ಕಲಬುರಗಿ/ ಚಿತ್ತಾಪುರ :ರಾಜ್ಯದಲ್ಲಿ ಹಿಂದುಳಿದ ತಾಲೂಕಾಗಿದ್ದ ಚಿತ್ತಾಪುರವನ್ನು ಅಭಿವೃದ್ಧಿಯ ನಂ.1 ತಾಲೂಕಿನ ಕೀರ್ತಿ ಕ್ಷೇತ್ರದ ಶಾಸಕರಾಗಿರುವ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಹೇಳಿದರು.
ಪಟ್ಟಣದ ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ತಾಪುರ ತಾಲೂಕು ಬ್ಯಾಡ್ಮಿಂಟನ್ ಅಸೋಸಿಯೇಷನ್, ಗುಲ್ಬರ್ಗಾ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಓಪನ್ ಡಬಲ್ಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್–2025 (ಮೆನ್ಸ್, ವುಮೆನ್ಸ್ ಹಾಗೂ 40+ ಮೆನ್ಸ್ ಡಬಲ್ಸ್) ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ ಪ್ರಜಾ ಸೌಧ, ವಿದ್ಯಾರ್ಥಿ ವಸತಿ ನಿಲಯಗಳು, ಶಾಲಾ–ಕಾಲೇಜುಗಳು, ವಿವಿಧ ಸಮುದಾಯ ಭವನಗಳು, ಕ್ರೀಡಾಂಗಣಗಳು, ಆಸ್ಪತ್ರೆಗಳು ಹಾಗೂ ಯುವಜನರ ಸಬಲೀಕರಣಕ್ಕಾಗಿ ಡಿಜಿಟಲ್ ಗ್ರಂಥಾಲಯಗಳ ನಿರ್ಮಾಣದ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರವನ್ನು ಅಭಿವೃದ್ಧಿಯ ಮಾದರಿ ತಾಲೂಕಾಗಿಸಿದ್ದಾರೆ ಎಂದು ಅವರು ಹೇಳಿದರು.
ಕ್ರೀಡಾಂಗಣದ ವಿವಿಧ ಕಾಮಗಾರಿಗಳಿಗೆ ಈಗಾಗಲೇ ₹11 ಲಕ್ಷ ಅನುದಾನ ನೀಡಿದ್ದು, ಒಳಾಂಗಣ ಕ್ರೀಡಾಂಗಣದಲ್ಲಿ ವಿದ್ಯುತ್ ವ್ಯವಸ್ಥೆ ಬಲಪಡಿಸಲು ಮತ್ತೇ ₹5 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಪತ್ರಕರ್ತ ಕಾಶಿನಾಥ ಗುತ್ತೇದಾರ ಮಾತನಾಡಿ, “ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಯತ್ನದಿಂದ ಚಿತ್ತಾಪುರದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಿದ್ದು, ಇದರಿಂದ ನಿರಂತರ ಕ್ರೀಡಾ ಚಟುವಟಿಕೆಗಳು ನಡೆಯುತ್ತಿವೆ. ಯುವಜನರಲ್ಲಿ ಕ್ರೀಡಾ ಆಸಕ್ತಿ ಹೆಚ್ಚುತ್ತಿದೆ,” ಎಂದರು.
ಅವರು, ಬ್ಯಾಡ್ಮಿಂಟನ್ ಅಸೋಸಿಯೇಷನ್ ಒಳಾಂಗಣ ಕ್ರೀಡಾಂಗಣವನ್ನು ಉತ್ತಮವಾಗಿ ನಿರ್ವಹಿಸುತ್ತಿರುವುದರಿಂದ ಅದು ಸ್ವಚ್ಛ ಹಾಗೂ ಆಕರ್ಷಕವಾಗಿ ಕಾಣುತ್ತಿದೆ ಎಂದರು.
ಕ್ರೀಡಾಪಟುಗಳು ಯಾವುದೇ ದುಷ್ಪ್ರವೃತ್ತಿಗಳಿಗೆ ಬಲಿಯಾಗದೆ ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ನೀಡಿದರು.
ಬ್ಯಾಡ್ಮಿಂಟನ್ ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ ಯೋಗೇಶ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಅಡಿಷನಲ್ ಎಸ್ ಪಿ ಮಹೇಶ್ ಮೇಘಣ್ಣವರ್, ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‌ಐ ಮಂಜುನಾಥ ರೆಡ್ಡಿ, ಉದ್ಯಮಿ ಶಿವರೆಡ್ಡಿ ಪಾಲಪ್, ಎಸ್‌ಎಸ್‌ಕೆ ಶಾಲೆಯ ಕಾರ್ಯದರ್ಶಿ ರವಿ ಕುಲಕರ್ಣಿ, ಪುರಸಭೆ ಸದಸ್ಯ ಶಿವರಾಜ್ ಪಾಳೇದ್, ಜಿಲ್ಲಾ ಕ್ರೀಡಾಧಿಕಾರಿ ಸಂಜೀವ ಬಾಂಡೆ, ಕಾಂಗ್ರೆಸ್ ಮುಖಂಡರು ಶರಣಪ್ಪ ನಾಟೀಕಾರ ಮತ್ತು ಕರಣಕುಮಾರ್ ಅಲ್ಲೂರ ಉಪಸ್ಥಿತರಿದ್ದರು.
ಅಸೋಸಿಯೇಷನ್ ಪದಾಧಿಕಾರಿಗಳಾದ ಸಂತೋಷ ಕಲಾಲ್, ಶ್ರೀನಿವಾಸ ಪೇಂದು, ಖದೀರ್ ಪಾಶಾ, ರೋಹಿತ್ ಚವ್ಹಾಣ, ಲಖನಸಿಂಗ್ ರಜಪುತ್, ರಾಜಶೇಖರ್ ಬಳ್ಳಾ, ಗುರುಲಿಂಗಯ್ಯ ಸ್ವಾಮಿ, ಚಂದ್ರಶೇಖರ ಉಟಗೂರ, ವಿಜಯಕುಮಾರ್ ಗಡ್ಡಿಮನಿ, ವೀರಭದ್ರಪ್ಪ ಗುರುಮಠಕಲ್, ದೇವೇಂದ್ರಪ್ಪ ದೊರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾರ್ಯದರ್ಶಿ ಬಾಬು ಕಾಶಿ ನಿರೂಪಿಸಿದರು.
ವರದಿ: ಮೊಹಮ್ಮದ್ ಅಲಿ, ಚಿತ್ತಾಪುರ




















