೧.
ನೋಡಿ ನೋಡಿ ಸಾಕಾಗಿದೆ,
ಅಯ್ಯಾ, ಈ ಸಮಾಜದ
ಈ ಜನರ ನಡೆ ನುಡಿಗಳನು,
ಅದಕೇ ಅಲ್ಲವೇನಯ್ಯ, ಅಣ್ಣ
ಬಸವಣ್ಣ ಹೇಳಿದ್ದು, ಕಣ್ಣು ಕಾಣದ ಅಂಧಕನ ಮಾಡೆಂದು,
ಇದೆಂಥ ಕಾಲವೆಂದ ಶಿವ ಶಿವಾ!
೨.
ನಾ ನಿನಗೆ ಮಾಡಿರುವುದೇನು?
ನೀ ನನಗೆ ಮಾಡಿರುವುದೇನು?
ನಾ ಮಾಡಿರುವುದು
ನನದಲ್ಲ..
ನೀ ಮಾಡಿರುವುದು
ನಿನದಲ್ಲ..
ನಾ, ನೀ, ಎಂದು
ಸುಮ್ಮನೆ
ಬಡಿದಾಡುತಿರುವೆವಲ್ಲ
ಶಿವ ಶಿವಾ!
೩.
ಜಾತಿವಾದದ ಬಳ್ಳಿಯಿದು
ಎಲ್ಲೆಲ್ಲೂ ಹಬ್ಬುತಿದೆ ನೋಡಾ,
ಸೀಮಿತ ಆಲೋಚನೆಯ
ಸಂಕುಚಿತ ಬುದ್ಧಿಯ
ಸ್ವಾರ್ಥಿಗಳು
ನಾವಾಗಿಹೆವು ನೋಡಾ,.
ದೂರದೃಷ್ಟಿ ಇಲ್ಲದ
ಮಂದಮತಿ ನಾವಾಗಿಹೆವು ನೋಡಾ..
ಅಧಿಕಾರ ಲಾಲಸೆಗೆ
ಜೋತು ಬಿದ್ದವರು
ನಾವು ನೋಡಾ..ಶಿವ ಶಿವಾ!
೪.
ಪಂಪ ಮಹಾ ಕವಿ ಹೇಳಿದ
“ಮಾನವ ಕುಲಂ ತಾನೊಂದೇ ವಲಂ”ಮಾತೀಗ ಅರ್ಥ ಕಳೆದುಕೊಂಡಿದೆ ಅಯ್ಯ,
ಒಂದೊಂದು ತಲೆಯೂ
ಸಹಸ್ರಾರು ಕುಲಂ,
ಆಗಿಹುದಲ್ಲವಯ್ಯ ಶಿವ ಶಿವಾ!
- ಶಿವಪ್ರಸಾದ್ ಹಾದಿಮನಿ.✍️
ಕನ್ನಡ ಉಪನ್ಯಾಸಕರು.
ಕೊಪ್ಪಳ. 583231.
ಮೊಬೈಲ್.. 7996790189.




















