ಬಳ್ಳಾರಿ / ಕಂಪ್ಲಿ : ರೈತರಿಗೆ ಸಮರ್ಪಕವಾಗಿ ಯೂರಿಯಾ ಸೇರಿದಂತೆ ಇತರೆ ರಸಗೊಬ್ಬರ ಒದಗಿಸಬೇಕೆಂದು ಆಗ್ರಹಿಸಿ, ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಉದ್ಭವ ಗಣೇಶ ದೇವಸ್ಥಾನದಿಂದ ಕಾಲ್ನಡಿಯಿಂದ ಮೆರವಣಿಗೆ ನಡೆಸಿ, ನಂತರ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟಿಸಿ, ತದನಂತರ ತಹಶೀಲ್ದಾರ್ ಜೂಗಲ್ ಮಂಜುನಾಥ ಮತ್ತು ಸಹಾಯಕ ಕೃಷಿ ನಿರ್ದೇಶಕ ಸಿ. ಎ. ಮಂಜುನಾಥರೆಡ್ಡಿ ಇವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.
ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಎ.ಖಾದರ್ ಮಾತನಾಡಿ, ಕಂಪ್ಲಿ ಸೇರಿದಂತೆ ರಾಜ್ಯದಲ್ಲಿ ಯೂರಿಯಾ ರಸಗೊಬ್ಬರ ಕೊರತೆ ಉಂಟಾಗಿದೆ. ಇದರಿಂದ ರೈತರು ಬೆಳೆಗಳು ಹಾಳಾಗುವಂತಾಗಿದೆ. ಸರ್ಕಾರಗಳು ರೈತರ ಪರ ಇರುವುದಾಗಿ ಜಂಭಕೊಚ್ಚಿಕೊಳ್ಳುತ್ತವೆ. ಆದರೆ, ಇಲ್ಲಿನ ಸಾಕಷ್ಟು ರೈತರು ಗೊಬ್ಬರ ಅಭಾವದಿಂದ ಸಂಕಷ್ಟಕ್ಕೀಡಾಗಿದ್ದು, ಅವರಿಗೆ ಸಮರ್ಪಕವಾಗಿ ಗೊಬ್ಬರ ವಿತರಣೆ ಮಾಡುವುದಕ್ಕೆ ಆಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರವು ರೈತರ ಹೆಸರಿನ ಮೇಲೆ ಅಧಿಕಾರ ಹಿಡಿಯುತ್ತವೆ. ಆದರೆ, ಅಧಿಕಾರಕ್ಕೆ ಬಂದ ಮೇಲೆ ರೈತರನ್ನು ಕೇಳುವವರು ಯಾರು ಇಲ್ಲದಂತಾಗಿದೆ. ಇದರಿಂದ ರಾಜ್ಯದಲ್ಲಿ ರೈತರು ರಸಗೊಬ್ಬರದ ಕೊರತೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈಗಲಾದರೂ ಸರ್ಕಾರಗಳು ರೈತರ ಬಗ್ಗೆ ಗಮನ ಹರಿಸಿ, ರೈತರಿಗೆ ಸಮರ್ಪಕವಾಗಿ ಗೊಬ್ಬರ ವಿತರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಇಳಿಯಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಜಿಲ್ಲಾಧ್ಯಕ್ಷ ಬಿ.ಗಂಗಾಧರ, ಉಪಾಧ್ಯಕ್ಷೆ ಉಷಾ, ತಾಲೂಕು ಅಧ್ಯಕ್ಷ ಗುಬಾಜಿ ರಾಮಾಂಜಿನಿ, ವಿಜಯನಗರ ಜಿಲ್ಲಾಧ್ಯಕ್ಷೆ ರತ್ನಮ್ಮ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ.ವಿ.ಗೌಡ, ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ, ರೈತ ಮುಖಂಡರಾದ ಡಿ. ಮುರಾರಿ, ಗಂಗಣ್ಣ, ಬಿ.ಹನುಮಂತ, ಉಮೇಶಗೌಡ, ಕರಿನಾಗಪ್ಪ, ಜಿ.ಮಂಜುನಾಥ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















