ಹಾಲಪ್ಪ ಆಚಾರ್ ಅವಧಿಯ ಕೆಲಸ ನಮ್ಮ ಕೆಲಸವೆಂದ ರಾಯರಡ್ಡಿ ಹೇಳಿಕೆಗೆ ಟಾಂಗ್.
ಕೊಪ್ಪಳ/ಕುಕನೂರು : ಬಿಜೆಪಿ ಸರಕಾರದ ಕೆಲಸಗಳನ್ನು ನಮ್ಮ ಸರಕಾರದ ಕೆಲಸವೆಂದು ಬಣ್ಣ ಬಳಿಯುವುದನ್ನು ರಾಯರೆಡ್ಡಿಯವರು ಕೈ ಬೀಡಬೇಕು ಎಂದು ಶಿವಕುಮಾರ ನಾಗಲಾಪೂರಮಠ ಹೇಳಿದರು.
ಸೋಮವಾರದಂದು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜನ ಏನು ಹುಚ್ಚರಿಲ್ಲಾ, ಜನ ಈಗ ಪ್ರಜ್ಞಾವಂತರಿದ್ದಾರೆ ಎನ್ನುವದನ್ನು ಮರೆತು ರಾಯರಡ್ಡಿಯವರ ಮಾತನಾಡಿದಂತಿದೆ. ಅವರು ಕ್ಷೇತ್ರದಲ್ಲಿ ಮಾಡಿರುವ ಎಲ್ಲಾ ಅಭಿವೃದ್ದಿ ಕೆಲಸಗಳು ನಮ್ಮ ಸರಕಾರದ ಕೆಲಸ ಎಂದು ಬಿಂಬಿಸುತ್ತಾ ಸಾಗಿದ್ದಾರೆ.
ಈ ಭಾಗಕ್ಕೆ ರೈಲ್ವೇಯನ್ನು ತಂದಿದ್ದು ನಾವೇ ನಮ್ಮ ಸಿದ್ರಾಮಯ್ಯ ನೇತೃತ್ವದ ಸರಕಾರದಿಂದ ಇದು ಸಾಧ್ಯವಾಗಿದೆ ಎಂದು ಹೇಳುತಿದ್ದಾರೆ. ಈ ಭಾಗದ ರೈಲ್ವೇ ಲೈನ್ ನಿಜಾಮರ ಕಾಲದಲ್ಲಿಯೇ ಸರ್ವೆ ಆಗಿದೆ ಎನ್ನುವುದು ಹೇಳಲು ಮರೆತಂತಿದೆ ಎಂದರು.
ಶಾಸಕ ಬಸವರಾಜ ರಾಯರೆಡ್ಡಿ ರವರು ಕೇಂದ್ರದ ಅನುದಾನದ ಬಗ್ಗೆ ಹೇಳದೇ ಕೇವಲ ರಾಜ್ಯ ಸರ್ಕಾರ ಮತ್ತು ತಾವೇ ಮಾಡಿದ್ದು ಎಂದು ಹೇಳುತ್ತಾ ಸಾಗಿದ್ದಾರೆ. ಗದಗ – ವಾಡಿ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಶೇ.50-50 ಅನುಪಾತದಲ್ಲಿ ಅನುದಾನ ಒದಗಿಸಿದೆ ಎನ್ನುವುದು ಹೇಳಬೇಕಿತ್ತು.
ನೀವು ಅಭಿವೃದ್ಧಿ ಮಾಡಲು ಸಾಕಷ್ಟು ವಿಷಯಗಳಿವೆ. ಅದನ್ನು ಬಿಟ್ಟು ಯಾರೋ ಮಾಡಿರುವುದನ್ನು ನಾನು ಮಾಡಿದೆ ಎಂದು ಹೇಳುತ್ತಾ ಬಣ್ಣ ಲೇಪನ ಮಾಡುವುದನ್ನು ಕೈಬಿಡಿ ಎಂದರು.
ಯಲಬುರ್ಗಾ ತಾಲೂಕಿನಲ್ಲಿ ಹೆಚ್ಚಿನ ಅವಧಿಯನ್ನು ರಾಯರಡ್ಡಿಯವರು ಕಳೆದಿದ್ದು, ಕುಕನೂರ ಮಟ್ಟಿಗೆ ಹೇಳಬೇಕೆಂದರೆ ಒಂದು ಸರ್ಕಾರಿ ಪಿಯು ಕಾಲೇಜು ಮಾಡಲು ಆಗಿದ್ದಿಲ್ಲ. ಅದನ್ನು ತಂದಿರುವುದು ಬಿಜೆಪಿಯ ಮಾಜಿ ಸಚಿವ ಹಾಲಪ್ಪ ಆಚಾರ್, ಅವರ ಅವಧಿಯಲ್ಲಿ ಆಗಿದೆ ಎಂದರು.
