ಬಳ್ಳಾರಿ/ ಕಂಪ್ಲಿ: ಕಂಪ್ಲಿ-ಕೋಟೆಯಲ್ಲಿರುವ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯು ಎರಡನೇ ದಿನ ಮುಂದುವರೆದ ಪ್ರವಾಹಕ್ಕೆ ಸಿಕ್ಕಿ ನಲುಗುವಂತಾಗಿದೆ.
ಹೌದು. ಕಂಪ್ಲಿ-ಗಂಗಾವತಿ ಜನರಿಗೆ ಸಂಪರ್ಕ ಕಲ್ಪಿಸುವ ಸದುದ್ದೇಶದಿಂದ ನದಿಗೆ ಆರು ದಶಕಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಈಗ ಸೇತುವೆ ಗಟ್ಟಿಮುಟ್ಟಾದರೂ, ಪ್ರತಿ ವರ್ಷದ ನದಿ ಪ್ರವಾಹಕ್ಕೆ ದುರಸ್ಥಿಗೊಳಗಾಗಿ ಪುನ: ಸುಧಾರಿಸಿಕೊಳ್ಳುವ ಸ್ಥಿತಿ ಸೇತುವೆಯದ್ದಾಗಿದೆ.
ಮಲೆನಾಡು ಭಾಗದಲ್ಲಿ ಸುರಿದ ಅಧಿಕ ಮಳೆಗೆ ಹೆಚ್ಚಿನ ಪ್ರಮಾಣದ ನೀರು ತುಂಗಭದ್ರ ಜಲಾಶಯ ಸೇರುತ್ತಿದ್ದು, ಇದರಿಂದ ಹೆಚ್ಚಿನ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ. ಕಳೆದ ಸೋಮವಾರದಿಂದ ಒಮ್ಮಿಂದೊಮ್ಮಲೇ ನದಿಗೆ ನೀರು ಹರಿಸಲಾಗಿದೆ. ಇದರಿಂದ ಕಂಪ್ಲಿ-ಕೋಟೆಯಲ್ಲಿ ಪ್ರವಾಹ ಉಂಟಾಗಿ, ಸೇತುವೆ ಮುಳುಗಡೆಯಾಗಿ, ಎರಡು ತಾಲೂಕು ಕೇಂದ್ರಗಳ ಸಂಪರ್ಕ ಕಡಿತವಾಗಿದೆ. ಕಾರ್ಮಿಕರು, ಪ್ರಯಾಣಿಕರು, ವಿದ್ಯಾರ್ಥಿಗಳು ಸೇರಿದಂತೆ ವಾಹನ ಸವಾರರು ದೂರದ ಬುಕ್ಕಸಾಗರ ಸೇತುವೆ ಮಾರ್ಗದ ಮೂಲಕ ಸುಮಾರು 35 ಕಿ.ಮೀ.ನಷ್ಟು ಕ್ರಮಿಸಬೇಕಾದ ಸಂಕಷ್ಟ ಎದುರಾಗಿದೆ. ಇಲ್ಲಿನ ನದಿ ಪ್ರವಾಹದಿಂದ ಇಲ್ಲಿನ ಹೊಳೆ ಆಂಜನೇಯ್ಯ ದೇವಸ್ಥಾನಕ್ಕೆ ನೀರು ನುಗ್ಗಿದೆ. ಮತ್ತು ಕಂಪಲಿರಾಯನ ಕೋಟೆ ಬಳಿಯಲ್ಲಿ ಇನ್ನಷ್ಟು ನೀರು ಬರುವ ಸಾಧ್ಯತೆ ದಟ್ಟವಾಗಿದೆ. ನದಿ ಪಾತ್ರದ ರೈತರ ಹೊಲಗದ್ದೆಗಳಿಗೆ ನೀರು ನುಗ್ಗಿದ ಪರಿಣಾನ ಬೆಳೆ ನಷ್ಟದ ಆತಂಕದಲ್ಲಿದ್ದಾರೆ. ಒಟ್ಟಿನಲ್ಲಿ ನದಿ ಪ್ರವಾಹಕ್ಕೆ ರೈತರು, ಜನರು ಮತ್ತು ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಮೀನುಗಾರರು ಬದುಕು ಕಸಿದ ಪ್ರವಾಹ : ಇಲ್ಲಿನ ಕಂಪ್ಲಿ-ಕೋಟೆ ಪ್ರದೇಶದಲ್ಲಿ ಸಾಕಷ್ಟು ಮೀನುಗಾರರ ಕುಟುಂಬಗಳು ನದಿಯಲ್ಲಿ ಮೀನುಗಾರಿಕೆ ಮಾಡಿಕೊಂಡು ಬದುಕುತ್ತಿದ್ದಾರೆ. ಇವರ ಜೀವನಕ್ಕೆ ಮೀನುಗಾರಿಕೆ ಆಧಾರ ಸ್ತಂಭ. ದಿನವಿಡೀ ನದಿಯಲ್ಲಿ ಬಲೆಬೀಸಿ ಮೀನು ಹಿಡಿದು ಬದುಕು ಸಾಗಿಸುತ್ತಿದ್ದರು. ಆದರೆ, ಕಳೆದ ಎರಡು ದಿನದಿಂದ ನದಿ ಪ್ರವಾಹ ದುಮ್ಮಿಕ್ಕಿ ಹರಿಯುತ್ತಿದ್ದು, ಮೀನುಗಾರರ ಬದುಕು ಈಗ ಅತಂತ್ರವಾಗಿದೆ.
