
ಯಾದಗಿರಿ/ಗುರುಮಠಕಲ್:
ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬ ತುಂಬಾ ಪ್ರಸಿದ್ಧವಾದ ಹಬ್ಬ, ಮಣ್ಣಿನಿಂದ ಎತ್ತುಗಳನ್ನು ಕೈ ಯಿಂದ ತಯಾರಿಸಿ ಪೂಜೆ ಮಾಡುವುದು ವಾಡಿಕೆ.
ನಮ್ಮ ಹಿರಿಯರಿಂದ ಪಾರಂಪರಿಕವಾಗಿ ಆಚರಿಸಲ್ಪಡುವ ವಿಶೇಷ ಆಚರಣೆ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಮಣ್ಣೆತ್ತಿನ ಅಮಾವಾಸ್ಯೆ.
ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ಯ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಅಂಬಿಗರ ಚೌಡಯ್ಯ ವೃತ್ತದ ಹತ್ತಿರ ಮಣ್ಣಿನ ಎತ್ತುಗಳ ಮಾರಾಟಗಾರರಾದ ಗುರುನಾಥ ಕುಂಬಾರ ಮಾತನಾಡಿ ಕೆರೆಯಿಂದ ತಂದ ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಮಾರುವದು ನಮ್ಮ ಹಿರಿಯರಿಂದ ನಾವು ಮಾಡುತ್ತ ಬಂದಿದ್ದೇವೆ, ಈಗ ಕಾಲಕ್ಕೆ ತಕ್ಕಂತೆ ಬಣ್ಣ ಬಣ್ಣದ ಪಿಓಪಿ ಎತ್ತಿಗಳು ಮಾರುಕಟ್ಟೆಗೆ ಬಂದಿವೆ, ಎತ್ತುಗಳಿಗೂ ನಮಗೂ ಅವಿನಾಭಾವ ಸಂಬಂಧವಿದೆ. ಜನ ಮಣ್ಣಿನ ಎತ್ತುಗಳ ಖರೀದಿಗೆ ಹೆಚ್ಚು ಮುಖ ಮಾಡುತ್ತಿಲ್ಲ, ಮಡಿಕೆ, ಮಣ್ಣಿನ ಎತ್ತುಗಳು, ಮಣ್ಣಿನ ಪಾತ್ರೆಗಳ ಮಾರಾಟದ ಮೇಲೆ ಕುಂಬಾರ ವೃತ್ತಿಯ ಜನರ ಜೀವನ ಅವಲಂಬನೆಯಾಗಿದ್ದು, ಅಮವಾಸ್ಯೆಗೆ ಇನ್ನೂ ಎರಡು ದಿನ ಇದ್ದು,ಮಣ್ಣಿನ ಎತ್ತುಗಳ ಮಾರಾಟ ಆಗುವ ಭರವಸೆ ಇದೆ ಎಂದು ಹೇಳಿದರು.
ಮಣ್ಣಿನ ಎತ್ತಿನ ಮೂರ್ತಿಗಳನ್ನು ಪೂಜಿಸಿದರೆ ಸಕಾಲದಲ್ಲಿ ಮಳೆ-ಬೆಳೆ ಆಗುತ್ತದೆ ಎನ್ನುವ ನಂಬಿಕೆ ರೈತರದ್ದು, ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ರೈತಾಪಿ ಜನರು ಪೂಜಿಸಿ ಸಂಭ್ರಮಪಡುವ ಈ ಹಬ್ಬ ಎಲ್ಲರಿಗೂ ಸಂಭ್ರಮ ತರಲಿ ಎಂದು ಆಶಿಸುವೆವು.
ವರದಿ: ಜಗದೀಶ್ ಕುಮಾರ್ ಭೂಮಾ



















