“ಸ್ವದೇಶೀ” ಎಂಬ ಪದವು ಕೇವಲ ಉತ್ಪನ್ನ ಅಥವಾ ವಸ್ತುವಿನ ಆಯ್ಕೆ ಅಲ್ಲ, ಅದು ನಮ್ಮ ರಾಷ್ಟ್ರಭಕ್ತಿಯ ಪ್ರತಿಬಿಂಬ, ದೇಶದ ಅಭಿವೃದ್ಧಿಗೆ ಕೊಡುವ ಒಂದು ಅಮೂಲ್ಯ ಕೊಡುಗೆ. “ಸ್ವದೇಶೀ” ಎಂದರೆ ಅದರಲ್ಲಿ ಸ್ವಾವಲಂಬನೆ, ಆತ್ಮಗೌರವ, ಆರ್ಥಿಕ ಶಕ್ತಿ ಮತ್ತು ರಾಷ್ಟ್ರೀಯ ಏಕತೆಯ ತತ್ವ ಸೇರಿಕೊಂಡಿದೆ.
ಶತಮಾನಗಳ ಕಾಲ ಜಗತ್ತಿನಲ್ಲಿ ಭಾರತ ಶ್ರೀಮಂತ ರಾಷ್ಟ್ರವೆಂದು ಖ್ಯಾತಿ ಪಡೆದಿತ್ತು. ನಮ್ಮ ಹಸ್ತಕಲೆ, ಹತ್ತಿ, ರೇಷ್ಮೆ, ಮಸಾಲೆ ಪದಾರ್ಥಗಳು ವಿಶ್ವದಾದ್ಯಂತ ಪ್ರಸಿದ್ಧವಾಗಿದ್ದವು. ಆದರೆ ವಿದೇಶಿ ಆಕ್ರಮಣಗಳು ಮತ್ತು ಕಾಲೋನಿಯಲಿಸಂ ನಮ್ಮ ದೇಶದ ಸಂಪತ್ತು ಹಾಳುಮಾಡಿದವು. ಇಂದು ಜಾಗತೀಕರಣದ ಹೊಳೆ ನಮ್ಮನ್ನು ಆವರಿಸಿರುವಾಗ, ಮತ್ತೆ ಒಂದು ಬಾರಿ ಸ್ವದೇಶೀ ಬಳಕೆಯ ಅವಶ್ಯಕತೆ ಎದುರಾಗುತ್ತಿದೆ. ವಿದೇಶಿ ಕಂಪನಿಗಳ ಆಕರ್ಷಕ ಜಾಹೀರಾತುಗಳು, ಕಡಿಮೆ ಬೆಲೆ ಮತ್ತು ಆಧುನಿಕ ಪ್ಯಾಕೇಜಿಂಗ್ ನಮ್ಮನ್ನು ಸೆಳೆಯುತ್ತವೆ. ಆದರೆ ದೀರ್ಘಾವಧಿಯಲ್ಲಿ ಇದು ದೇಶದ ಆರ್ಥಿಕತೆಗೆ ಹಾನಿ ಮಾಡುತ್ತಿದೆ.
ಸ್ವದೇಶೀ ಬಳಕೆ ಏಕೆ ಮುಖ್ಯ
- ಆರ್ಥಿಕ ಬಲವರ್ಧನೆ. ನಾವು ಪ್ರತಿದಿನ ಖರೀದಿಸುವ ವಸ್ತುಗಳು ಕೇವಲ ಉಪಯೋಗದ ಸಾಧನಗಳಲ್ಲ. ಅವುಗಳ ಮೂಲಕ ನಮ್ಮ ಹಣ ಹರಿಯುತ್ತದೆ. ನಾವು ವಿದೇಶಿ ಬ್ರಾಂಡ್‌ಗಳ ಉತ್ಪನ್ನಗಳನ್ನು ಖರೀದಿಸಿದಾಗ, ನಮ್ಮ ದುಡಿಯುವ ಹಣದ ಒಂದು ಭಾಗ ವಿದೇಶಗಳಿಗೆ ಹೋಗುತ್ತದೆ. ಆದರೆ ಸ್ವದೇಶೀ ವಸ್ತುಗಳನ್ನು ಬಳಸಿದಾಗ ಆ ಹಣ ದೇಶದಲ್ಲಿಯೇ ಉಳಿದು, ಸ್ಥಳೀಯ ಕೈಗಾರಿಕೆಗಳ ಅಭಿವೃದ್ಧಿಗೆ ನೆರವಾಗುತ್ತದೆ.
