ಬಳ್ಳಾರಿ/ ಕಂಪ್ಲಿ : ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜೀವಕ್ಕೂ ಹಾನಿಯಾಗುವ ಅಪಾಯವಿರುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಬಡಿಗೇರ್ ಜಿಲಾನ ಸಾಬ್ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪಟ್ಟಣದ ಕಂಪ್ಲಿ ಕೋಟೆಯ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ನಡೆದ ಶಾಲಾ ಮಕ್ಕಳಿಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾದಕ ವಸ್ತುಗಳ ಸಹವಾಸ ಮಾಡುವುದರಿಂದ ಕ್ಯಾನ್ಸರ್, ಕಿಡ್ನಿ ವೈಫಲ್ಯ, ದವಡೆ ಕ್ಯಾನ್ಸರ್ ಹಾಗೂ ಹಲವಾರು ಕಾಯಿಲೆಗಳು ಬರುತ್ತವೆ. ಇವುಗಳ ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೇ ಮಾದಕ ವಸ್ತುಗಳ ವಿರೋಧಿ ದಿನ ಆಚರಣೆ ಮಾಡಲಾಗುತ್ತದೆ’ ಎಂದು ತಿಳಿಸಿದರು.
ಮುಖ್ಯ ಆತಿಥಿಯಾಗಿದ್ದ ತಾಲೂಕು ಕೃಷಿ ಅಧಿಕಾರಿ ಸಂಜಯ ಕುಮಾರ್ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳೆದು ಬಂದ ಹಾದಿ ಹಾಗೂ ಸದಸ್ಯರಿಗೆ ಅನುಕೂಲಕರ ಯೋಜನೆಗಳ ಅನುಷ್ಠಾನಗಳ ಬಗ್ಗೆ ಮಾಹಿತಿ ನೀಡಿದರು. ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನ ಆರೋಗ್ಯ ಹಾಳಾಗುವುದರ ಜೊತೆಗೆ ಮನುಷ್ಯನ ಆಯುಷ್ಯವನ್ನೂ ಕಡಿಮೆ ಮಾಡುತ್ತದೆ’ ಎಂದರು.
ಗಂಗಾಮತ ಸಮಾಜದ ಮುಖಂಡರಾದ ಕಂಬತ್ ಕೃಷ್ಣಪ್ಪ, ಡಾ. ಶಿವರಾಜ್, ಸಂಘಗಳ ಮೇಲ್ವಿಚಾರಕರಾದ ಮಂಜುಳಾ, ಸೇವಾ ಪ್ರತಿನಿಧಿ ಯಶೋದಾ, ಒಕ್ಕೂಟದ ಅಧ್ಯಕರಾದ ಪದ್ಮಾ, ಶಾಲೆಯ ಶಿಕ್ಷಕರಾದ ಕೆ. ಶ್ವೇತಾ, ಕೊಲ್ಕರಾ ಉಮಾ, ವರ್ಷಾ ಮಂಜುಮದಾರ್, ಮಣ್ಣೂರ್ ಲಕ್ಷ್ಮಿ, ಸುನೀತಾ, ಆರ. ಕೆ. ಮುಸ್ಕಾನ್, ಗೌಸಿಯಾ, ಜೆ. ಅಕ್ಷತಾ, ಕಾವ್ಯ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ : ಕರುನಾಡ ಕಂದ ಪತ್ರಿಕೆ



















