ಬಳ್ಳಾರಿ / ಕಂಪ್ಲಿ: ದೇಶಾದ್ಯಂತ ರಾಷ್ಟçಪತಿ ಸರ್ವಪಲ್ಲಿ ರಾಧಕೃಷ್ಣನ್ ಅವರ ಜನ್ಮ ದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಸಡಗರ ಸಂಭ್ರಮಗಳಿಂದ ಆಚರಣೆ ಮಾಡುತ್ತಿದ್ದು, ಇಂದು ಜಿಲ್ಲಾ,ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಾರೆ.ಅಂತೆಯೇ ಕಂಪ್ಲಿ ತಾಲ್ಲೂಕಿನ ಮೂರು ಜನ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಕಂಪ್ಲಿ ತಾಲ್ಲೂಕಿನ ಕಂಪ್ಲಿ – ಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೊಸಗೇರಪ್ಪ, ಶಿವಪುರ ಮೆಟ್ರಿಯ ಸ. ಹಿ. ಪ್ರಾ ಶಾಲೆಯ ಸಹಶಿಕ್ಷಕ ಗಾದಿಲಿಂಗಪ್ಪ ನಿಂಗರಾಜ ಕುಷ್ಟಗಿ ಹಾಗೂ ಚಿಕ್ಕಜಾಯಿಗನೂರು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಮುದಕಪ್ಪನವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರಕಿದೆ.
ಹೊಸಗೇರಪ್ಪ : ವಿಜಯನಗರ ಜಿಲ್ಲೆ ಗಾದಿಗನೂರು ಗ್ರಾಮದ ಹೊಸಗೇರಪ್ಪನವರು 1999 ಶಿಕ್ಷಕ ಸೇವೆಗೆ ಸೇರಿದ್ದು, ಕಳೆದ 16 ವರ್ಷಗಳಿಂದ ಉತ್ತಮಸೇವೆಯನ್ನು ಸಲ್ಲಿಸಿದ್ದು ಕಂಪ್ಲಿ ಕೋಟೆಯಲ್ಲಿ 2015ರಿಂದ ಮುಖ್ಯಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದು,ಇವರ ನಿರಂತರ ಉತ್ತಮ ಸೇವೆಯನ್ನು ಗುರುತಿಸಿ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
ಗಾದಿನಿಂಗಪ್ಪ ನಿಂಗರಾಜ ಕುಷ್ಟಗಿ : ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿಯವರಾದ ಗಾದಿನಿಂಪ್ಪ ನಿಂಗರಾಜ ಅವರು 2015-16 ರಲ್ಲಿ ಸೇವೆಗೆ ಸೇರಿದ್ದು,ಕಳೆದ ಹತ್ತು ವರ್ಷಗಳಿಂದ ಶಿವಪುರ ಮೆಟ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರ ಉತ್ತಮ ಬೋಧನೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟವಟಿಕೆ, ಶಿಸ್ತು, ಸಮಯ ಪಾಲನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
ಮುದಕಪ್ಪ : ಕೊಪ್ಪಳ ಜಿಲ್ಲೆ ಚಿಕ್ಕಬೊಮ್ಮನಾಳ ಗ್ರಾಮದವರಾದ ಮುದಕಪ್ಪ ನೆಲಜೇರಿಯವರು 2004 ರಿಂದ 2006ರವರೆಗೆ ಹಾಸನದ ಕಂದಲಿಯ ಮುರಾರ್ಜಿ ವಸತಿ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ನೇಮಕಗೊಂಡರು.
ನಂತರ ಸಿಇಟಿ ಮೂಲಕ ಆಂಗ್ಲ ಭಾಷಾ ಶಿಕ್ಷಕರಾಗಿ ಆಯ್ಕೆಯಾಗಿ ಮಂಡ್ಯ ಜಿಲ್ಲೆ,ನಾಗಮಂಗಲ ತಾಲ್ಲೂಕಿನ ಹರದನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು 10 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದು, 2016ರಿಂದ ಕಂಪ್ಲಿ ತಾಲ್ಲೂಕಿನ ಚಿಕ್ಕಜಾಯಿಗನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಅತ್ಯುತ್ತಮ ಆಂಗ್ಲ ಭಾಷಾ ಶಿಕ್ಷಕರಾಗಿ ಗುರುತಿಸಿಕೊಂಡಿರುವುದಲ್ಲದೆ, ಸಾಹಿತ್ಯ, ಕ್ರೀಡೆ, ಸಾಮಾಜಿಕ ಕ್ಷೇತ್ರದ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾದ ಮೂರು ಜನ ಶಿಕ್ಷಕರನ್ನು ಕಂಪ್ಲಿ ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘ ಹಾಗೂ ಪ್ರೌಢಶಾಲೆಗಳ ಶಿಕ್ಷಕರ ಸಂಘ ಮತ್ತು ಸರ್ಕಾರಿ ನೌಕರರ ತಾಲ್ಲೂಕು ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















