ಯಾದಗಿರಿ/ಗುರುಮಠಕಲ್: ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಕುಂದು ಕೊರತೆಗಳ ಸಭೆಯನ್ನುದ್ದೇಶಿಸಿ ಮಾಜಿ ಸಚಿವ ಹಾಗೂ ನಿಜ ಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಮಾತನಾಡಿ ಸಮಸ್ಯೆಗಳನ್ನು ಆಲಿಸಿದರು.
ಗುರುಮಠಕಲ್ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಲವಾರು ದಶಕಗಳಿಂದ ಪಕ್ಷಕ್ಕೆ ತಮ್ಮ ಅಭೂತಪೂರ್ವ ಪರಿಶ್ರಮದಿಂದ ಪಕ್ಷ ಸದೃಢವಾಗಿ ಬೆಳೆಯಲು ಸಹಕರಿಸಿದ್ದಾರೆ, ಕಾರ್ಯಕರ್ತರ ಕುಂದು ಕೊರತೆಗಳ ಬಗೆಹರಿಸಲು ತಿಂಗಳಿಗೆ ಎರಡು ಬಾರಿ ಸಭೆಯನ್ನು ಆಯೋಜಿಸಿ ಮನೋ ಧೈರ್ಯ ಬೆಳೆಸಿ ಪಕ್ಷದ ಸಂಘಟನೆಗೊಳಿಸಿ ಮುಂಬರುವ ಚುನಾವಣೆಯಲ್ಲಿ ಜಯಗಳಿಸುವುದಾಗಿ ಅವರು ಹೇಳಿದರು.
MLC ಮಾಡುವಂತೆ ನಾನು ಕೇಳುವುದಿಲ್ಲ, ಅನ್ಯಮಾರ್ಗದ ದಾರಿ ಹಿಡಿಯುವದಿಲ್ಲ ಚುನಾವಣೆ ಮುಖಾಂತರ ಆಯ್ಕೆಯಾಗಿ ಉನ್ನತ ಸ್ಥಾನಮಾನ ಗಳಿಸುವೆ ಎಂದು ಅವರು ಹೇಳಿದರು.
ಗುರುಮಠಕಲ್ ತಾಲೂಕು ಸೇರಿದಂತೆ ಮತಕ್ಷೇತ್ರದ ಎಲ್ಲಾ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪರಿಶ್ರಮ ಪಡುವೆ ಹಾಗೂ ಅದಕ್ಕೆ ಬೇಕಾಗಿರುವ ಅನುದಾನವನ್ನು ನಾನು ರಾಜ್ಯದ ವರಿಷ್ಠ ನಾಯಕರೊಂದಿಗೆ ಚರ್ಚಿಸಿ ಕಾರ್ಯ ರೂಪದ ಮುಖಾಂತರ ಅಭಿವೃದ್ಧಿಗೆ ನಾಂದಿ ಹಾಡಲು ಮುಂದಾಗಿದ್ದೆ, ಅಪಪ್ರಚಾರದ ಮೂಲಕ ನನ್ನನ್ನು ಚುನಾವಣೆಯಲ್ಲಿ ಸೋಲಿಸಿರಬಹುದು ನಾನು ಚುನಾವಣೆಯಲ್ಲಿ ವಿಜಯಶಾಲಿಯಾಗಿದ್ದರೆ ಸದ್ಯ ಉನ್ನತ ಸ್ಥಾನಮಾನದ ಜೊತೆ ಕ್ಷೇತ್ರದ ಅಭಿವೃದ್ಧಿಯು ಸಹ ಶರವೇಗದಲ್ಲಿ ಮಾಡಲು ಸಹಕಾರಿಯಾಗುತ್ತಿತ್ತು ಆದರೆ ದುರದೃಷ್ಟವಶಾತ್ ಜನ ಕೈಹಿಡಿಯಲಿಲ್ಲ ಎಂದು ಅವರು ವಿಷಾಧ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಸೋತಿರಬಹುದು ಆದರೆ ಜನಸೇವೆ ಮಾಡುವ ಇಚ್ಚಾಶಕ್ತಿ ಕಡಿಮೆಯಾಗಿಲ್ಲ, ಕ್ಷೇತ್ರದ ಜನತೆಯ ಜೊತೆ ಸದಾ ಸಕ್ರಿಯವಾಗಿ ಪಾಲ್ಗೊಂಡು ನಿಮ್ಮ ಸೇವೆ ಮಾಡುತ್ತೇನೆ ಎಂದು ಆಶಾ ನುಡಿ ನುಡಿದರು.
ಇದೇ ವೇಳೆ ಮಾಜಿ ಕಾಡಾ ನಿರ್ದೇಶಕ ವಿಜಯ ಕುಮಾರ್ ನೀರೆಟಿ ನಿರೂಪಣೆ ಮಾಡಿದರು, ಕೃಷ್ಣ ಚೆಪೆಟ್ಲಾ ಬ್ಲಾಕ ಅಧ್ಯಕ್ಷರು, ಶ್ರೀನಿವಾಸ ಗುಮಡಲ್ ಖಜಾಂಚಿ, ಶ್ರೀಮತಿ ರೇಣುಕಾ ಪಡಿಗೆ ಪುರಸಭೆ ಉಪಾಧ್ಯಕ್ಷರು, ಬಾಲಪ್ಪ ನೀರೆಟಿ, ಸಂಜೀವ ಕುಮಾರ್ ಚಂದಾಪುರ, ಲಕ್ಷ್ಮೀರೆಡ್ಡಿ ನಜರಾಪುರ, ಸೇರಿದಂತೆ ಪುರಸಭೆಯ ಸದಸ್ಯರು, ನಾಮ ನಿರ್ದೇಶಕ ಸದಸ್ಯರು,ಪಕ್ಷದ ಮುಖಂಡರುಗಳು ಕಾರ್ಯಕರ್ತರು ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