ತಿಂಗಳಲ್ಲಿ ಎರಡನೇ ಬಾರಿ ಪ್ರವಾಹ :
ಇದೇ ತಿಂಗಳ ಮೊದಲ ವಾರದಲ್ಲಿ ನದಿಯಲ್ಲಿ ನೀರು ಬಂದು, ಸೇತುವೆ ಮುಳುಗಡೆಯಾಗಿ, ಎರಡು ದಿನ ಸಂಕರ್ಪ ಸ್ಥಗಿತಗೊಂಡಿತ್ತು. ಈಗ ಮತ್ತೇ ನದಿ ಪ್ರವಾಹ ಉಂಟಾಗಿದ್ದು, ಯಾಕಪ್ಪಾ ಪ್ರವಾಹ ಬರುತ್ತಿದೆ ಎಂಬುದು ಜನರು ಪೇಚಾಡುವಂತಾಗಿದೆ.
ಈಗ ಏಳು ಕ್ರಸ್ಟ್ ಗೇಟ್ ಜಾಮ್ :
ಕಳೆದ ವರ್ಷ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಟ್ ಆಗಿ, ಸಾಕಷ್ಟು ಪ್ರಮಾಣದ ನೀರು ಪೋಲಾಗಿತ್ತು. ನುರಿತ ತಜ್ಞದ ತಂಡದಿಂದ ಗೇಟ್ ಅಳವಡಿಸಿ, ದುರಸ್ಥಿ ಕಾರ್ಯ ಯಶಸ್ವಿಗೊಳಿಸಿತ್ತು. ಇದರಿಂದ ಮೂರು ರಾಜ್ಯದ ಜೀವನಾಡಿ ರೈತರಿಗೆ ಹರ್ಷದಾಯಕಾಗಿತ್ತು. ಆದರೆ, ಈಗ 19ನೇ ಗೇಟ್ ಸೇರಿ ಒಟ್ಟು 8 ಕ್ರಸ್ಟ್ ಗೇಟ್ ನಿಷ್ಕ್ರಿಯಗೊಂಡಿದ್ದು, ಮೇಲೆ ಎತ್ತಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಸಂಗ್ರಹ ಸಾಮರ್ಥ್ಯವನ್ನು ಕೇವಲ 80 ಟಿಎಂಸಿಗೆ ಇಳಿಕೆ ಮಾಡಲಾಗಿದೆ. ಇದರಿಂದ ಹೆಚ್ಚಿನ ನೀರನ್ನು ನದಿಗೆ ಹರಿ ಬಿಟ್ಟು ಪ್ರವಾಹನ್ನುಂಟು ಮಾಡಲಾಗಿದೆ. ಗೇಟ್ ಜಾಮ್ ನಿಂದ ರೈತರಲ್ಲಿ ಮತ್ತಷ್ಟು ಆತಂಕವಾಗಿದೆ. ಸರ್ಕಾರ, ಅಧಿಕಾರಿಗಳು ಹೆಚ್ಚಿನ ಗಮನ ಹರಿಸಿ, ಗೇಟ್ ಗಳ ದುರಸ್ಥಿಗೆ ಮುಂದಾಗಬೇಕೆಂದು ಪ್ರತಿಯೊಬ್ಬರ ಹಕ್ಕೊತ್ತಾಯವಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್



















