ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪರಿಸರ ಸ್ನೇಹಿ ಗಣೇಶ

ಗಣೇಶ ಚತುರ್ಥಿಗೆ ಕೆಲವೇ ದಿನಗಳು ಬಾಕಿ ಇದ್ದು, ಮಾರುಕಟ್ಟೆಯಲ್ಲಿ ಈಗಾಗಲೇ ಗಣೇಶನ ಮೂರ್ತಿಗಳ ಮಾರಾಟದ ಅಬ್ಬರ ಜೋರಾಗಿದೆ. ಪರಿಸರ ರಕ್ಷಣೆ ಮತ್ತು ಆರೋಗ್ಯದ ದೃಷ್ಟಿಯಿಂದ ಪರಿಸರ ಸ್ನೇಹಿ ಗಣಪನಿಗೂ ಬೇಡಿಕೆ ಹೆಚ್ಚುತ್ತಿದೆ. ಕಳೆದ ಕೆಲವು ವರ್ಷಗಳಿಂದ ಪರಿಸರ ಸ್ನೇಹಿ ಗಣಪನ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡುತ್ತಿದ್ದು, ವಿಗ್ರಹಗಳನ್ನು ಮಾರಾಟ ಮಾಡುವ ಸ್ಥಳದಲ್ಲಿ ಕಡ್ಡಾಯವಾಗಿ ಪರಿಸರ ಸ್ನೇಹಿ ಗಣಪನ ಮೂರ್ತಿಗಳನ್ನೂ ಕಾಣಬಹುದು. ಆದರೂ ಸಾರ್ವಜನಿಕವಾಗಿ ಕೂಡಿಸುವಂತಹ ದೊಡ್ಡ ಗಾತ್ರದ ಮೂರ್ತಿಗಳು ಈಗಲೂ ರಾಸಾಯನಿಕ ಮಿಶ್ರಿತ ಬಣ್ಣಗಳನ್ನೇ ಹೊಂದಿವೆ.
ಬೀದಿ ಬೀದಿಗಳಲ್ಲಿ, ಮಾರುಕಟ್ಟೆಗಳಲ್ಲಿ ಭಿನ್ನ ಭಿನ್ನ ಗಣೇಶನ ಮೂರ್ತಿಗಳು ರಾಸಾಯನಿಕ ಬಣ್ಣಕಟ್ಟಿಕೊಂಡು ರಾರಾಜಿಸುತ್ತಿರುವುದು ಅತ್ಯಂತ
ನೋವಿನ ಸಂಗತಿ.
ಸರಿ, ಆದರೆ ನಾವೆಲ್ಲಾ ಬಣ್ಣಗಳಲ್ಲೇ ಕಳೆದುಹೋದ, ಕೇವಲ ಆಕರ್ಷಣೆಗೆ ಮಾತ್ರ ಸೀಮಿತವಾದ ಗಣಪನನ್ನು ಪ್ರತಿಷ್ಠಾಪಿಸುವ ಹಾಗೂ ವಿಸರ್ಜಿಸುವ ಭರದಲ್ಲಿ ಪರಿಸರದ ಬಗ್ಗೆ ಕಾಳಜಿಯನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವುದು ಸುಳ್ಳಲ್ಲ. ಹಿಂದಿನಂತೆ ಮಣ್ಣಿನ ಗಣಪ ನಾಪತ್ತೆಯಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್, ರಾಸಾಯನಿಕ ಗಣಪನ ಮೂರ್ತಿಗಳು ಎಲ್ಲೆಡೆ ತಲೆ ಎತ್ತುತ್ತಿವೆ, ಗಣಪನ ವಿಸರ್ಜನೆ ಮೂಲಕ ನೈಸರ್ಗಿಕದತ್ತವಾದ ನೀರನ್ನು ಸಂಪೂರ್ಣ ಕಲುಷಿತಗೊಳಿಸುತ್ತಿದ್ದೇವೆ ಎಂಬ ಅರಿವು ಸಹ ನಮ್ಮಲ್ಲಿ ಇನ್ನು ಮೂಡದೆ ಇರುವುದು ಚಿಂತಾಜನಕ ವಿಚಾರವಲ್ಲವೇ? ಹೌದು ಈಗಿನ ಯುವ ಜನಾಂಗ ಖಂಡಿತವಾಗಿಯೂ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ಮಾಡುವುದು ಅವಶ್ಯವಾಗಿದೆ. ಈಗ ಸಧ್ಯ
ಗಣೇಶೋತ್ಸವ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ಪರಿಸರ ಸ್ನೇಹಿ ಮಿತ್ರ ಗಣೇಶನ ಭರಾಟೆ ಜೋರಾಗಿದ್ದು ಕಾಣುತ್ತಿದ್ದೇವೆ‌. ವಿವಿಧ ನಗರಗಳು ಸೇರಿದಂತೆ ಹಲವಾರು ಗ್ರಾಮದಲ್ಲಿನ ನಾನಾ ಕುಟುಂಬಗಳು ಪರಿಸರ ಸ್ನೇಹಿ ಗಣೇಶನ ವಿಗ್ರಹ ತಯಾರಿಕೆಯಲ್ಲಿ ಸಕ್ರಿಯವಾಗಿರುವುದು ಕಂಡು ಬರುತ್ತಿದೆ. ಖುಷಿ ಕೊಡುವ ವಿಚಾರವೂ ಹೌದು.

ಕಲೆಗಾರಿಕೆ ಬೇಕು :
ಪರಿಸರ ಸ್ನೇಹಿ ಗಣಪತಿ ತಯಾರಿಸುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಅದಕ್ಕೆ ಕಲೆಗಾರಿಕೆ ಬೇಕು, ಮಣ್ಣಿಗೆ ಹದ ಕೊಟ್ಟು, ಜೀವ ತುಂಬಿ ವೈವಿಧ್ಯಮಯ ಗಣಪತಿ ತಯಾರಿಸುವುದು ಕಷ್ಟದ ಕೆಲಸವೇ. ಕೆಲವರು ಮಾತ್ರ ವಂಶಪಾರಂಪರ್ಯವಾಗಿ ಈ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.
ಮಣ್ಣಿನ ಗಣಪನ ಮೂರ್ತಿ ತಯಾರಿಕೆಯಂದರೆ ಅದೊಂದು ತಪಸ್ಸು. ಮೊದಲು ಶುದ್ಧವಾದ ಅಂಟು ಮಣ್ಣು ಸಂಗ್ರಹಿಸಬೇಕು. ಮೊದಲೆಲ್ಲಾ ಹೇರಳವಾಗಿ ಸಿಗುತ್ತಿದ್ದ ಜೇಡಿ ಮಣ್ಣು ಈಗ ಸಿಗುವುದು ಸ್ವಲ್ಪ ಕಷ್ಟವಾಗುತ್ತಿದೆ. ಒಂದು ಟ್ರ್ಯಾಕ್ಟರ್‌ ಮಣ್ಣು ತಂದು ಅದರಲ್ಲಿರುವ ಕಸ ಕಡ್ಡಿಗಳನ್ನು ಬೇರ್ಪಡಿಸಿ, ಹದಗೊಳಿಸಬೇಕು. ತರುವಾಯ ಹಂತ ಹಂತವಾಗಿ ಮೂರ್ತಿ ನಿರ್ಮಾಣ ಕೈಗೊಳ್ಳಬೇಕು. ಗಣಪನ ಮೂರ್ತಿಗಳನ್ನು ಆಕಾರಕ್ಕೆ ತಕ್ಕಂತೆ ನುಣುಪುಗೊಳಿಸಿ, ಹಾರ ಕಿರೀಟ, ಸೇರಿದಂತೆ ಅಂಗವಿನ್ಯಾಸ ಮಾಡಬೇಕು. ಈ ಎಲ್ಲ ಹಂತವೂ ಅವಸರದಿಂದ ಆಗುವುದಿಲ್ಲ. ಸಮಾಧಾನದಿಂದ ಕಾಯಾ ವಾಚಾ ಭಕ್ತಿಯಿಂದ ಪರಿಸರ ಸ್ನೇಹಿ ಗಣಪನನ್ನು ರೆಡಿ ಮಾಡಬೇಕು, ಅಂದಾಗಲೇ ಮಾತ್ರ ಗಣಪನಿಗೊಂದು ಕಳೆ ಬರುತ್ತದೆ.

