175.700 ಕೆಜಿ ತೂಕದ ಹಿತ್ತಾಳೆಯಲ್ಲಿ ಅರಳಿದ ದಶಾವತಾರ, ಜಯ-ವಿಜಯರ ಕಲಾಕೃತಿ; ಮುಂದಿನ ದಿನಗಳಲ್ಲಿ ಹಿತ್ತಾಳೆ ಅಂಬಾರಿ ರಥ ನಿರ್ಮಾಣದ ಸಂಕಲ್ಪ.
ಕಂಪ್ಲಿ: ಪಟ್ಟಣದ ಸತ್ಯನಾರಾಯಣಪೇಟೆಯಲ್ಲಿರುವ ಶ್ರೀ ರಾಘವೇಂದ್ರ ಶಾಖಾಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ಸದ್ಭಕ್ತರ ಸಂಕಲ್ಪದಂತೆ ಶ್ರೀ ರಾಘವೇಂದ್ರ ತೀರ್ಥರ ಬೃಂದಾವನದ ಗರ್ಭಗುಡಿ ದ್ವಾರಕ್ಕೆ ಆಕರ್ಷಕ ಹಿತ್ತಾಳೆಯ ಬಾಗಿಲುವಾಡವನ್ನು ವಿಜಯದಾಸರ ಮಧ್ಯಾರಾಧನೆಯ ಶುಭ ದಿನದಂದು ಗುರುವಾರ ಶ್ರದ್ಧಾಭಕ್ತಿಯಿಂದ ಅಳವಡಿಸಲಾಯಿತು.
ಕಲಾವಿದರ ಕೈಚಳಕ :
ಸುಮಾರು 175.700 ಕೆಜಿ ತೂಕದ ಹಿತ್ತಾಳೆಯನ್ನು ಬಳಸಿ ಈ ಭವ್ಯ ಬಾಗಿಲುವಾಡ ಹಾಗೂ ರಾಯರ ಪ್ರತಿಮೆಯನ್ನು ನಿರ್ಮಿಸಲಾಗಿದೆ. ನಾಯಕನಹಟ್ಟಿಯ ಖ್ಯಾತ ಕಲಾವಿದರಾದ ಚಿತ್ರಗಾರ್ ಸಿ.ಆರ್. ನರಸಿಂಹ ಮತ್ತು ಸಿ.ಎನ್. ಗಣೇಶ್ ಅವರು ಈ ಕಲಾಕೃತಿಗೆ ಸುಂದರ ರೂಪ ನೀಡಿದ್ದಾರೆ. ಬಾಗಿಲುವಾಡ ತಯಾರಿಕೆಯ ಕೂಲಿ ಸೇರಿದಂತೆ ಪ್ರತಿ ಕೆಜಿ ಹಿತ್ತಾಳೆಗೆ 3,200 ರೂ. ದರದಲ್ಲಿ ಒಟ್ಟು 5.50 ಲಕ್ಷ ರೂ. ವೆಚ್ಚವಾಗಿದೆ.
ಬಾಗಿಲುವಾಡದ ವಿಶೇಷತೆ ಏನು?
173.600 ಕೆಜಿ ತೂಕದ ಹಿತ್ತಾಳೆಯ ಬಾಗಿಲುವಾಡವು ಅತ್ಯಂತ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ.
ಬಾಗಿಲುವಾಡದ ಮೇಲ್ಭಾಗದಲ್ಲಿ ಭಗವಾನ್ ವಿಷ್ಣುವಿನ ದಶಾವತಾರದ ಚಿತ್ರಗಳನ್ನು ಕೆತ್ತಲಾಗಿದೆ.
ಅದರ ಕೆಳಗೆ ಎರಡೂ ಬದಿಗಳಲ್ಲಿ ಗರುಡ, ಎಡದಲ್ಲಿ ಶಂಖ ಹಾಗೂ ಬಲದಲ್ಲಿ ಚಕ್ರದ ಚಿತ್ರಗಳಿವೆ.
ಕೆಳಭಾಗದಲ್ಲಿ ಹಂಸ, ದ್ವಾರಪಾಲಕರಾದ ಜಯ-ವಿಜಯರು, ಪೂರ್ಣಕುಂಭ ಹಾಗೂ ಆನೆಗಳ ಸುಂದರ ಚಿತ್ರಣಗಳನ್ನು ಅಳವಡಿಸಲಾಗಿದೆ.
ಮುಂದಿನ ಸಂಕಲ್ಪ ಮತ್ತು ದೇಣಿಗೆಗೆ ಅವಕಾಶ :
“ರಾಯರ ವಿಶೇಷ ಸೇವೆಗಾಗಿ ಮುಂದಿನ ದಿನಗಳಲ್ಲಿ ಹಿತ್ತಾಳೆ ಅಂಬಾರಿ ರಥವನ್ನು ನಿರ್ಮಿಸುವ ಸಂಕಲ್ಪ ಹೊಂದಲಾಗಿದೆ. ಬಾಗಿಲುವಾಡ ನಿರ್ಮಾಣಕ್ಕೆ ದೇಣಿಗೆ ನೀಡಲು ಇಚ್ಛಿಸುವ ಸದ್ಭಕ್ತರು ಹಾಗೂ ದಾನಿಗಳು ಮಠದಲ್ಲಿ ರಸೀದಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಮಠದ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು” ಎಂದು ಮಠದ ವ್ಯವಸ್ಥಾಪಕ ಪುರುಷೋತ್ತಮಾಚಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಅರ್ಚಕ ವಿಜಯೇಂದ್ರಾಚಾರ್, ಮಠದ ವಿಚಾರಣಾಕರ್ತ ಟಿ. ಕೊಟ್ರೇಶಯ್ಯ, ಸದ್ಭಕ್ತರಾದ ಜಗದೀಶ ರಾಯ್ಕರ್, ವ್ಯಾಸಾಚಾರ್, ಜಿ. ವಿರುಪಾಕ್ಷರಾವ್ ಶೇಷಗಿರಿ, ಗೌಡ್ರು ಗೋಪಾಲಕೃಷ್ಣ, ದಿಗ್ಗಾವಿ ವೇಣುಗೋಪಾಲಾಚಾರ್ ಸೇರಿದಂತೆ ಹಲವು ಭಕ್ತರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