- ಉದ್ಯೋಗ ಸೃಷ್ಟಿ. ಸ್ವದೇಶೀ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದಂತೆ, ಸಾವಿರಾರು ಸಣ್ಣ-ಮಧ್ಯಮ ಉದ್ಯಮಗಳು ಬೆಳೆಯುತ್ತವೆ. ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು – ಎಲ್ಲರಿಗೂ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ. ಇದು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತದೆ.
- ಸಂಸ್ಕೃತಿ ಸಂರಕ್ಷಣೆ. ನಮ್ಮ ಉತ್ಪನ್ನಗಳು ಕೇವಲ ವಸ್ತುಗಳಲ್ಲ, ಅವುಗಳಲ್ಲಿ ನಮ್ಮ ಸಂಸ್ಕೃತಿ, ಪರಂಪರೆ, ಸೃಜನಶೀಲತೆ ಅಡಗಿವೆ. ಸ್ಥಳೀಯ ಹಸ್ತಕಲೆಗಳು, ಹಸ್ತಕಸೂತಿ, ಕೈಮಗ್ಗ ವಸ್ತ್ರಗಳು, ಸ್ಥಳೀಯ ಆಹಾರ ಪದಾರ್ಥಗಳು – ಇವುಗಳನ್ನು ಬಳಸುವುದರಿಂದ ನಮ್ಮ ಸಂಸ್ಕೃತಿ ಜೀವಂತವಾಗಿರುತ್ತದೆ.
- ಪರಿಸರ ಸ್ನೇಹಿ ಆಯ್ಕೆ. ವಿದೇಶದಿಂದ ಬರುವ ಉತ್ಪನ್ನಗಳಿಗೆ ಸಾರಿಗೆ ವೆಚ್ಚ ಹೆಚ್ಚು. ಇದರ ಪರಿಣಾಮವಾಗಿ ಇಂಧನ ಬಳಕೆ ಮತ್ತು ಕಾರ್ಬನ್ ಉಳಿತಾಯ ಹೆಚ್ಚುತ್ತದೆ. ಸ್ಥಳೀಯ ಉತ್ಪನ್ನಗಳನ್ನು ಬಳಸುವುದರಿಂದ ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ. ಹೀಗಾಗಿ ಸ್ವದೇಶೀ ಬಳಕೆ ಪ್ರಕೃತಿ ಸಂರಕ್ಷಣೆಗೆ ಸಹಾಯಕ.
ನಾವು ಮಾಡಬಹುದಾದ ಚಿಕ್ಕ ಹೆಜ್ಜೆಗಳು
- ದಿನನಿತ್ಯದ ಬಳಕೆ ಸಾಮಗ್ರಿಗಳಲ್ಲಿ ಸ್ವದೇಶೀ ಆಯ್ಕೆ:
ಸಾಬೂನು, ತೈಲ, ಆಹಾರ ಪದಾರ್ಥಗಳು, ಬಟ್ಟೆ, ಇತರೆ ಇವುಗಳನ್ನು ಖರೀದಿಸುವಾಗ ಮೊದಲು ಭಾರತೀಯ ಬ್ರಾಂಡ್‌ಗಳನ್ನು ಆರಿಸಬೇಕು. - ಸ್ಥಳೀಯ ವ್ಯಾಪಾರಿಗಳಿಗೆ ಬೆಂಬಲ. ಶಾಪಿಂಗ್ ಮಾಲ್‌ಗಳ ಬದಲು ಸ್ಥಳೀಯ ಅಂಗಡಿಗಳಿಂದ ಖರೀದಿ ಮಾಡುವುದು ಸಣ್ಣ ವ್ಯಾಪಾರಿಗಳಿಗೆ ಜೀವನಾಡಿ.
- ಗ್ರಾಮೀಣ ಕೈಗಾರಿಕೆಗಳಿಗೆ ಉತ್ತೇಜನ: ಹಸ್ತಕಲೆ, ಖಾದಿ, ಹ್ಯಾಂಡ್ಲೂಮ್ ವಸ್ತುಗಳನ್ನು ಬಳಕೆ ಮಾಡುವುದರಿಂದ ಗ್ರಾಮೀಣ ಉದ್ಯಮಿಗಳಿಗೆ ಬೆಂಬಲ ಸಿಗುತ್ತದೆ.
