ಶಿವಮೊಗ್ಗ : ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳಿಗೆ (ಡಿಸಿಸಿ ಬ್ಯಾಂಕ್ ) ನೀಡಬೇಕಿದ್ದ ಪುನರ್ಧನ ಸೌಲಭ್ಯ ನಿಧಿ ಕಡಿತಗೊಳಿಸಿದ ವಿಚಾರದಲ್ಲಿ ನಬಾರ್ಡ್ ಬ್ಯಾಂಕಿನ ನಿಲುವನ್ನೇ ಸಮರ್ಥಿಸಿಕೊಂಡ ಸಹಕಾರಿ ಭಾರತಿ ಮುಖಂಡರ ಕ್ರಮಕ್ಕೆ ಶಿವಮೊಗ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನಬಾರ್ಡ್‌ಗೂ ನಿಮಗೂ ಸಂಬಂಧವೇನು ಎನ್ನುವುದನ್ನು ಸ್ಪಷ್ಟಪಡಿಸಿ ಎಂದು ಪ್ರಶ್ನಿಸಿದೆ.
ಶಿವಮೊಗ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ವಾಟಗೋಡು ಸುರೇಶ್ ಅವರು ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸಹಕಾರಿ ಭಾರತಿ ಮುಖಂಡರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರಲ್ಲದೆ, ನಬಾರ್ಡ್ ನಿಂದ ಡಿಸಿಸಿ ಬ್ಯಾಂಕದ್ ಗಳಿಗೆ ಬರಬೇಕಿದ್ದ ಪುನಧರ್ನ ಸೌಲಭ್ಯ ನಿಧಿ ಕಡಿತವಾಗಿರುವುದರ ಹಿಂದಿನ ಶಕ್ತಿಗಳು ಯಾರು ಎನ್ನುವುದನ್ನು ನೀವೇ ತೋರಿಸಿಕೊಟ್ಟಿದ್ದೀರಿ. ಆ ಮೂಲಕ ನೀವು ರೈತ ವಿರೋಧಿಗಳು ಎನ್ನುವುದ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರಸಕ್ತ ಸಾಲಿಗೆ ಡಿಸಿಸಿ ಬ್ಯಾಂಕ್ ನಿಂದ ೭೫೦ ಕೋಟಿ ರೂ. ಗಳಿಗೆ ಪುನರ್ಧನ ಸೌಲಭ್ಯಕ್ಕಾಗಿ ನಬಾರ್ಡ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಅಲ್ಲಿಂದ ಕೇವಲ ೧೧೩ ಕೋಟಿ ರೂ. ಮಾತ್ರ ಮಂಜೂರು ಮಾಡಲಾಗಿದೆ. ಅಂದರೆ ಕೇವಲ ಶೇ.೧೦ ರಷ್ಟು ಮಾತ್ರ ಪುನಧರ್ನ ಸೌಲಭ್ಯ ಸಿಕ್ಕಿದೆ. ಈ ಪ್ರಮಾಣದಲ್ಲಿ ಪುನರ್ಧನ ನಿಧಿ ಕಡಿತವಾಗಿರುವುದಕ್ಕೆ ಸಹಕಾರಿ ಭಾರತಿ ಯವರ ಕೈವಾಡ ಇರುವ ಬಗ್ಗೆ ಈಗ ನಮಗೆ ಅನುಮಾನ ಶುರುವಾಗಿದೆ. ಆ ಮೂಲಕ ಇವರು ರೈತರ ವಿರೋಧಿಗಳು ಎನ್ನುವುದು ಸ್ಪಷ್ಟವಾಗಿದೆ ಎಂದು ವಾಟಗೋಡು ಸುರೇಶ್ ಕಿಡಿಕಾರಿದರು.
