ಸಿರುಗುಪ್ಪ: 2028ರ ವಿಧಾನಸಭಾ ಚುನಾವಣೆಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ 10 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ತೆಕ್ಕಲಕೋಟೆ ಪಟ್ಟಣದ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ನಿವಾಸದ ಆವರಣದಲ್ಲಿ ಬುಧವಾರ ನಡೆದ ಬಿಜೆಪಿ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಯುವಕರು, ಮಹಿಳೆಯರು, ರೈತರು ಹಾಗೂ ಬಡವರಿಗೆ ಸೇರಬೇಕಿದ್ದ ಹಣ ದುರ್ಬಳಕೆಯಾಗಿದೆ. ಈ ಹಣವನ್ನು ತೆಲಂಗಾಣ ಮತ್ತು ಸಂಡೂರು ಚುನಾವಣೆಗಳಿಗೆ ಬಳಸಲಾಗಿದೆ ಎಂದು ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸಿದರು.
‘ಕಾಂಗ್ರೆಸ್ ಪಕ್ಷ ನನ್ನನ್ನು 14 ವರ್ಷಗಳ ಕಾಲ ಬಳ್ಳಾರಿಯಿಂದ ದೂರವಿಟ್ಟಿತ್ತು. ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಇರಬಾರದು ಎಂಬ ಕಾರಣಕ್ಕೆ ಜೈಲಿಗೆ ಕಳುಹಿಸಲಾಯಿತು. ನಾನು ಹೊರಗಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ಭಯ ಕಾಂಗ್ರೆಸ್ ನಾಯಕರಲ್ಲಿತ್ತು’ ಎಂದರು.
ಡಿ.ಕೆ ಶಿವಕುಮಾರ್ ಅವರು ಎರಡು ತಿಂಗಳು ಜೈಲಿನಲ್ಲಿದ್ದ ಸಂದರ್ಭದಲ್ಲಿ ತಮಗಾದ ಕಷ್ಟಗಳನ್ನು ಹೇಳಿಕೊಂಡಿದ್ದರು. ಆದರೆ ತಾವು 43 ತಿಂಗಳು ಜೈಲಿನಲ್ಲಿದ್ದ ವಿಚಾರವನ್ನು ಅವರು ಮರೆತಿದ್ದಾರೆ ಎಂದು ಜನಾರ್ದನ ರೆಡ್ಡಿ ವ್ಯಂಗ್ಯವಾಡಿದರು.
ಕಾಂಗ್ರೆಸ್ ನಾಯಕರು ತಮ್ಮನ್ನು ಪಕ್ಷಕ್ಕೆ ಕರೆತರಲು ಪ್ರಯತ್ನಿಸಿದ್ದರು. ಇಲ್ಲವಾದರೆ ಗಣಿಗಾರಿಕೆ ಬಂದ್ ಮಾಡಿ ಬಂಧಿಸಬೇಕು ಎಂಬ ಚರ್ಚೆ ನಡೆದಿತ್ತು ಎಂದು ಅವರು ಹೇಳಿದರು. ಸುಷ್ಮಾ ಸ್ವರಾಜ್ ಅವರಿಗೆ ದ್ರೋಹ ಮಾಡಿ ಬಿಜೆಪಿ ಪಕ್ಷಕ್ಕೆ ಬೆನ್ನಿಗೆ ಚೂರಿ ಹಾಕುವುದಿಲ್ಲ ಎಂದು ಆಗಲೇ ಸ್ಪಷ್ಟಪಡಿಸಿದ್ದಾಗಿ ತಿಳಿಸಿದರು.
‘ಬರ ಪರಿಸ್ಥಿತಿಯಲ್ಲಿ ಶಾಸಕ ಸ್ಪಂದಿಸಿಲ್ಲ’ : ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂಬುದಕ್ಕೆ ಶಾಸಕ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದೇ ಸಾಕ್ಷಿ ಎಂದು ಆರೋಪಿಸಿದರು.
ಸಿರುಗುಪ್ಪ ತಾಲೂಕಿನಲ್ಲಿ ಬರ ಪರಿಸ್ಥಿತಿ ಇದ್ದರೂ ಶಾಸಕ ಜನರ ನೆರವಿಗೆ ಬಂದಿಲ್ಲ. ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ತಾವು ಈಗಾಗಲೇ ಒತ್ತಾಯಿಸಿದ್ದೇವೆ. ಆದರೆ ಹಚ್ಚೊಳ್ಳಿ ಹೋಬಳಿಯನ್ನು ಹೊರತುಪಡಿಸಿ ಉಳಿದ ಪ್ರದೇಶವನ್ನು ಬರಪೀಡಿತವೆಂದು ಘೋಷಿಸುವಂತೆ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿರುವುದು ಈ ಭಾಗಕ್ಕೆ ಅನ್ಯಾಯವಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು, ತಾಲೂಕು ಘಟಕದ ಅಧ್ಯಕ್ಷ ಕೆ. ಮಲ್ಲಿಕಾರ್ಜುನಸ್ವಾಮಿ, ಕೆ.ಎಸ್. ದಿವಾಕರ, ದಮ್ಮೂರು ಶೇಖರ್, ಹನುಮಂತಪ್ಪ, ನಿಟ್ಟೂರು ಮರೇಗೌಡ, ಶರಣ ಬಸವ, ಮೇಕೆಲಿ ವೀರೇಶ, ಬಿ. ದೊಡ್ಡಯ್ಯ, ಚಾಗಿ ಸುಬ್ಬಯ್ಯ, ವೀರನಗೌಡ ಸೇರಿದಂತೆ ಕಾರ್ಯಕರ್ತರು ಇದ್ದರು.
ವರದಿ : ಮಸೀದಿ ,ಅಬ್ದುಲ್ ಗೌಸ್, ಸಿರುಗುಪ್ಪ




