- ಜಾಗೃತಿ ಮೂಡಿಸುವುದು: ನಮ್ಮ ಸ್ನೇಹಿತರು, ಕುಟುಂಬದವರು, ವಿದ್ಯಾರ್ಥಿಗಳು – ಎಲ್ಲರಿಗೂ ಸ್ವದೇಶೀ ಬಳಕೆಯ ಮಹತ್ವವನ್ನು ವಿವರಿಸುವುದು.
ಆನ್ಲೈನ್ ಬೆಂಬಲ: ಇಂದಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ಪ್ರಭಾವಿ ಸಾಧನ. ಸ್ಥಳೀಯ ಬ್ರಾಂಡ್‌ಗಳ ಬಗ್ಗೆ ಶೇರ್ ಮಾಡುವುದು, ರಿವ್ಯೂ ಬರೆಯುವುದು, ಪ್ರೋತ್ಸಾಹಿಸುವುದು ದೊಡ್ಡ ಬದಲಾವಣೆಯನ್ನು ತರುತ್ತದೆ.
ಯುವಜನರು ಮತ್ತು ಸ್ವದೇಶೀ ಚಳವಳಿ
ಇಂದಿನ ಯುವಕರಿಗೆ ಫ್ಯಾಷನ್, ಟ್ರೆಂಡ್ ಮತ್ತು ಆಕರ್ಷಕ ಬ್ರಾಂಡ್‌ಗಳ ಮೇಲೆ ಹೆಚ್ಚು ಆಸಕ್ತಿ ಇರುತ್ತದೆ. ಆದರೆ ನಾವೇ ನಮ್ಮ ಸಂಸ್ಕೃತಿಯನ್ನು ಗರ್ವದಿಂದ ತೊಟ್ಟುಕೊಂಡರೆ, ಅದು ನಿಜವಾದ ಫ್ಯಾಷನ್. ಖಾದಿ ಕುರ್ಚಿಯೂ ಟ್ರೆಂಡ್ ಆಗಬಹುದು, ಸ್ಥಳೀಯ ಕೈಮಗ್ಗ ಶರ್ಟ್‌ಗಳೂ ಸ್ಟೈಲಿಶ್ ಆಗಬಹುದು. ಇದು ಯುವಕರ ಕೈಯಲ್ಲಿರುವ ಶಕ್ತಿ.
ಸ್ವದೇಶೀ ಬಳಕೆಯಿಂದ ಸಮಾಜದಲ್ಲಿ ಬರುವ ಬದಲಾವಣೆ. ಸ್ವದೇಶೀ ಬಳಕೆ ಕೇವಲ ಆರ್ಥಿಕ ಬೆಳವಣಿಗೆಯಲ್ಲ, ಅದು ಸಾಮಾಜಿಕ ಬದಲಾವಣೆಗೂ ಕಾರಣವಾಗುತ್ತದೆ. ಜನರು ಸ್ಥಳೀಯ ಉತ್ಪನ್ನಗಳನ್ನು ಬಳಸಿದಾಗ ಗ್ರಾಮ-ನಗರ ನಡುವಿನ ಅಂತರ ಕಡಿಮೆಯಾಗುತ್ತದೆ. ಗ್ರಾಮೀಣ ಕಾರ್ಮಿಕರಿಗೆ ನಗರ ಮಾರುಕಟ್ಟೆಯಲ್ಲಿ ಬೇಡಿಕೆ ಸಿಗುತ್ತದೆ. ಇದರಿಂದ ಸಮಾನತೆ, ಸಹಕಾರ ಮತ್ತು ಆತ್ಮಗೌರವ ಬಲವಾಗುತ್ತದೆ.
