಸುತ್ತಿದ್ದು, ಈ ಕುಟುಂಬಗಳಿಗೆ ಜಾತಿ ಪ್ರಮಾಣದ ಅಗತ್ಯತೆ ಇದೆ. ಇದರಿಂದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ. ಈ ಹಿಂದೆ ಗಾಣಿಗ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ನೀಡಲು ನಿರಾಕರಿಸಿದ್ದರು. ನಂತರ ಗ್ರಾಮಕ್ಕೆ ದಂಡಾಧಿಕಾರಿಗಳು ಆಗಮಿಸಿ, ಪಂಚನಾಮ ಮಾಡಿ, ನಂತರ ಗಾಣಿಗ ಸಮುದಾಯದವರಿಗೆ ಜಾತಿ ಪ್ರಮಾಣ ನೀಡಿದ್ದರು. ಆದರೆ, ಈಗ ಮತ್ತೇ ಗಾಣಿಗ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸವಾಗಿದೆ. ಆದ್ದರಿಂದ ಪ್ರಸ್ತುತ ದಂಡಾಧಿಕಾರಿಗಳು ಪರಿಶೀಲಿಸಿ ಹಾಗೂ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣ ಪತ್ರ ಬಹಳ ಅವಶ್ಯ ಇರುವುದರಿಂದ ಆದಷ್ಟು ತ್ವರಿತಗತಿಯಲ್ಲಿ ನಮಗೆ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಮನವಿ ಮಾಡಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಬಾವಿಕಟ್ಟೆ ವಿರೇಶ, ಸಂಘಟನಾ ಕಾರ್ಯದರ್ಶಿ ಎಸ್.ಹಂಪಣ್ಣ, ಕಾನೂನು ಸಲಹೆಗಾರ ಬಿ.ಸದಾಶಿವ, ಸದಸ್ಯರಾದ ಉಮೇಶ, ಮುಖಂಡರಾದ ಚಂದ್ರಪ್ಪ, ಬಾವಿಕಟ್ಟೆ ವಿರೇಶ, ಎಸ್.ಮಂಜುನಾಥ, ಎಸ್.ಸಣ್ಣ ಶರಣಪ್ಪ, ಬಾವಿಕಟ್ಟೆ ದೊಡ್ಡಬಸುವ, ಬಸಪ್ಪ, ಜಡಿಯಪ್ಪ, ಗವಿಸಿದ್ದಪ್ಪ, ದೊಡ್ಡಬಸವ ಸೇರಿದಂತೆ ಸಮುದಾಯದವರು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















