
ಕಂಪ್ಲಿ: ಪಟ್ಟಣದ ಶ್ರೀನಿವಾಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಬುಧವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 135ಕ್ಕೂ ಹೆಚ್ಚು ಸಾರ್ವಜನಿಕರು ತಪಾಸಣೆಗೆ ಒಳಗಾಗಿ ವೈದ್ಯಕೀಯ ಸಲಹೆ ಹಾಗೂ ಉಚಿತ ಔಷಧ ಪಡೆದರು.
ಶಿಬಿರದಲ್ಲಿ ಹೃದಯ ಸಂಬಂಧಿ ಕಾಯಿಲೆ, ಎದೆಉರಿ, ಪಾರ್ಶ್ವವಾಯು ಹಾಗೂ ಅಸ್ತಮಾ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಸಾರ್ವಜನಿಕರಿಗೆ ಉಚಿತವಾಗಿ ಇಸಿಜಿ (ECG), ಎಚ್ಬಿಎ1ಸಿ (HbA1c), ರ್ಯಾಂಡಮ್ ಬ್ಲಡ್ ಶುಗರ್ ಮತ್ತು ರಕ್ತದೊತ್ತಡ ಪರೀಕ್ಷೆಗಳನ್ನು ನಡೆಸಿ, ಮಧುಮೇಹದ ಮಾತ್ರೆಗಳನ್ನು ವಿತರಿಸಲಾಯಿತು. ಆಸ್ಪತ್ರೆಯ ಮುಖ್ಯಸ್ಥ ಡಾ. ಕೆ. ಶ್ರೀನಿವಾಸ ರೆಡ್ಡಿ, ಮಾತನಾಡಿ, ‘ಕಳೆದ 32 ವರ್ಷಗಳಿಂದ ಸಾರ್ವಜನಿಕರಿಗೆ ತುರ್ತು ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದೇವೆ. ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಇನ್ನಷ್ಟು ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದರು.
ಎಂ.ಡಿ. ವೈದ್ಯ ಡಾ. ಅಬ್ದುರ್ ರೆಹಮಾನ್ ಅವರು ಮಧುಮೇಹದ ಲಕ್ಷಣಗಳು ಹಾಗೂ ನಿಯಂತ್ರಣದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಭಟ್ಟ ಪ್ರಸಾದ್, ವಕೀಲ ಹಾಗೂ ಪುರಸಭೆ ಮಾಜಿ ಸದಸ್ಯ ಸುದರ್ಶನ್ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಬಿರಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವಿವಿಧ ವಿಭಾಗಗಳ ಸಿಬ್ಬಂದಿಗಳಾದ ಚಂದ್ರಶೇಖರ ಪಾಟೀಲ್, ಮಾಣಿಕ್ಯ, ಸ್ವಾತಿ, ಗೌತಮಿ, ಮೌನೇಶ್, ಅಪ್ಪು, ಸಂಜಯ, ಸುರೇಶ್ ಸೇರಿದಂತೆ ಇತರರು ಹಾಜರಿದ್ದರು.
ಬಾಲಾಜಿ ಚಳ್ಳಾರಿ ನಿರೂಪಿಸಿದರು.
ಸಿಂಧು ಸ್ವಾಗತಿಸಿ, ವಂದಿಸಿದರು.
ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















