
ವಿಚಾರ ಶಕ್ತಿಯು ಪ್ರತಿಯೊಂದು ಕೆಲಸಗಳನ್ನು ಹಗುರಗೊಳಿಸುತ್ತದೆ. ಇಂತಹ ವಿಚಾರ ಶಕ್ತಿಯು ಪತ್ರಿಕೋದ್ಯಮ ವಿಷಯ ಅಧ್ಯಯನ ಮಾಡುವುದರಿಂದ ಬರುತ್ತದೆ ಅಂತ ಹೇಳಿದರೆ ತಪ್ಪಲ್ಲ ಅಂತ ಅನಿಸುತ್ತದೆ. ಭಾರತದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಪತ್ರಿಕೋದ್ಯಮವು ಸಮಾಜದ ಕಣ್ಣು ಮತ್ತು ಕಿವಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕೋದ್ಯಮದ ಇತಿಹಾಸವನ್ನು ವಿಶ್ಲೇಷಿಸಿದರೆ, ಭಾರತದಲ್ಲಿ ಪ್ರಾರಂಭಿಕ ಪತ್ರಿಕೆಗಳು ಬ್ರಿಟಿಷರ ಕಾಲದಲ್ಲೇ ಜನರ ರಾಜಕೀಯ ಅರಿವನ್ನು ಹೆಚ್ಚಿಸಲು ಮತ್ತು ಸಾಮಾಜಿಕ ಬದಲಾವಣೆಗಾಗಿ ಉದಯವಾಗಿದವು. 1780ರಲ್ಲಿ ಜೇಮ್ಸ್ ಹಿಕ್ಕಿ ಅವರ “ಬೆಂಗಾಲ್ ಗೆಜೆಟ್” ಭಾರತದ ಪ್ರಥಮ ಮುದ್ರಿತ ಪತ್ರಿಕೆಯಾಗಿದೆ. ಹರ್ಮನ್ ಮೊಗ್ಲಿಂಗ್ ಪ್ರಾರಂಭ ಮಾಡಿದ ಮಂಗಳೂರು ಸಮಾಚಾರ ಕನ್ನಡದ ಪ್ರಥಮ ಪತ್ರಿಕೆ 1843 ಜುಲೈ 1 ರಂದು ಪ್ರಾರಂಭ ಆಯಿತು. ಇದರಿಂದ ಭಾರತೀಯ ಮತ್ತು ಕನ್ನಡ ಪತ್ರಿಕೋದ್ಯಮಕ್ಕೆ ಆಧಾರಶಿಲೆ ಇಡಲಾಯಿತು. ನಂತರದ ದಿನಗಳಲ್ಲಿ ಬಾಲ ಗಂಗಾಧರ ತಿಲಕ, ಮಹಾತ್ಮಾ ಗಾಂಧೀಜಿ, ಡಾ. ಬಿ. ಆರ್. ಅಂಬೇಡ್ಕರ್, ಡಿವಿಜಿ, ಮೋಹರೆ ಹನುಮಂತರಾಯ್, ನಂಜನಗೂಡು ತಿರುಮಲಾಂಬ ಸೇರಿದಂತೆ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಾಹಿತಿಗಳು ಪತ್ರಿಕೆಗಳನ್ನು ಸಾಮಾಜಿಕ ಚೇತನ ಮೂಡಿಸಲು ಬಳಸಿದರು. ಈ ಪರಂಪರೆಯಿಂದಲೇ ಪತ್ರಿಕೋದ್ಯಮವು ಸಮಾಜದ ನಾಲ್ಕನೇ ಅಂಗವಾಗಿ ಪರಿಗಣಿತವಾಗಿದೆ.
ಪತ್ರಿಕೋದ್ಯಮ ಎಂಬ ಪದ ಕೇಳಿದಾಗ ನಮಗೆ ನೆನಪಾಗುವುದು ಸುದ್ದಿಪತ್ರಿಕೆ, ನ್ಯೂಸ್ ಚಾನೆಲ್ ಅಥವಾ ಪತ್ರಕರ್ತರು, ವರದಿಗಾರರು. ಆದರೆ ಪತ್ರಿಕೋದ್ಯಮ ಎನ್ನುವುದು ಕೇವಲ ಸುದ್ದಿ ಬರೆಯುವ ಕಲೆ ಅಲ್ಲ, ಅದು ಒಂದು ಸಾಮಾಜಿಕ ಜವಾಬ್ದಾರಿಯುತ ಕ್ಷೇತ್ರ.
