ಬಳ್ಳಾರಿ / ಕಂಪ್ಲಿ : ಗಂಗಾವತಿ ನಗರದ ರಾಣಾ ಪ್ರತಾಪ್ ಸಿಂಗ್ ವೃತ್ತದ ಲೀಲಾವತಿ ಆಸ್ಪತ್ರೆಯ ಮುಂದೆ ಮಂಗಳವಾರ ನಡುರಾತ್ರಿ ಬಿಜೆಪಿ ಯುವ ಮುಖಂಡ ವೆಂಕಟೇಶ್ ಕುರುಬರ ಅವರನ್ನು ಕೊಲೆ ಮಾಡಿದ ಆರೋಪಿಗಳು ತಲೆಮರೆಸಿಕೊಂಡು ಹೋಗಿ ಬೆಳಗ್ಗೆ 6 ಗಂಟೆಯ ಸುಮಾರಿಗೆ ಕಂಪ್ಲಿಯ ಪೊಲೀಸರಿಗೆ ಶರಣಾಗಿದ್ದಾರೆ.
ಕೊಲೆ ಮಾಡಿ ಎಸ್ಕೇಪ್ ಆದ ಆರೋಪಿಗಳು ಶರಣಾದ ತಕ್ಷಣ ಕಂಪ್ಲಿಯ ಪೊಲೀಸರು ಆರೋಪಿಗಳನ್ನು ಗಂಗಾವತಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೃತ ಗಂಗಾವತಿ ನಗರ ಯುವ ಮೋರ್ಚಾ ಬಿಜೆಪಿ ಅಧ್ಯಕ್ಷ ವೆಂಕಟೇಶ ತಂದೆ ಹಂಪಣ್ಣ ಜಂತಕಲ್ ಎಂಬುವರು ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಲಿಂಗರಾಜ್ ಕ್ಯಾಂಪಿನ ರವಿ ಮತ್ತಿತರರ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಾಗಿತ್ತು.
ಆದರೆ ಗಂಗಾವತಿಯಲ್ಲಿ ಕೊಲೆ ಮಾಡಿದ 6 ಆರೋಪಿಗಳ ಪೈಕಿ ನಾಲ್ವರು ಕಂಪ್ಲಿ ಠಾಣೆಗೆ ತೆರಳಿ ಅಲ್ಲಿನ ಪೊಲೀಸರ ಮುಂದೆ ಶರಣಾಗಿದ್ದಾರೆ ಮತ್ತೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಬಂಧಿತ ಆರೋಪಿಗಳನ್ನು ಭೀಮ ಅಲಿಯಾಸ್ ಭರತ್, ಸಲೀಂ, ವಿಜಯ್ ಹಾಗೂ ಧನರಾಜ್ ಎಂದು ಗುರುತಿಸಲಾಗಿದೆ ಆರೋಪಿಗಳೆಲ್ಲರೂ 25 ವರ್ಷ ಒಳಗಿನವರು.
ಹಳೆಯ ದ್ವೇಷ ಕಾರಣ : ಕಳೆದ ಎರಡು ವರ್ಷದ ಹಿಂದೆ ಗಂಗಾವತಿಯ ವಿದ್ಯಾನಗರದ ರೈಲ್ವೆ ಬ್ರಿಜ್ ಬಳಿ ಕೊಲೆಯಾದ ವೆಂಕಟೇಶನ ಸ್ನೇಹಿತ ಅಮರ್ ಭಗತ್ ಸಿಂಗ್ ನಗರದ ಮಾರುತಿ ಅಲಿಯಾಸ್ ಸಲಗ ಎಂಬ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡುವ ಯತ್ನ ನಡೆದಿತ್ತು ಮಾರಣಾಂತಿಕವಾಗಿ ಗಾಯಗೊಂಡಿದ್ದ ಮಾರುತಿ ಎಂಬುವರನ್ನು ಕೊಲೆಯಾದ ವೆಂಕಟೇಶ್ ಕುರುಬರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಸಿದರು ಹಾಗೂ ಎರಡು ವರ್ಷ ಕೋಮದಲ್ಲಿದ್ದು ಮೂರು ತಿಂಗಳ ಹಿಂದೆ ಮಾರುತಿ ಮೃತಪಟ್ಟಿದ್ದ ಈ ಘಟನೆಗೆ ಲಿಂಗರಾಜ್ ಕ್ಯಾಂಪಿನ ರವಿ ಹಾಗೂ ಅವರ ಅಳಿಯಂದರಾದ ಭೀಮ, ಆಕಾಶ್, ಇಂದ್ರೇಶ್ ಹಾಗೂ ವೀರೇಶ್ ಕಾರಣ ಎಂದು ವೆಂಕಟೇಶ ಕುರುಬರ ಪೊಲೀಸರಿಗೆ ಹೇಳಿಕೆ ನೀಡಿ ಅವರ ಮೇಲೆ ಪ್ರಕರಣ ದಾಖಲಿಸಲು ಕಾರಣನಾಗಿದ್ದ.
ಅಲ್ಲದೆ ರವಿ ಜಿಲ್ಲೆಯಿಂದ ಗಡಿಪಾರಾಗಲು ಈ ಪ್ರಕರಣ ಕಾರಣವಾಗಿತ್ತು ಎನ್ನಲಾಗಿದೆ ಇದೇ ದ್ವೇಷದ ಹಿನ್ನೆಲೆ ಹಗೆತನ ಸಾಧಿಸಿದ ರವಿ ಮತ್ತು ಆತನ ಗ್ಯಾಂಗ್ ಈ ಕೃತ್ಯ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