ಪಟ್ಟಣವು ಬೃಹದಾಕಾರವಾಗಿ ಬೆಳೆದಿದ್ದು ಇಲ್ಲಿಗೆ ಒಂದು ಸುಸಜ್ಜಿತವಾದ ಕ್ರೀಡಾಂಗಣವಿಲ್ಲ, ಯಾವುದೇ ಸರಕಾರಿ ಹಾಗೂ ಖಾಸಗಿ ಕಾರ್ಯಕ್ರಮ ಮಾಡಬೇಕೆಂದರೇ ಸ್ಥಳೀಯ ಶಾಲೆಗಳ ಆವರಣ ಇಲ್ಲವೇ ಪಟ್ಟಣದ ಎಪಿಎಂಸಿ ಆವರಣವನ್ನು ಅವಲಂಬಿಸಬೇಕಿದೆ. ಇನ್ನುಳಿದಂತೆ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಕ್ರೀಡಾಕೂಟ, ಯೋಗ, ವ್ಯಾಯಾಮಕ್ಕೆ, ವಾಯು ವಿಹಾರಕ್ಕೆ ಒಂದು ಕ್ರೀಡಾಂಗಣ ಅವಶ್ಯವಾಗಿದ್ದು ಶಾಸಕರು ತಮ್ಮ ಅವಧಿಯಲ್ಲಿ ಯುವಕರಿಗೆ ಪ್ರೋತ್ಸಾಹದಾಯಕವಾಗಿ ಕ್ರೀಡಾಂಗಣ ಮಾಡಿಕೊಡಿ ಎಂದು ಹೇಳಿದರು.
ಹಾಲಪ್ಪ ಆಚಾರ್ ಅವರ ಅವಧಿಯಲ್ಲಿ ಕ್ರೀಡಾಂಗಣ ಮತ್ತು ತಾಲೂಕು ಕಛೇರಿ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ನಡೆದಿತ್ತು. ದುರದೃಷ್ಟವಶಾತ್ ಅವರ ಅಧಿಕಾರಾವಧಿ ಮುಗಿದುದ್ದರಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಇದ್ದ ಭೂಮಿಯನ್ನು ಅಭಿವೃದ್ಧಿ ಪಡಿಸಲಾರದೆ ಶಾಸಕ ರಾಯರೆಡ್ಡಿಯವರು ಯಾವುದೋ ಮಠದ ಜಾಗಕ್ಕೆ ಬೆನ್ನು ಹತ್ತಿದ್ದನ್ನು ನಾವು ನೋಡಿದ್ದೇವೆ ಎಂದು ಆರೋಪಿಸಿದರು.
ಶಿರೂರ, ಮುತ್ತಾಳ, ವೀರಾಪೂರ, ಮುದ್ಲಾಪೂರ ಗ್ರಾಮದ ಜನರ ಮನೆ ಬಾಗಿಲಿಗೆ ಸವಕಳಿ ಪರಿಹಾರದ ಹಣವನ್ನು ತಲುಪಿಸಿದ್ದು ಹಾಲಪ್ಪ ಆಚಾರ್ ರವರ ನೇತೃತ್ವದ ಬಿಜೆಪಿ ಸರಕಾರ ಎನ್ನುವುದನ್ನು ಶಾಸಕರು ಮನಗಾಣಬೇಕಿದೆ ಎಂದರು.
ಮೊನ್ನೆ ಜರುಗಿದ ರೈಲ್ವೇ ಮಾಸಿಕ ಪ್ರತ್ಯಾಲೋಚನ ಸಭೆ ಹಾಗೂ ಹೈ ಮಾಸ್ಟ್ ವಿದ್ಯುತ್ ದೀಪಗಳ ಉಧ್ಘಾಟನಾ ಕಾರ್ಯಕ್ರಮ ಸರಕಾರದ ಕಾರ್ಯಕ್ರಮವಾಗಿದ್ದು ವೇದಿಕೆಯಲ್ಲಿ ಜನಪ್ರತಿನಿಧಿಗಳಾಗಲಿ, ಸರಕಾರಿ ಅಧಿಕಾರಿಗಳಿಗಾಗಲಿ ಕುರ್ಚಿ ಹಾಕಿ ಕುಳ್ಳಿರಿಸಿ ಕಾರ್ಯಕ್ರಮದ ವಿವರಣೆ ಮಾಡಬಹುದಿತ್ತು, ಆದರೆ ವೇದಿಕೆಯ ಮೇಲೆ ಪಟ್ಟಣ ಪಂಚಾಯತಿ ಯಾವೊಬ್ಬ ಜನ ಪ್ರತಿನಿಧಿಗಳನ್ನು ಕೂಡಿಸದೇ ಕಾರ್ಯಕ್ರಮದ ಕುರಿತು ವಿವರಣೆ ನೀಡಿದ್ದು ಸದಸ್ಯರಿಗೆ ಅಗೌರವ ತೋರಿದ್ದು, ಅವರನ್ನು ಮುಜುಗರಕ್ಕೀಡು ಮಾಡಿದಂತಾಯಿತು ಇದು ಒಬ್ಬ ಹಿರಿಯ ಶಾಸಕ, ಸಚಿವರಿಗೆ ಶೋಭೆ ತರುವಂತದಲ್ಲ ಎಂದರು.
- ಕರುನಾಡ ಕಂದ



















