ವಿಜಯನಗರ/ ಕೊಟ್ಟೂರು ದಿ. 10.07.2025 : ತಾಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ “ಶಿವಶರಣ ಹಡಪದ ಹಪ್ಪಣ್ಣ” ನವರ ಜಯಂತಿ ಆಚರಿಸಲಾಯಿತು. ತಹಶೀಲ್ದಾರರಾದ ಅಮರೇಶ ಜಿ ಕೆ ಇವರು ಹಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಹಡಪದ ಹಪ್ಪಣ್ಣನವರು ಹನ್ನೆರಡನೇ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಕಾರರಲ್ಲಿ ಒಬ್ಬರು, ಬಸವಣ್ಣನವರ ಬಲಗೈ ಬಂಟರಾಗಿದ್ದ ಇವರು ಅನುಭವ ಮಂಟಪದಲ್ಲಿ ಬಸವಣ್ಣನವರ ಪ್ರಧಾನ ಕಾರ್ಯದರ್ಶಿಯಾಗಿ ಆಪ್ತರಾಗಿದ್ದರು. ಇವರು ಸಹ 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ್ದರು. ಇವರ ಪತ್ನಿ ಲಿಂಗಮ್ಮನೂ ಸಹ ಪತಿಯ ಜೊತೆಗೂಡಿ ವಚನಗಳನ್ನು ರಚಿಸಿದ್ದಾರೆ. ಮೂಢನಂಬಿಕೆಯ ದಾಸರಾದ ಜನರನ್ನು ಅಪ್ಪಣ್ಣನವರು ಎಚ್ಚರಿಸಿದ್ದಾರೆ. ಅಪ್ಪಣ್ಣನವರ ವಚನಗಳು ದಾರಿತಪ್ಪಿದ ಸಮಾಜವನ್ನು ಬೆಳಕುನೀಡಿ ಸರಿದಾರಿಗೆ ತರಲು ಪ್ರಮುಖ ಪಾತ್ರ ವಹಿಸುತ್ತವೆ. ಅಪ್ಪಣ್ಣವರು ಬಸವಣ್ಣನವರ ಕೊನೆಗಾಲದವರೆಗೂ ಅವರ ಒಡನಾಡಿಯಾಗಿ, ಆಪ್ತ ಸೇವಕರಾಗಿ ಬದುಕಿದ್ದರು. ಅವರು ಬದುಕು ನಮಗೆಲ್ಲಾ ದಾರಿದೀಪವಾಗಿದೆ ಎಂದರು.
ಹಡಪದ ಹಪ್ಪಣ ಸಮಾಜದ ಅಧ್ಯಕ್ಷ ಶೇಖರಪ್ಪ ಪ್ರಾರ್ಥಿಸಿದರು. ಜಿಲ್ಲಾ ಮುಖಂಡರಾದ ಗುರುಸಿದ್ದಪ್ಪ, ತಾಲೂಕು ಗೌರವ ಅಧ್ಯಕ್ಷ ಸಿದ್ದಲಿಂಗಸ್ವಾಮಿ ಮಾತನಾಡುತ್ತಾ, ನಮ್ಮ ಸಮಾಜದ ಜಾತಿ ಪತ್ರದಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ತಂದೆಯವರ ಜಾತಿ ಲಿಂಗಾಯತ ಎಂದು ದಾಖಲೆಯಾಗಿದ್ದು, ಹಡಪದ ಜಾತಿ ಪ್ರಮಾಣವನ್ನು ನೀಡಿದರೆ ವಿದ್ಯಾಭ್ಯಾಸಕ್ಕೆ ಇತರೆ ಸೌಲಭ್ಯಕ್ಕೆ ಅನುಕೂಲವಾಗುತ್ತದೆ. ಆದ್ದರಿಂದ ನಮಗೆ ಈ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ವಿನಂತಿಸಿದ್ದರು.
ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಗ್ರೇಡ್-2 ಎಂ ಪ್ರತಿಭಾ, ಕಂದಾಯ ನಿರೀಕ್ಷಕ ಡಿ ಶಿವಕುಮಾರ್, ಮಂಜುನಾಥ, ಹರೀಶ, ತಾಲೂಕು ಹಡಪದ ಸಮಾಜದ ಮುಖಂಡರಾದ ವಿಕ್ರಮ, ನಾಗರಾಜ, ಗುರುವಣ್ಣ, ಪ್ರಕಾಶ್ ಉಜ್ಜಿನಿ,ಮಂಗಾಪುರ ಲೋಕೇಶ್, ನಿವೃತ್ತ ಶಿಕ್ಷರಾದ ಮಹೇಶಪ್ಪ ಸಿದ್ದಲಿಂಗಪ್ಪ ಹಾಗೂ ಇತರರು ಇದ್ದರು. ಸಿ.ಮ.ಗುರುಬಸವರಾಜ ಸ್ವಾಗತಿಸಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ 2024-25ನೇ ಸಾಲಿನಲ್ಲಿ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಹಡಪದ ಸಮಾಜದ ಮಕ್ಕಳನ್ನು ಸನ್ಮಾನಿಸಲಾಯಿತು.
ವರದಿ ಶಶಾಂಕ್.ಪಿ



