ಇದು ಜನಸಾಮಾನ್ಯರ ಧ್ವನಿಯಾಗಿ, ಸಮಾಜದಲ್ಲಿ ನೈತಿಕತೆ ಮತ್ತು ನಿಷ್ಠೆಯ ಬೆಳಕನ್ನು ಹಬ್ಬುವ ಕಾರ್ಯಮಾರ್ಗವಾಗಿದೆ. ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಶಿಕ್ಷಣವು ಯುವಜನತೆಯ ಪ್ರೀತಿಯ ಮತ್ತು ಇಷ್ಟವಾದ ವಿಷಯವಾಗಿದೆ ಎಂದರೆ ಅದು ನಿಖರವಾದ ಕಾರಣಗಳಿಂದ ಇಂದಿನ ತಂತ್ರಜ್ಞಾನ ಮತ್ತು ಜ್ಞಾನಯುಗದಲ್ಲಿ ಮಾಧ್ಯಮಗಳ ಪಾತ್ರ ಅತೀ ಮಹತ್ವಪೂರ್ಣವಾಗಿದೆ. ಮಾಧ್ಯಮಗಳು ಯಾವುದಾದರೂ ಒಂದು ವಿಷಯದ ಕುರಿತು ಸಮಾಜದಲ್ಲಿ ಜನಭಿಪ್ರಾಯ ರೂಪಿಸುವಲ್ಲಿ ಮಹತ್ವದ ಪಾತ್ರ ರೂಪಿಸುತ್ತಿದೆ. ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು, ಬದಲಾವಣೆಗಳು ಹಾಗೂ ಸತ್ಯಾಂಶಗಳನ್ನು ಜನರ ಮುಂದಿಡುವಲ್ಲಿ ಪತ್ರಿಕೋದ್ಯಮ ಕ್ಷೇತ್ರ ಅಗ್ರಗಣ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೋದ್ಯಮ ಶಿಕ್ಷಣವು ಯುವಜನತೆಯ ಭವಿಷ್ಯ ಕಟ್ಟುವಲ್ಲಿ ಹೊಸ ಆಯ್ಕೆ ಆಗಿದೆ. ಇಷ್ಟಲ್ಲದೇ ಸತ್ಯದ ಅಭಿವ್ಯಕ್ತಿಗೆ ಆಸಕ್ತಿ ಇರುವವರಿಗಾಗಿ ಪತ್ರಿಕೋದ್ಯಮ ಕ್ಷೇತ್ರ ಮತ್ತು ವಿಷಯವು ಉತ್ತಮ ವೇದಿಕೆಯಾಗಿದೆ.
ಪತ್ರಿಕೋದ್ಯಮ ವಿದ್ಯಾರ್ಥಿಗಳು ಪದವಿಯ ಪಠ್ಯಕ್ರಮವು ಸಮಾನವಾಗಿ ಥೇರಿ ತರಗತಿಗಳು ಮತ್ತು ಪ್ರಾಯೋಗಿಕ ತರಬೇತಿಯನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳು ಸುದ್ದಿ, ಲೇಖನ, ವರದಿ ತಯಾರಿಕೆ, ಸಂಪಾದನೆ, ಸಂದರ್ಶನ ತಂತ್ರಗಳು, ಪುಟ ವಿನ್ಯಾಸ, ಮಾಧ್ಯಮ ನೈತಿಕತೆ ಮತ್ತು ಮಾಧ್ಯಮ ತಂತ್ರಜ್ಞಾನಗಳಂತಹ ವಿಷಯಗಳನ್ನು ಅಧ್ಯಯನ ಮಾಡುತ್ತಾರೆ. ಈ ಪಠ್ಯಕ್ರಮದಲ್ಲಿ ಕೇವಲ ಪುಸ್ತಕದ ಜ್ಞಾನವಷ್ಟೇ ಅಲ್ಲದೆ, ಸುದ್ದಿ ಸಂಸ್ಥೆಗಳೊಂದಿಗೆ ಇಂಟರ್ನ್‌ಶಿಪ್, ಪ್ರಾಜೆಕ್ಟ್‌ಗಳ ಮೂಲಕ ನೈಜ ಅನುಭವ ಕೂಡಾ ಪಡೆಯುವ ಅವಕಾಶ ಲಭ್ಯವಿರುತ್ತದೆ.