ಇದೇ ವೇಳೆ ಅವರು ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಡಿಸಿಸಿ ಬ್ಯಾಂಕ್ ನಿಂದ ತಲಾ ೧ ಕೋಟಿ ರೂ ಸಾಲ ನೀಡುವುದಾಗಿ ಅಧ್ಯಕ್ಷರು ಭರವಸೆ ನೀಡಿದ್ದರೆನ್ನಲಾದ ಸಂಗತಿಗೂ ಸ್ಪಷ್ಟನೆ ನೀಡಿದರಲ್ಲದೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್. ಎಂ. ಮಂಜುನಾಥ್ ಗೌಡರು ಕೊಟ್ಟ ಮಾತಿನಂತೆ ನಡೆಯುವವರು. ಅವರ ಇಷ್ಟು ವರ್ಷದ ಸಹಕಾರಿ ಸೇವೆಯಲ್ಲಿ ಎಂದಿಗೂ ಕೊಟ್ಟ ಮಾತು ಮೀರಿದವರಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಅವರು ಈಗಲೂ ಬದ್ದರಾಗಿದ್ದಾರೆ. ಈಗಾಗಲೇ ಆ ಪ್ರಕ್ರಿಯೆಯೂ ಕೂಡ ಶುರುವಾಗಿದೆ. ಈ ವಿಷಯದಲ್ಲಿ ಸಹಕಾರಿ ಭಾರತಿಯ ಮಹೇಶ್ ಹುಲ್ಕಳಿ ಮತ್ತು ಪ್ರಸನ್ನಕುಮಾರ್ ಅವರು ಆಧಾರ ರಹಿತ ಹೇಳಿಕೆ ನೀಡಿದ್ದಾರೆ. ಅವರು ತಕ್ಷಣವೇ ಆರ್. ಎಂ. ಮಂಜುನಾಥ ಗೌಡರಲ್ಲಿ ಕ್ಷೆಮೆ ಕೇಳಬೇಕೆಂದು ಒತ್ತಾಯಿಸಿದರು.
ನಬಾರ್ಡ್ ಹುಟ್ಟಿದ್ದೇ ಕೃಷಿ ವಲಯಕ್ಕೆ ಸಾಲ- ಸೌಲಭ್ಯ ನೀಡುವ ಉದ್ದೇಶದೊಂದಿಗೆ. ಆದರೆ ಈಗ ನಬಾರ್ಡ್ ಕೃಷಿ ವಲಯವನ್ನು ಕಡೆಗಣಿಸುತ್ತಿದೆ. ಮೊದಲು ೩.೫ ರಷ್ಟು ಬಡ್ಡಿ ದರದಲ್ಲಿ ಕೃಷಿ ವಲಯಕ್ಕೆ ನೀಡುತ್ತಿದ್ದ ಸಾಲದ ಮೇಲಿನ ಬಡ್ಡಿ ದರ ಈಗ ಹೆಚ್ಚಾಗಿದೆ. ಕೃಷಿ ಮತ್ತು ವಾಣಿಜ್ಯ ಯಾವುದೇ ವಲಯಕ್ಕೂ ಈಗ ಶೇ. ೮ ರಷ್ಟು ಬಡ್ಡಿದರ ಹೆಚ್ಚಳ ಮಾಡಿದೆ. ಇದು ಇವರಿಗೆ ಕಾಣುತ್ತಿಲ್ಲ. ಕೇವಲ ರಾಜಕೀಯ ಉದ್ದೇಶಕ್ಕಾಗಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅನ್ನುಟಾರ್ಗೆಟ್ ಮಾಡುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆನ್ನುವುದನ್ನು ಅವರೇ ಬಯಲು ಮಾಡಿಕೊಳ್ಳುತ್ತಿದ್ದಾರೆಂದು ದೂರಿದರು.