ಪರಿಸರ ಸ್ನೇಹಿ ಗಣಪನನ್ನು ತಯಾರಿಸುವ ವಿಧಾನ :
ನಾವು ತಯಾರಿಸಲು ಇಚ್ಚಿಸುವ ಅಳತೆಗೆ ಸಾಧ್ಯವಾದಷ್ಟು ಶುದ್ಧವಾದ ಜೇಡಿಮಣ್ಣನ್ನು ತೆಗೆದುಕೊಳ್ಳಬೇಕು ಹಾಗೂ ಜೇಡಿಮಣ್ಣು ಮೂರ್ತಿಯಾಗಿಸಲು ಹದ ಬರುವಷ್ಟು ನೀರನ್ನು ಬೆರೆಸುವುದು ಸರಿಯಾದ ಕ್ರಮ ಹೀಗಾಗಿ ಮೊದಲಿಗೆ ಗಣಪನ ಕಿವಿ, ಸೊಂಡಿಲು, ಸಣ್ಣ ಸಣ್ಣ ಗುಂಡುಗಳು (ಮೋದಕ) ಹೊಟ್ಟೆಯ ಸುತ್ತ ಸರ್ಪವನ್ನು ಸಿದ್ಧಪಡಿಸಿ ಮತ್ತುಶಮರದ ತುಂಡಿನ ಮೇಲೆ ಪಾದದಿಂದ ಆರಂಭಿಸಿ ಕಾಲು, ಹೊಟ್ಟೆ, ಭುಜ, ಕೈ ಬೆರಳುಗಳನ್ನು ತಯಾರಿಸಿ ಜೊತೆಗೆ ಗಣಪನ ಧೋತಿಗೆ ಸಣ್ಣ ಟೂಥ್ ಪಿಕ್ ಅಥವಾ ಸ್ಪೂನ್ ನಿಧಂ ಗುರುತು ಮಾಡಿ ಅಂತಿಮವಾಗಿ ತಲೆಯ ಭಾಗವನ್ನು ನಿಧಾನವಾಗಿ ದೇಹದ ಅಳತೆಗೆ ಹೊಂದುವಂತೆ ಆನೆಯ ಮುಖವನ್ನು ತಯಾರಿಸಿ ನಂತರ ಮೊದಲೇ ಸಿದ್ಧಪಡಿಸಿದ್ದ ಕಿವಿ, ಸೊಂಡಿಲು ಮೋದಕವನ್ನು ಅಳತೆಗೆ ಅನುಗುಣವಾಗಿ ಸರಿಯಾದ ಸ್ಥಳದಲ್ಲಿ ಜೋಡಿಸಿ ತದನಂತರ ಟೂಥ್ ಪಿಕ್ ಬಳಸಿ ಗಣೇಶನಿಗೆ ಆಭರಣಗಳು, ವಸ್ತ್ರವನ್ನು ವಿನ್ಯಾಸ ಮಾಡಿ ಕೊನೆಯದಾಗಿ ಅರಿಶಿನ, ಕುಂಕುಮ ಸೇರಿದಂತೆ ನೈಸರ್ಗಿಕ ಬಣ್ಣಗಳನ್ನು ಬಳಸಿ ಗಣೇಶನಿಗೆ ಇನ್ನಷ್ಟು ಮೆರಗು ನೀಡಿ ಇದಲ್ಲದೆ ಅರಿಶಿನ ಇದ್ದಿಲು, ಅಳಲೇಕಾಯಿ, ಅರಿಶಿನ, ಕುಂಕುಮ, ಅಶ್ವಗಂಧ, ವಿಭೂತಿ, ಗೋಪಿಚಂದನದಿಂದ ಸಹ ಗಣೇಶನನ್ನು ತಯಾರಿಸಿ ಅದಕ್ಕೆ ಬಣ್ಣ ಲೇಪಿಸಬಹುದು. ಈ ರೀತಿಯಲ್ಲಿ ಪರಿಸರ ಸ್ನೇಹಿ ಗಣಪನನ್ನು ತಯಾರಿಸಿ ಪೂಜಿಸಬಹುದು.