ಇಂದು ಪತ್ರಿಕೋದ್ಯಮ ಪಠ್ಯಕ್ರಮವು ಪದವಿ ಕಾಲೇಜುಗಳಲ್ಲಿ ಬಿ.ಎ ಪತ್ರಿಕೋದ್ಯಮ, ವಿಶ್ವ ವಿದ್ಯಾನಿಲಯಗಳಲ್ಲಿ ಎಂಎ ಪತ್ರಿಕೋದ್ಯಮ, ಡಿಪ್ಲೊಮಾ ಮತ್ತು ಪ್ರಮಾಣಪತ್ರ ಕೋರ್ಸ್‌ಗಳ ರೂಪದಲ್ಲಿ ದೊರೆಯುತ್ತಿದೆ. ಪಠ್ಯಕ್ರಮದಲ್ಲಿ ಸುದ್ದಿಯ ಶಿಸ್ತು, ಲೇಖನ ಕೌಶಲ್ಯ, ಸಂಪಾದನೆ, ದೂರದರ್ಶನ ಮತ್ತು ರೇಡಿಯೋ ಪತ್ರಿಕೋದ್ಯಮ, ಡಿಜಿಟಲ್ ಮಾಧ್ಯಮ, ಫೋಟೋ ಪತ್ರಿಕೋದ್ಯಮ, ಜಾಹೀರಾತು, ಸಂವಹನ ವಿಧಗಳು, ಮಾಧ್ಯಮ ನೈತಿಕತೆ ಮತ್ತು ಸಂಶೋಧನಾ ವಿಧಾನಗಳ ಕುರಿತು ಅಧ್ಯಯನ ಮಾಡಲಾಗುತ್ತದೆ. ಇವುಗಳ ಜೊತೆಗೆ ವಿದ್ಯಾರ್ಥಿಗಳು ಫೀಲ್ಡ್ ವರದಿಗಳು, ಇಂಟರ್ನ್‌ಶಿಪ್‌ಗಳು ಮತ್ತು ನೈಜ ಮಾಧ್ಯಮ ಅನುಭವಗಳ ಮೂಲಕ ವೃತ್ತಿಪರವಾಗಿ ಬೆಳೆದು ಹೊರಹೊಮ್ಮುತ್ತಾರೆ.
ಪತ್ರಿಕೋದ್ಯಮ ಕೋರ್ಸ್ ಮುಗಿಸಿದ ಬಳಿಕ ವಿದ್ಯಾರ್ಥಿಗಳಿಗೆ ವ್ಯಾಪಕ ಉದ್ಯೋಗಾವಕಾಶಗಳು ಲಭ್ಯವಿವೆ. ದಿನಪತ್ರಿಕೆಗಳು, ಟಿವಿ ಚಾನೆಲ್‌ಗಳು, ಆನ್‌ಲೈನ್ ಮಾಧ್ಯಮಗಳು, ರೇಡಿಯೋ ಕೇಂದ್ರಗಳಲ್ಲಿ ರಿಪೋರ್ಟರ್, ಸಬ್ ಎಡಿಟರ್, ಕಾಪಿ ಎಡಿಟರ್, ನ್ಯೂಸ್ ರೀಡರ್, ಕಂಟೆಂಟ್ ರೈಟರ್, ಟಿ ವಿ ಆಂಕರ್, ವರದಿಗಾರರು ವಿವಿಧ ಹುದ್ದೆಗಳಿವೆ. ಸಿನಿಮಾ ಮತ್ತು ಜಾಹೀರಾತು ಸಂಸ್ಥೆಗಳಲ್ಲಿ ಉದ್ಯೋಗಗಳು ಸಿಗುತ್ತವೆ.
ಕಂಪನಿಗಳಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಹುದ್ದೆಗಳಿರುತ್ತವೆ. ಸಿನಿಮಾ ಮತ್ತು ಜಾಹೀರಾತು ತಯಾರು ಮಾಡುವ ಸಂಸ್ಥೆಗಳಲ್ಲಿ ಉದ್ಯೋಗಗಳು ಸಿಗುತ್ತವೆ. ಇದಲ್ಲದೇ ರಾಜಕೀಯ ನಾಯಕರ, ಆಟಗಾರರ ಮತ್ತು ಉದ್ಯಮಿಪತಿಗಳ ಸಾಮಾಜಿಕ ಮಾಧ್ಯಮ ನಿರ್ವಹಣೆ ಮಾಡುವ ಹುದ್ದೆಗಳು ದೊರೆಯುತ್ತವೆ. ಸರಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯಲ್ಲೂ ಕಾರ್ಯ ನಿರ್ವಹಿಸಬಹುದಾಗಿದೆ.
