
ಬಳ್ಳಾರಿ: ಸಿರುಗುಪ್ಪ ಕನ್ನಡ ಸಾಹಿತ್ಯ ಲೋಕದಲ್ಲಿ ‘ಪ್ರೀತಿಯ ಮಂಜು’ ಎಂಬ ಕಾವ್ಯನಾಮದೊಂದಿಗೆ ಗುರುತಿಸಿಕೊಂಡಿರುವ ‘ ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ’ ಯವರು ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಭೈರಗಾಮದಿನ್ನೆ ಎಂಬ ಕರ್ನಾಟಕಾಂಧ್ರದ ಗಡಿಗ್ರಾಮದವರು. ರಂಗನಟ ಆರ್. ಪ್ರಕಾಶಗೌಡ ಮತ್ತು ಅನ್ನಪೂರ್ಣಮ್ಮ ಮಗನಾಗಿರುವ ಇವರು ತಮ್ಮ ೧೬ನೇ ವಯಸ್ಸಿನಿಂದಲೇ ಕವಿತೆಗಳ ರಚನೆಗೆ ತೊಡಗಿದ್ದಾರೆ. ನಾಟಕಾಭಿನಯ, ರಂಗ ಸಂಶೋಧನೆ ಮತ್ತು ಕಥೆ, ಕವಿತೆ, ನಾಟಕ ರಚನೆಯಲ್ಲಿ ತೊಡಗಿರುವ ಇವರು ಇಲ್ಲಿಯವರೆಗೆ ” ತೋಚಿದ್ದೆ ಗೀಚಿದೆ, ಪ್ರೀತಿ ಜೋಳಿಗೆ ಫಕೀರ, ಕಾರಂತ ರತ್ನ ಕುಡುದರಹಾಳ್ ಡಾ. ಶಿವಕುಮಾರ ತಾತನವರ ವಚನಗಳು, ಯಪ್ಪ ತಿಪ್ಪನ ನುಡಿಗಳು, ಕೈಗೋಲು ” ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಇವರ ರಂಗಭೂಮಿ ಮತ್ತು ಸಾಹಿತ್ಯ ಸೇವೆಗೆ ಕನ್ನಡ ಪುಸ್ತಕ ಪ್ರಾಧಿಕಾರವು ೨೦೧೬ರಲ್ಲಿ ಇವರ ತೋಚಿದ್ದೆ ಗೀಚಿದೆ ಮೊದಲ ಕವನ ಸಂಕಲನಕ್ಕೆ ‘ಉದಯೋನ್ಮುಖ ಬರಹಗಾರರ ಚೊಚ್ಚಲ ಕೃತಿ ಪುರಸ್ಕಾರ’ ಹಾಗೂ ಧಾರವಾಡದ ಕನಕ ಸಂಸ್ಕೃತಿ ಪ್ರಕಾಶನವು ‘ಕನಕಶ್ರೀ ಪ್ರಶಸ್ತಿ’, ದೆಹಲಿಯಲ್ಲಿ ನಡೆದ ೮ನೇ ಥಿಯೇಟರ್ ಒಲಂಪಿಕ್ ಭಾಗವಹಿಸಿ ಜನಮನ್ನಣೆ ಪಡೆದುದಕ್ಕಾಗಿ ನೆಲಸೊಗಡು ಸಂಸ್ಥೆಯ ‘ಕಲಾ ಕುಸುಮ’, ಕನಕಶ್ರೀ ಪ್ರಶಸ್ತಿ ಲಭಿಸಿದೆ.
ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರು ಮತ್ತು ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ನಾಗೇಶ್ ವಿ ಬೆಟ್ಟಕೋಟೆಯವರ ಮಾರ್ಗದರ್ಶನದಲ್ಲಿ ‘ರಂಗಭೂಮಿ : ಗಡಿನಾಡು ರಂಗಕಲಾವಿದರು (ಬಳ್ಳಾರಿ-ಕರ್ನೂಲ್ ಜಿಲ್ಲೆ ಅನುಲಕ್ಷಿಸಿ)’ ಎಂಬ ವಿಷಯದ ಕುರಿತು ಪಿ.ಎಚ್ ಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ.
ಇದಲ್ಲದೇ ರಾಜ್ಯದ ಹಲವು ಸಾಹಿತ್ಯ ಉತ್ಸವಗಳ ಕವಿಗೋಷ್ಠಿಯಲ್ಲಿ ಭಾಗವಹಿಸಿರುವ ಇವರು ಈ ವರ್ಷ ಮೈಸೂರಿನ ಪ್ರಚುರ ಕವಿಗೋಷ್ಠಿಗೆ ಆಯ್ಕೆಯಾಗುವ ಮೂಲಕ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
- ಕರುನಾಡ ಕಂದ



