ಪರಿಸರ ಸ್ನೇಹಿ:
ಮಣ್ಣಿನ ಜತೆಗೆ ಸ್ಥಳೀಯವಾಗಿ ದೊರೆಯುವ ಮಣ್ಣು, ಬೊಂಬು, ಬಿದಿರು, ಹುಲ್ಲು, ಗೋಣಿ ತಟ್ಟು, ಹುರಿ, ಕಟ್ಟಿಗೆ, ಹತ್ತಿ, ಬಟ್ಟೆ ಇವುಗಳನ್ನು ಬಳಸಿ ನಾನಾ ಬಗೆಯ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಾರೆ. ಯಾವುದೇ ರೀತಿಯ ಪರಿಸರ ಮಲಿನ ಉಂಟು ಮಾಡುವ ವಸ್ತುಗಳನ್ನು ಬಳಸದೆ, ನೀರಿನಲ್ಲಿ ಸುಲಭವಾಗಿ ಕರಗುವ ತೈಲ ವರ್ಣ ಬಳಸಿ ಸುಂದರ ಮೂರ್ತಿಗಳನ್ನು ತಯಾರಿಸಿದ್ದು,ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ತಯಾರಿಸಿ ಪರಿಸರ ಸಂರಕ್ಷಕರು ಗಮನ ಸೆಳೆದಿದ್ದಾರೆ.
ಗಣೇಶನ ಹಬ್ಬ ಅಂದಾಕ್ಷಣ ಕಲರ್‌ ಕಲರ್‌ ಗಣಪ ನೆನಪಾಗುತ್ತಾನೆ. ಆದರೆ, ಬಣ್ಣದಲ್ಲಿ ಕೆಮಿಕಲ್‌ ಇರುವುದರಿಂದ ನೀರು ಕಲ್ಮಶವಾಗುತ್ತೆ. ಪರಿಸರಕ್ಕೂ ಹಾನಿಯಾಗುತ್ತೆ. ಈಗ ಮಣ್ಣಿನ ಗಣಪ, ವೆಜಿಟೆಬಲ್‌ ಗಣಪ ಕೂಡ ಇದೆ. ಈ ಗಣಪ ಮೂರ್ತಿಗಳನ್ನೇ ಪೂಜಿಸಬೇಕು. ಪರಿಸರ ಸ್ನೇಹಿ ಗಣಪ ಪ್ರಕೃತಿ ಶ್ರೇಷ್ಠ.
ನೆನಪಿಡಿ ಮಣ್ಣಿನಿಂದ ಮಾಡಿದ ಗಣೇಶನ ಆರಾಧನೆಯೇ ಶ್ರೇಷ್ಟ. ಪರಿಸರಕ್ಕೆ ತೊಡಕು ಉಂಟುಮಾಡುವುದನ್ನು ಯಾವ ಭಗವಂತನ ಸಹಿಸುವುದಿಲ್ಲ. ನಮ್ಮನ್ನ ಸಲಹುತ್ತಿರುವ ಪರಿಸರಕ್ಕೆ ಕ್ಷೋಭೆಯಾಗದಂತೆ ಮೂರ್ತಿಯನ್ನು ಸಿದ್ಧಪಡಿಸುವುದು ನಮ್ಮ ನಿಜವಾದ ಮಾನವೀಯತೆಯ ಧರ್ಮಸಮ್ಮತ ಕಾರ್ಯ ಎಂಬುದು ನಾವ್ಯಾರೂ ಮರೆಯಬಾರದು.

ಜಾಗೃತಿ ಮೂಡಿಸಿ/ಆಚರಣೆ ಮಾಡೋಣ:

ಆಚರಣೆಗಾಗಿ ಸಾರ್ವಜನಿಕರು ಸೇರಿ ಮಕ್ಕಳು ಹಾನಿಕಾರಕ ರಾಸಾಯನಿಕ ವಸ್ತುಗಳಿಂದ ಕೂಡಿದ ಬಣ್ಣ ಬಣ್ಣದ ವಿಗ್ರಹಗಳನ್ನು ಖರೀದಿಸಿ, ಪೂಜಿಸಿದ ನಂತರ ಕೆರೆಯಲ್ಲಿ ವಿಸರ್ಜನೆ ಮಾಡಿದಾಗ ಜಲಚರಗಳಿಗೆ ಹಾನಿಯುಂಟಾಗಲಿದೆ. ಜನ, ಜಾನುವಾರುಗಳು ಸಹ ನಾನಾ ರೋಗಗಳಿಗೆ ತುತ್ತಾಗಲಿವೆ. ಈ ಬಗ್ಗೆ ಎಲ್ಲರಲ್ಲಿಯೂ ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ ಇರಲಿ.