ಪತ್ರಿಕೋದ್ಯಮ ಪದವಿಯ ಉಪಯೋಗಗಳು ಬಹುಮುಖವಾಗಿವೆ. ವಿದ್ಯಾರ್ಥಿಗಳು ಮಾತ್ರವಲ್ಲದೆ ಸಮಾಜವೂ ಇದರಿಂದ ಲಾಭ ಪಡೆಯುತ್ತದೆ. ಈ ಪದವಿಯಿಂದ ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗ ಸಾಧ್ಯತೆಗಳು ಹೆಚ್ಚಿವೆ. ನ್ಯೂಸ್ ರಿಪೋರ್ಟರ್, ಟಿವಿ ಆಂಕರ್, ಕಂಟೆಂಟ್ ಕ್ರಿಯೇಟರ್, ಫೀಚರ್ ರೈಟರ್, ಪಬ್ಲಿಕ್ ರಿಲೇಷನ್ಸ್ ಅಧಿಕಾರಿ, ಸಾಮಾಜಿಕ ಮಾಧ್ಯಮ ನಿರ್ವಹಣೆ, ಮಾಧ್ಯಮ ವಿಶ್ಲೇಷಕ ಇತ್ಯಾದಿ ಹುದ್ದೆಗಳಿಗೆ ಅವಕಾಶಗಳು ಇವೆ. ಹಾಗೆಯೇ ಪತ್ರಿಕೋದ್ಯಮ ಪದವಿಧರರು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರದ ಮಾಹಿತಿ ಇಲಾಖೆಗಳಲ್ಲಿಯೂ ಸ್ಥಾನ ಪಡೆದು ಸಮಾಜಸೇವೆ ಮಾಡಬಹುದು.
ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕೋದ್ಯಮ ಪದವಿ ಪಡೆದವರು ತಮ್ಮದೇ ಯೂಟ್ಯೂಬ್ ಚಾನೆಲ್, ಪಾಡ್‌ಕಾಸ್ಟ್, ವೆಬ್‌ಸೈಟ್ ಆರಂಭಿಸಿ, ಸ್ವತಂತ್ರ ಮಾಧ್ಯಮದ ಆವಿಷ್ಕಾರರಾಗಬಹುದು. ಪತ್ರಿಕೋದ್ಯಮವು ಬರವಣಿಗೆಯ ಕೌಶಲ್ಯ, ಸಂವಹನ ನೈಪುಣ್ಯ, ವಿಶ್ಲೇಷಣಾತ್ಮಕ ಚಿಂತನ, ಸಮಾಲೋಚನೆಯ ದೃಷ್ಟಿಕೋನ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ರೂಪಿಸುವಲ್ಲಿಯೂ ಸಹಾಯಕವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಪ್ರಭಾವ ಹೆಚ್ಚಿದಂತೆ, ಡಿಜಿಟಲ್ ಪತ್ರಿಕೋದ್ಯಮದ ಅಗತ್ಯವೂ ಏರಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಶಿಕ್ಷಣ ಪಡೆದವರು ಇದರ ಜೊತೆಗೆ ತಂತ್ರಜ್ಞಾನ ತಿಳಿದವರು ತಮ್ಮದೇ ಡಿಜಿಟಲ್ ಮಾಧ್ಯಮ ಚಾನೆಲ್, ಯೂಟ್ಯೂಬ್ ಚಾನಲ್ ಆರಂಭಿಸಬಹುದು.
ಪತ್ರಿಕೋದ್ಯಮವು ಯುವಜನತೆಯ ಕ್ರಿಯಾಶೀಲತೆಯನ್ನು ಉತ್ತೇಜಿಸುವಂತೆ, ಅವರಲ್ಲಿ ಸಾಮಾಜಿಕ ಜವಾಬ್ದಾರಿಯ ಭಾವನೆ ಮೂಡಿಸುವಂತೆ ಮಾಡುತ್ತದೆ.