ಡಿಸಿಸಿ ಉಪಾಧ್ಯಕ್ಷ ಎಸ್. ಕೆ. ಮರಿಯಪ್ಪ ಮಾತನಾಡಿ, ೨೦೨೦ ಕ್ಕೆ ನಿವ್ವಳ ಎನ್.ಪಿ.ಎ ಪ್ರಮಾಣ ಶೇ.೬.೭೧ ಗಳಿತ್ತು. ಅದೀಗ ಅಂದರೆ ೨೦೨೩-೨೪ ಕ್ಕೆ ನಿವ್ವಳ ಎನ್.ಪಿ.ಎ ಪ್ರಮಾಣ ಶೇ.೦.೭೮ ಕ್ಕೆ ಇಳಿಕೆಯಾಗಿ ಗಣನೀಯ ಪ್ರಗತಿ ಸಾಧಿಸಿರುತ್ತದೆ. ಅದೇ ಕಾರಣಕ್ಕೆ ರಾಜ್ಯ ಅಪೆಕ್ಸ್ ಬ್ಯಾಂಕ್ ನಿಂದ ಅತ್ಯುತ್ತಮ ಬ್ಯಾಂಕ್ ಎನ್ನುವ ಹೆಗ್ಗಳಿಕೆಯ ಬಹುಮಾನ ಶಿವಮೊಗ್ಗ ಡಿಸಿಸಿ ಬ್ಯಾಂಕಿಗೆ ಸಿಕ್ಕಿದೆ. ಈ ಬಗ್ಗೆ ಮಾತನಾಡದ ಸಹಕಾರಿ ಭಾರತಿ ಮುಖಂಡರ, ನಬಾರ್ಡ್ ಪರವಾಗಿ ಮಾತನಾಡುತ್ತಾರೆ. ಮೊದಲು ಅವರು ತಮಗೂ ನಬಾರ್ಡ್ ಗೂ ಸಂಬಂಧವೇನು ಎನ್ನುವುದನ್ನು ಸ್ಪಷ್ಟ ಪಡಿಸಲಿ ಎಂದು ಗುಡುಗಿದರು.
ಡಿಸಿಸಿ ಬ್ಯಾಂಕ್ ಸ್ವಾಯತತ್ತೆಯಲ್ಲಿ ನಡೆಯಬೇಕು ಯಾರನ್ನು ಅವಲಂಬಿಸಬಾರದು ಎಂದು ಉಪದೇಶ ನೀಡಿದ್ದಾರೆ. ಅವರಿಗೆ ವಾಸ್ತವ ಗೊತ್ತಿಲ್ಲ, ಡಿಸಿಸಿ ಬ್ಯಾಂಕ್ ರೈತರಿಗೆ ಎಷ್ಟು ಪ್ರಮಾಣದ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ, ಸಹಕಾರಿ ಭಾರತಿ ಅಡಿಯಿರುವ ಮ್ಯಾಮ್ಕೋಸ್ ಸೇರಿ ಇತರೆ ಸಹಕಾರಿ ಸಂಸ್ಥೆಗಳು ಎಷ್ಟು ಬಡ್ಡಿ ದರದಲ್ಲಿ ಸಾಲ ನೀಡುತ್ತವೆ ಎನ್ನುವುದನ್ನು ಅಂಕೆ ಅಂಶಗಳಲ್ಲಿ ದಾಖಲೆ ಬಿಡುಗಡೆ ಮಾಡಲಿ, ನಾವು ಕೂಡ ಅದಕ್ಕೆ ಸಿದ್ದರಿದ್ದೇವೆ ಎಂದು ಸವಾಲು ಹಾಕಿದ ಮರಿಯಪ್ಪ, ಅವರಿಗೆ ಜಿಲ್ಲೆಯ ರೈತರ ಬಗ್ಗೆ ಅಷ್ಟು ಕಾಳಜಿಯಿದ್ದರೆ ಜಿಲ್ಲೆಯ ಯಾವುದಾದರೂ ಎರಡು ತಾಲೂಕುಗಳನ್ನು ದತ್ತು ಪಡೆದು ಅಭಿವೃದ್ದಿ ಪಡಿಸಲಿ ಎಂದು ತಿರುಗೇಟು ಕೊಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಶಿಮುಲ್ ಅಧ್ಯಕ್ಷ ವಿದ್ಯಾಧರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ದುಗ್ಗಪ್ಪ ಗೌಡ, ಸಹಕಾರ ಯೂನಿಯನ್ ಉಪಾಧ್ಯಕ್ಷ ಸಂಜೀವ್, ಸಹಕಾರ ಯೂನಿಯನ್ ನಿರ್ದೇಶಕರಾದ ಷಡಕ್ಷರಿ, ಈಶ್ವರಪ್ಪ, ಹಾಪ್ ಕಾಮ್ಸ್ ಉಪಾಧ್ಯಕ್ಷ ನಾಗೇಶ್ ನಾಯ್ಕ್ ಇದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.




















