ಎಮ್ಮಿಗನೂರು (ಕಂಪ್ಲಿ): ‘ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ನೀಡಬೇಕಿದೆ. ಮನೆಗಳಲ್ಲಿ ದೇವರ ಜಗುಲಿಗೆ ಜಾಗ ಮೀಸಲಿರಿಸುವಂತೆ, ಪುಸ್ತಕಗಳನ್ನು ಇಡಲೂ ಪ್ರತ್ಯೇಕ ಜಾಗ ಮೀಸಲಿಡಬೇಕು’ ಎಂದು ಎಚ್.ವೀರಾಪುರದ ಜ್ಞಾನಜ್ಯೋತಿ ಶಿವಲಿಂಗಮಂದಿರದ ಪೀಠಾಧಿಪತಿ ಜಡೇಶತಾತ ಸಲಹೆ ನೀಡಿದರು.
ಗ್ರಾಮದ ಸರ್ಕಾರಿ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಡಾ.ಅಬ್ದುಲ್ ಕಲಾಂ ಎಸ್.ಪಿ. ಚಾರಿಟಬಲ್ ಫೌಂಡೇಷನ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ಕವಿತಾ ವಾಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕನ್ನಡ ಶಾಲೆಗಳ ಉಳಿವಿನ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಉಪೇಕ್ಷಿಸಬಾರದು’ ಎಂದರು.
ಕವಿತಾ ವಾಚನ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಲೇಖಕ ಬಂಗಿ ದೊಡ್ಡ ಮಂಜುನಾಥ ಮಾತನಾಡಿ, ‘ಮಕ್ಕಳು ಯಾವುದೇ ಮಾಧ್ಯಮದಲ್ಲಿ ಓದಿದರೂ ನಿತ್ಯದ ಸಂವಹನದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು. ಉತ್ತಮ ಕವಿತೆ ಕಟ್ಟುವ ಮೊದಲು ಶ್ರೇಷ್ಠ ಕವಿತೆಗಳ ಅಧ್ಯಯನ ಮಾಡುವುದು ಅತ್ಯಗತ್ಯ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಒಟ್ಟು 59 ಮಕ್ಕಳು ನಾಡಿನ ಖ್ಯಾತ ಕವಿಗಳ ಹಾಗೂ ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿ ಗಮನ ಸೆಳೆದರು.
ಫೌಂಡೇಷನ್ ಅಧ್ಯಕ್ಷ ಬಿ.ಸಬೀನಾ ಪೀರಾವಲಿ, ನಿಲಯ ಪಾಲಕ ಕೆ.ವಿರುಪಾಕ್ಷಪ್ಪ, ಪಶು ವೈದ್ಯಾಧಿಕಾರಿ ಡಾ.ದೇವೇಂದ್ರಪ್ಪ, ಸ್ವಸಹಾಯ ಸಂಘದ ಅಧ್ಯಕ್ಷೆ ರೇಣುಕಾ, ಎಸ್ಡಿಎಂಸಿ ಅಧ್ಯಕ್ಷ ರಮೇಶ, ಪ್ರಮುಖರಾದ ಪೀರಾವಲಿ ಹಂಚಿನಾಳ, ಮಾರೆಮ್ಮ, ವಿನಯ, ಸಾದಕಲಿಸಾಬ್, ಭೀಮೇಶ್, ಎಸ್.ರಾಮು, ಗಾದಿಲಿಂಗ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