ಇದು ಕೇವಲ ಉದ್ಯೋಗವಲ್ಲದೆ ಸಮಾಜ ಸೇವೆಯ ಭಾಗವಾಗಿದೆ. ಪತ್ರಿಕೋದ್ಯಮದಿಂದ ವ್ಯಕ್ತಿಗತ ಬೆಳವಣಿಗೆ ಮಾತ್ರವಲ್ಲದೆ, ಸಮಾಜದ ಸಮೂಹ ಅರಿವು, ರಾಜಕೀಯ ಜ್ಞಾನ, ಭಾಷಾ ನೈಪುಣ್ಯ ಮತ್ತು ನಿರ್ಧಾರಾತ್ಮಕ ಚಿಂತನೆಗಳಿಗೂ ಉತ್ತೇಜನ ಸಿಗುತ್ತದೆ. ಸಮಾಜದ ಚತುಷ್ಪಾದಿಗಳಲ್ಲಿ ಏನಾಗುತ್ತಿದೆ ಎಂಬುದನ್ನು ಅರಿದು ಜನತೆಗೆ ತಿಳಿಸುವ ಜವಾಬ್ದಾರಿಯನ್ನು ಹೊತ್ತ ಸಂಸ್ಥೆಯಾದ ಪತ್ರಿಕೋದ್ಯಮವು ಸಂವಿಧಾನದ ನಾಲ್ಕನೇ ಸ್ತಂಭವಾಗುವುದರ ಜೊತೆಗೆ ಪ್ರಜಾಪ್ರಭುತ್ವದ ಕಾವಲು ನಾಯಿಯಾಗಿದೆ.
ಹೀಗಾಗಿ, ಸಮಾಜದ ಬಗ್ಗೆ ಕಾಳಜಿ ಹೊಂದಿರುವ, ಕ್ರಿಯಾಶೀಲ, ಬರವಣಿಗೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ವಿಷಯವು ಉತ್ತಮ ಆಯ್ಕೆಯಾಗಿರುತ್ತದೆ. ಪಠ್ಯಕ್ರಮದ ಮೂಲಕ ವ್ಯಕ್ತಿಯ ವ್ಯಕ್ತಿತ್ವ, ಸಂವಹನ ಶೈಲಿ, ವಿಶ್ಲೇಷಣಾ ಸಾಮರ್ಥ್ಯ ಮುಂತಾದವುಗಳ ಬೆಳವಣಿಗೆಗಾಗುತ್ತದೆ. ಆದ್ದರಿಂದ ಪತ್ರಿಕೋದ್ಯಮ ವಿದ್ಯಾರ್ಥಿಯೊಬ್ಬನು ತನ್ನ ಭವಿಷ್ಯವನ್ನೂ ಕಟ್ಟಿಕೊಳ್ಳುತ್ತಾನೆ, ಸಮಾಜದ ಸುಧಾರಣೆಯಲ್ಲೂ ಪ್ರಮುಖ ಪಾತ್ರವಹಿಸುತ್ತಾನೆ.
ಪತ್ರಿಕೋದ್ಯಮ ಶಿಕ್ಷಣವು ವ್ಯಕ್ತಿಯ ಅಭಿವ್ಯಕ್ತಿಗೆ ಪೂರಕವಾಗಿದ್ದು, ನೈತಿಕ ಬದ್ಧತೆಯ ಮೂಲಕ ಜನರ ನಂಬಿಕೆಗೆ ಪಾತ್ರವಾಗುವ ಪತ್ರಕರ್ತರನ್ನು, ಮಾಧ್ಯಮ ವ್ಯಕ್ತಿಗಳನ್ನು, ವ್ಯಕ್ತಿತ್ವವನ್ನು ರೂಪಿಸುತ್ತದೆ. ಯುವಕರು ಈ ಕ್ಷೇತ್ರದಲ್ಲಿ ತೊಡಗಿಕೊಳ್ಳುವುದರಿಂದ ಯುವ ಜನತೆಗೆ ಮಾತ್ರವಲ್ಲದೆ, ಸಮಾಜವೂ ಒಳಿತಾಗುತ್ತದೆ. ಆದುದರಿಂದ, ಸಮಾಜದ ಬಗ್ಗೆ ಆಸಕ್ತಿ, ನೈತಿಕ ದೃಷ್ಟಿಕೋನ, ಸೇವಾಭಾವನೆ ಮತ್ತು ಬರವಣಿಗೆಯ ಹವ್ಯಾಸ ಇರುವ ಯುವಜನತೆ ಪತ್ರಿಕೋದ್ಯಮ ವಿಷಯವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುವುದು ಸೂಕ್ತವಾಗಿದೆ.
-ಡಾ. ನರಸಿಂಹ ಗುಂಜಹಳ್ಳಿ, ಸಹಾಯಕ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕೊಪ್ಪಳ
-ಶ್ರೀ ಮನೋಹರ್ ಎನ್, ಸಹಾಯಕ ಪ್ರಾಧ್ಯಾಪಕರು, ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಾಸನ.
- ಕರುನಾಡ ಕಂದ



