ಜಾಗತಿಕ ಮಟ್ಟದಲ್ಲಿ ಸ್ವದೇಶೀ. ಇಂದು ಚೀನಾ, ಜಪಾನ್, ದಕ್ಷಿಣ ಕೊರಿಯಾ ಈ ದೇಶಗಳು ತಮ್ಮ ಉತ್ಪನ್ನಗಳನ್ನು ವಿಶ್ವಕ್ಕೆ ತಲುಪಿಸಿವೆ. ಏಕೆಂದರೆ ಅವು ತಮ್ಮ ದೇಶೀಯ ಉತ್ಪನ್ನಗಳಿಗೆ ಆದ್ಯತೆ ಕೊಟ್ಟವು. ಭಾರತವು ಸಹ ತನ್ನ ಶ್ರೀಮಂತ ಸಂಪನ್ಮೂಲಗಳು, ಮಾನವ ಸಂಪತ್ತು ಮತ್ತು ತಾಂತ್ರಿಕ ಜ್ಞಾನವನ್ನು ಬಳಸಿ ವಿಶ್ವಕ್ಕೆ ಮುಂಚೂಣಿಯಾಗಬಹುದು. ಆದರೆ ಇದಕ್ಕಾಗಿ ಮೊದಲ ಹೆಜ್ಜೆ ನಮ್ಮ ದೇಶೀಯ ಉತ್ಪನ್ನಗಳಿಗೆ ನಾವು ತೋರಿಸುವ ಬೆಂಬಲ.
ಸ್ವದೇಶೀ ಬಳಿಸಿ, ದೇಶ ಉಳಿಸಿ. ಅದು ಕ್ರಿಯಾಶೀಲ ಜೀವನಶೈಲಿಯಾಗಬೇಕು. ನಾವು ಪ್ರತಿದಿನ ಮಾಡುವ ಚಿಕ್ಕ ಆಯ್ಕೆಗಳು ಯಾವ ಸಾಬೂನು ಬಳಸಿ ಸ್ನಾನ ಮಾಡುವುದು, ಯಾವ ಅನ್ನ ತಿನ್ನುವುದು, ಯಾವ ಬಟ್ಟೆ ತೊಡುವುದು ಇವೆಲ್ಲವೂ ದೇಶದ ಆರ್ಥಿಕತೆ ಮೇಲೆ ಮತ್ತು ಭವಿಷ್ಯವನ್ನು ನಿರ್ಧರಿಸುತ್ತವೆ.ನಮ್ಮ ಹೊಣೆಗಾರಿಕೆ ನಮ್ಮದೇ ದೇಶವನ್ನು ಉಳಿಸುವುದು, ಬಲಪಡಿಸುವುದು. ಆದಷ್ಟು ಸ್ವದೇಶೀ ವಸ್ತುಗಳನ್ನು ಬಳಸಿ, ನಮ್ಮ ದೇಶದ ಹೆಮ್ಮೆ ಹೆಚ್ಚಿಸೋಣ.
ಹಲವು ದಶಕಗಳ ಹಿಂದೆ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಪ್ರಭಾವದಿಂದ ಭಾರತದ ಆರ್ಥಿಕ, ರಾಜತಾಂತ್ರಿಕ, ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿ ಸ್ವದೇಶೀ ಚಿಂತನೆಯ ಜಾಗೃತಿ ಮೂಡಿಸಿದವರು ರಾಜೀವ್ ದೀಕ್ಷಿತ್.ಅದು ವಿದೇಶೀ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ವ್ಯಾಪಾರ ವಹಿವಾಟುಗಳ ಮೂಲಕ ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತಿದ್ದ ಸಮಯ. ಆಧುನಿಕ ಜೀವನ ಶೈಲಿ, ಪ್ರತಿಭಾ ಪಲಾಯನ, ಭಾರತದ ವಿದೇಶೀ ಸಾಲ, ರೂಪಾಯಿ ಅಪಮೌಲ್ಯ, ಕಾಳಧನ ಮತ್ತು ವಿದೇಶೀ ಬಹುರಾಷ್ಟ್ರೀಯ ಕಂಪನಿಗಳಿಂದಾಗುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಆರಂಭಿಸಿದರು. ಪಾಶ್ಚ್ಯಾತ್ಯ ಸಂಸ್ಕೃತಿಯ ಪ್ರಭಾವದಿಂದ ಬದಲಾಗುತ್ತಿದ್ದ ಪರಿಣಾಮ ಮತ್ತು ಅಭಿವೃದ್ಧಿಗೆ ಮಾರಕವೆನಿಸಿದ್ದ ಪ್ರತಿಭಾ ಪಲಾಯನದಂತಹ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿದ್ದರು ಅದುವೇ ಸ್ವದೇಶೀ ಚಳುವಳಿ.ಕೇವಲ ವ್ಯವಸ್ಥೆ ಹಾಗೂ ಸರ್ಕಾರಗಳನ್ನೇ ದೂಷಿ ಪ್ರಯೋಜನವಿಲ್ಲ ಎಂದು ಅರಿತ ಅವರು ಬಹುರಾಷ್ಟ್ರೀಯ ಕಂಪನಿಗಳ ಪ್ರಭಾವ ಕುಗ್ಗಿಸಬೇಕೆಂದರೆ ಸ್ವದೇಶೀ ಜೀವನ ಶೈಲಿಯ ಪುನರ್ ಪ್ರತಿಷ್ಠಾಪನೆ ಆಗಬೇಕು ಎಂಬುದನ್ನು ಮನಗಂಡರು. ಗಾಂಧೀಜಿ, ಸ್ವಾಮಿ ವಿವೇಕಾನಂದ, ಬಾಲಗಂಗಾಧರ ತಿಲಕರು ಈ ಹಿಂದೆ ಸ್ವದೇಶೀ ಚಿಂತನೆಯ ವಿಶ್ವರೂಪವನ್ನು ಇಡೀ ಜಗತ್ತಿಗೇ ತೋರಿಸಿಕೊಟ್ಟಿದ್ದರು. ಅದನ್ನು ಮರೆತು ಬಹುರಾಷ್ಟ್ರೀಯ ಕಂಪನಿಗಳ ತೆಕ್ಕೆಯಲ್ಲಿ ಮಲಗಿದ ಭಾರತವನ್ನು ಮತ್ತೆ ಸ್ವದೇಶೀ ಆಂದೋಲನದ ಮೂಲಕ ಎಚ್ಚರಿಸುವ ಪ್ರಯತ್ನ ಮಾಡಿದರು. “ಸ್ವದೇಶಿ ಎನ್ನುವುದು ಕೇವಲ ಕಲ್ಪನೆಯಲ್ಲ, ಅದು ಪ್ರಕೃತಿ ದತ್ತವಾದದ್ದು. ಅದೊಂದು ಜೀವನ ಶೈಲಿ, ಸ್ವದೇಶಿ ಇಲ್ಲದೆ ಭಾರತೀಯತೆಯೇ ಇಲ್ಲ, ಸ್ವಾತಂತ್ಯ್ರದ ನಿಜವಾದ ಅರ್ಥ ಸಿಗುವುದೇ ಸ್ವದೇಶಿ ಚಿಂತನೆ ಮತ್ತು ಅದರ ಪರಿಣಾಮಕಾರಿ ಅನುಷ್ಠಾನದಿಂದ. ನಮ್ಮ ಸ್ವದೇಶೀ ಪರಿಸರಲ್ಲಿ ಉತ್ಪಾದನೆಯಾಗುವ ವಸ್ತುಗಳಲ್ಲಿ ಈ ನೆಲದ ಸಂಸ್ಕೃತಿ ಹಾಗೂ ಪರಂಪರೆಯ ಸೊಗಡಿದೆ. ಹಾಗಾಗಿ ಸ್ವದೇಶಿ ವಸ್ತುಗಳನ್ನೇ ಉತ್ಪಾದಿಸಬೇಕು ಮತ್ತು ದಿನಬಳಕೆಯಲ್ಲಿ ಅವನ್ನೇ ಉಪಯೋಗಿಸಬೇಕು, ಬಹುರಾಷ್ಟ್ರೀಯ ಉತ್ಪನ್ನಗಳನ್ನು ಧಿಕ್ಕರಿಸಿ ತಿರಸ್ಕರಿಸಬೇಕು” ಎಂದು ದೇಶಾದ್ಯಂತ ತಮ್ಮ ಆಂದೋಲನದ ಮೂಲಕ ಕರೆ ನೀಡಿದರು.ಆದರೆ ಅವರು ಹೋರಾಡುತ್ತಲೆ ಮರೆಯಾದರು. ಇಂದು ಅವರ ವಿಚಾರಮುನ್ನಲಗೆ ಬಂದಿದೆ.
