
ಕಂಪ್ಲಿ: ತಾಲ್ಲೂಕಿನಲ್ಲಿ ಬಿಸಿಲಿನ ತಾಪಮಾನ ದಿನೇದಿನೇ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಮತ್ತು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ತುಂಗಭದ್ರಾ ಮೇಲ್ಮಟ್ಟದ ಎಚ್ ಎಲ್ ಸಿ ಮತ್ತು ಕೆಳಮಟ್ಟದ ಎಲ್ ಎಲ್ ಸಿ ಕಾಲುವೆಗಳಿಗೆ ತಕ್ಷಣವೇ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕಂಪ್ಲಿ ಮಂಡಲದ ವತಿಯಿಂದ ತಹಶೀಲ್ದಾರ್ ಕಚೇರಿಯ ಪ್ರಭಾರ ಉಪ ತಹಶೀಲ್ದಾರ್ ಎಸ್. ಡಿ. ರಮೇಶ ರವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಬಿಜೆಪಿ ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ. ಮಹಾದೇವ, “ತಾಲ್ಲೂಕಿನಲ್ಲಿ ಬೇಸಿಗೆಯ ತೀವ್ರತೆ ಹಾಗೂ ಬರಗಾಲದ ಛಾಯೆಯಿಂದಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಅಲ್ಲದೆ, ನೀರಿಲ್ಲದೆ ರೈತರ ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ. ಇಂತಹ ಗಂಭೀರ ಪರಿಸ್ಥಿತಿಯಲ್ಲೂ ಸರ್ಕಾರ ಮತ್ತು ತಾಲ್ಲೂಕು ಆಡಳಿತ ಮೌನವಾಗಿರುವುದು ಸರಿಯಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಬೇಕು. ಗ್ರಾಮೀಣ ಭಾಗದ ಕೆರೆ-ಕುಂಟೆಗಳನ್ನು ತುಂಬಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು. ಒಂದು ವೇಳೆ ರೈತರು ಮತ್ತು ಸಾರ್ವಜನಿಕರ ಈ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ,” ಎಂದು ಸಿ.ಡಿ. ಮಹಾದೇವ ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಳ್ಳಳ್ಳಿ ವೀರೇಶ ಮಾತನಾಡಿ, ರೈತರ ನಿಂತಿರುವ ಬೆಳೆಗಳನ್ನು ಉಳಿಸಲು ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು.
ಸಾರ್ವಜನಿಕರು ಮತ್ತು ಜಾನುವಾರುಗಳ ಅನುಕೂಲಕ್ಕಾಗಿ ಕೆರೆ-ಕುಂಟೆಗಳನ್ನು ತುಂಬಿಸಬೇಕು.
ಕಾಲುವೆಗಳ ಕೊನೆಯ ಭಾಗದ ರೈತರಿಗೂ ನೀರು ತಲುಪುವಂತೆ ಅಧಿಕಾರಿಗಳು ನಿಗಾ ವಹಿಸಿ, ಅಕ್ರಮ ನೀರು ಬಳಕೆ ತಡೆಯಬೇಕು. ಸಂಕಷ್ಟದಲ್ಲಿರುವ ರೈತರು ಮತ್ತು ಗ್ರಾಮೀಣ ಜನರಿಗೆ ಸರ್ಕಾರದ ಅಗತ್ಯ ಪರಿಹಾರ ಹಾಗೂ ಮೂಲಭೂತ ಸೌಕರ್ಯಗಳನ್ನು ವಿಳಂಬವಿಲ್ಲದೆ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಘವೇಂದ್ರ ತಳವಾರ್, ಎಸ್‌ಸಿ ಮೋರ್ಚಾ ಅಧ್ಯಕ್ಷ ಸಿ.ಎ. ಚೆನ್ನಪ್ಪ, ಯುವ ಮೋರ್ಚಾ ಅಧ್ಯಕ್ಷ ವೀರೇಶ ಬಡಿಗೇರ್, ಪ್ರಮುಖರಾದ ಪ್ರಶಾಂತ್, ಎನ್. ರಾಮಾಂಜನೇಯ, ಎಸ್.ಎಂ. ನಾಗರಾಜ ಸ್ವಾಮಿ, ಹೂವಣ್ಣ, ದೇವಲಾಪುರ ರವಿ, ರಾಜು, ಕಡೇಮನಿ ನಾಗರಾಜ, ವಿರೂಪಾಕ್ಷ, ಎಸ್. ಚಂದ್ರಶೇಖರ ಗೌಡ, ಬಿ. ರಮೇಶ್, ಟಿ. ವಿ. ಸುದರ್ಶನ್ ರೆಡ್ಡಿ, ಬಿಎಲ್‌ಎ ಗೋರ್ತಿ ಶ್ರೀನಿವಾಸ್, ವೈ. ಮುರುಳಿಮೋಹನರೆಡ್ಡಿ, ಮಂಜುಳಾ ಪ್ರಮುಖರಾದ ಅಗಳಿ ಪಂಪಾಪತಿ, ಬಿ. ದೇವೇಂದ್ರ, ರಾಜು, ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