ಪ್ರಕೃತಿ ವಿಕೋಪದಿಂದ ಈಗಾಗಲೇ ಸಾಕಷ್ಟು ಸಮಸ್ಯೆ ಎದುರಿಸಿದ್ದೇವೆ. ಆದ ಕಾರಣ
ಯಾವುದೇ ಸಾಮಾಜಿಕ ಬದಲಾವಣೆಗಳು ಚಿಕ್ಕ ವಯಸ್ಸಿನಲ್ಲೇ ಆರಂಭವಾಗಬೇಕು. ಮಕ್ಕಳು ಶಾಲೆಯಲ್ಲಿ ಕಲಿತ ಜ್ಞಾನ ಸಮಾಜದಲ್ಲಿ ವರ್ಗಾವಣೆಯಾಗುತ್ತದೆ. ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ ಮಕ್ಕಳ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಬೇಕು. ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ ಗಣೇಶಮೂರ್ತಿಗಳನ್ನು ಖರೀದಿಸುವಂತೆ ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಮುಖಾಂತರ ಪರಿಸರ ಸಂರಕ್ಷಣೆ ಜೊತೆಗೆ ಕೆರೆಗಳ ರಕ್ಷಣೆಗೆ ಸಹಕಾರ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅವರಿಗೆಲ್ಲ ತಿಳಿ ಹೇಳುವ ಕೆಲಸ ನಿರಂತರವಾಗಿ ಪರಿಸರವಾದಿಗಳು ಮಾಡಬೇಕಾಗಿದೆ. ನಾವೆಲ್ಲರೂ ಪರಿಸರವನ್ನು ಕಾಪಾಡಿದರೆ ಪರಿಸರ ನಮ್ಮನ್ನು ಅಷ್ಟೇ ಚೆನ್ನಾಗಿ ಕಾಪಾಡಿಕೊಳ್ಳುತ್ತದೆ ಎಂಬುದನ್ನು ಅರಿತು ಹೆಜ್ಜೆ ಹಾಕುವುದು ಅನಿವಾರ್ಯವಾಗಿದೆ. ಕಾರಣ ಬನ್ನಿ ಎಲ್ಲರೂ ಈ ಸೇರಿ ಬಾರಿ ಪರಿಸರ ಸ್ನೇಹಿ ಗಣಪನನ್ನು ತಂದು ನಮ್ಮ ಮನೆಗಳಲ್ಲಿ/ಗಲ್ಲಿಗಳಲ್ಲಿ ಪೂಜಿಸಿ, ಸಂಭ್ರಮದಿಂದ ಆಚರಿಸೋಣ.

ಕೊನೆಯ ಮಾತು :
ಇಂದು ಎಲ್ಲಾ ಕಡೆ ಪರಿಸರ ಸ್ನೇಹಿ ಗಣಪನದ್ದೇ ಜಪ. ರಾಜಕೀಯ ವ್ಯಕ್ತಿಗಳಿಂದ ಹಿಡಿದು ಧಾರ್ಮಿಕ ಮುಖಂಡರು, ಸಿನಿಮಾ ತಾರೆಯರು ಸೇರಿ ವಿವಿಧ ಸಂಘ-ಸಂಸ್ಥೆಗಳು ಪರಿಸರ ಹಾಗೂ ಜಲಮೂಲಗಳ ಸಂರಕ್ಷಣೆಗಾಗಿ ಈ ಬಾರಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಪೂಜಿಸಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ ಇದು ಸಂತೋಷಕರ ಬೆಳವಣಿಗೆ. ಕಾರಣ ನಾವೆಲ್ಲರೂ ಪರಿಸರಕ್ಕೆ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಉಪಯೋಗಿಸದೆ ಮಣ್ಣಿನಲ್ಲಿ ಮಾಡಿರುವ ಗಣಪನನ್ನು ಪೂಜಿಸುವ ಪ್ರತಿಜ್ಞೆ ಮಾಡೋಣ. ಇದಲ್ಲದೆ ಗಣೇಶನನ್ನು ಕೆರೆಗೆ ಅಥವಾ ನದಿಗೆ ಬಿಡುವುದರಿಂದ ನೀರು ಕಲುಷಿತವಾಗದಂತೆ ನೋಡಿಕೊಳ್ಳೋಣ. ಪರಿಸರ – ಕೆರೆಗಳ ಸಂರಕ್ಷಣೆ ಹೊಣೆ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎನ್ನುವುದು ನಾವೆಲ್ಲರೂ, ಯಾವತ್ತೂ ಮರೆಯಬಾರದು.

ಲೇಖಕರು : ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಪರಿಸರ ಸಂರಕ್ಷಕರು, ಹೋರಾಟಗಾರರು, ಬೀದರ್ ಜಿಲ್ಲೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!