ನರೇಂದ್ರ ಮೋದಿ ಸೆಪ್ಟೆಂಬರ್ 21ರಂದು ಮಾಡಿದ ಭಾಷಣದಲ್ಲಿ ಸ್ವಾವಲಂಬನೆ ಮತ್ತು ಸ್ವದೇಶೀ ಮಂತ್ರ ಮುಂದಿಟ್ಟಿದ್ದಾರೆ. ದೇಶದ ಜನರು ಸ್ವದೇಶಿ ವಸ್ತುಗಳನ್ನು ಖರೀದಿಸಬೇಕು ಮತ್ತು ಮಾರಬೇಕು. ವಿದೇಶೀ ಸರಕುಗಳ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು ಎಂದು ಕರೆ ನೀಡಿದ್ದಾರೆ. ಇವತ್ತು ಗೊತ್ತಿದ್ದೋ ಗೊತ್ತಿಲ್ಲದೆಯೋ ಹಲವು ವಿದೇಶೀ ಉತ್ಪನ್ನಗಳು ನಮ್ಮ ನಿತ್ಯ ಜೀವನದ ಭಾಗಗಳಾಗಿವೆ. ಜನರು ಸ್ಥಳೀಯ ಉದ್ದಿಮೆಗಳನ್ನು ಬೆಂಬಲಿಸಬೇಕು. ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಹಿಂದೆ ದೇಶದ ಯುವಜನರ ಶ್ರಮ ಇರುತ್ತದೆ. ಜನರು ಈ ಉತ್ಪನ್ನಗಳನ್ನು ಖರೀದಿಸಬೇಕು. ಪ್ರತಿಯೊಂದು ಮನೆಯೂ ಸ್ವದೇಶೀಯತೆಗೆ ಸಂಕೇತವಾಗಿರಬೇಕು. ಪ್ರತಿಯೊಂದು ಅಂಗಡಿಯೂ ಸ್ವದೇಶೀ ಎಂದು ಗರ್ವದಿಂದ ಹೇಳಬೇಕು’ ಎಂದು ಪ್ರಧಾನಿಗಳು ಹೇಳಿದರು.
ಸ್ವದೇಶಿ ಆಂದೋಲನಕ್ಕೆ ಮತ್ತೆ ನಾವು ಚಾಲನೆ ನೀಡಬೇಕಾಗಿದೆ. ಮನೆ ಮನೆಯಿಂದ ಸ್ವದೇಶಿ ವಸ್ತುಗಳ ಬಳಕೆಯನ್ನು ಪ್ರಾರಂಭ ಮಾಡಿದರೆ ಸಾಕು ಆಂದೋಲನ ತಾನೇ ತಾನಾಗಿ ದೇಶದ ಭದ್ರತೆಗೆ ದೇಶದ ಆರ್ಥಿಕತೆಗೆ ದೇಶದ ಪರಂಪರೆ ಉಳಿಯುವಿಯಲ್ಲಿ ನಮ್ಮ ಕೊಡುಗೆಯನ್ನು ನೀಡಲು ಸಾಧ್ಯವಾಗುವುದು. ಸ್ವದೇಶಿ ವಸ್ತುಗಳ ಬಳಕೆಯನ್ನು ಬಳಕೆ ಮಾಡೋಣ, ನಮ್ಮವರೆಲ್ಲರಿಗೂ ಕೂಡ ಬಳಕೆ ಮಾಡುವಂತೆ ಪ್ರೇರೇಪಿಸೋಣ ಇದೊಂದು ಚಳುವಳಿಯ ರೂಪದಲ್ಲಿ ಪ್ರಾರಂಭಿಸೋಣ ಇದನ್ನ ಯಾವುದೇ ಸಂಘಟನೆ ಯಾರೂ ಹೇಳುವ ಅವಶ್ಯಕತೆ ಇಲ್ಲ. ದೇಶದ ನಾಯಕನೇ ಹಿಡಿದ ಮೇಲೆ ದೇಶದ ಅಭಿವೃದ್ಧಿಗೋಸ್ಕರ, ಸ್ವಾಭಿಮಾನಕ್ಕೋಸ್ಕರ, ಈ ಆಂದೋಲನಕ್ಕೆ ನಾವೆಲ್ಲಾ ಕೈಜೋಡಿಸೋಣ.

- ಶಿವನಗೌಡ ಪೊಲೀಸ್ ಪಾಟೀಲ್, ನವಲಹಳ್ಳಿ
ಲೇಖಕರು, ಉಪನ್ಯಾಸಕರು
9845646370.



















