ರಾಯಚೂರು/ ಸಿಂಧನೂರು :
ಶಿಕ್ಷಕರು ಸದಾ ಶಿಕ್ಷಣ ಮತ್ತು ಮಕ್ಕಳ ಬಗ್ಗೆ ಯೋಚನೆ ಮಾಡಿ ಮಕ್ಕಳು ಮೆಚ್ಚುವಂತಹ ಶಿಕ್ಷಕರಾಗಬೇಕು ಎಂದು ಅಂಬೇಡ್ಕರ್ ನಗರ ಶಾಲೆಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕ ನಾರಾಯಣಾಚಾರ್ಯ ಜ್ಯೋಷಿ ಹೇಳಿದರು.
ಅವರು ನಗರದ ಬಿ ಆರ್ ಅಂಬೇಡ್ಕರ್ ವಾರ್ಡಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಯೋ ನಿವೃತ್ತಿ ಸನ್ಮಾನ, ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ಶಿಕ್ಷಕರು ಜನಪ್ರತಿನಿಧಿಗಳನ್ನು, ಇಲಾಖೆಯ ಅಧಿಕಾರಿಗಳನ್ನು ಮೆಚ್ಚಿಸುವ ಕೆಲಸ ಮಾಡುವ ಬದಲಾಗಿ ಪ್ರತಿಯೊಬ್ಬರೂ ಮಕ್ಕಳು ಮೆಚ್ಚುವಂತಹ ಶಿಕ್ಷಕರು ನೀವಾಗಬೇಕು ಎಂದರು.
ಕನಕ ನಗರ ಕ್ಲಸ್ಟರ್ ಸಂಪನ್ಮೂಲ ಕೇಂದ್ರದ ಸಿ ಆರ್ ಪಿ ಹನುಮಂತಪ್ಪ ಮಾತನಾಡಿ, ಶ್ರೀಯುತ ಜೋಶಿ ಅವರು ಸದಾ ಮಕ್ಕಳ ಕಲಿಕೆಯ ಬಗ್ಗೆ ಆಲೋಚನೆ ಮಾಡುತ್ತಿದ್ದರು. ಜೊತೆಗೆ ಇಲಾಖೆಯೂ ವಹಿಸುವ ಎಲ್ಲ ಕೆಲಸ ಕಾರ್ಯಗಳನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಿದ್ದರು ಎಂದರು.
ವಾರ್ಡಿನ ಮುಖಂಡರು ಹಾಗೂ ನಿವೃತ್ತ ಅಭಿಯಂತರರಾದ ಬಿಎಸ್ಎನ್ಎಲ್ ಯಮನಪ್ಪ ಅವರು ಮಾತನಾಡುತ್ತಾ, ನಮ್ಮ ವಾರ್ಡಿನ ಮಕ್ಕಳಿಗೆ ಅತ್ಯುತ್ತಮವಾಗಿ ಪಾಠ ಮಾಡುವ ಮೂಲಕ ಮಕ್ಕಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.
ಆಂಗ್ಲ ಭಾಷೆ ಶಿಕ್ಷಕ ವೀರೇಶ ಗೋನವಾರ ಮಾತನಾಡುತ್ತಾ, ಶ್ರೀಯುತರು ಸದಾ ಕಾಲ ಕ್ರಿಯಾಶೀಲರಾಗಿ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಜೊತೆಗೆ ಅನೇಕ ಸಂಘಟನಾತ್ಮಕ ಮತ್ತು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು ಎಂದರು.
ಶಾಲೆಯ ಹಿಂದಿನ ಶಿಕ್ಷಕಿ ಸತ್ಯಮ್ಮ ಮಾತನಾಡುತ್ತಾ, ಈ ಶಾಲೆಯಲ್ಲಿರುವ ಪ್ರತಿಯೊಬ್ಬ ಮುಖ್ಯ ಗುರುಗಳ ಹಾಗೂ ಶಿಕ್ಷಕರು ಒಂದು ರೀತಿಯಲ್ಲಿ ಕೂಡು ಕುಟುಂಬದಂತೆ ನಾವೆಲ್ಲಾ ಇದ್ದೆವು. ಅಂದಿನ ನೆನಪುಗಳು ಇಂದಿಗೂ ಶಾಶ್ವತವಾಗಿವೆ. ಶ್ರೀಯುತ ಜೋಶಿ ಅವರು ನಮಗೆ ಗುರುಗಳಂತೆ ಮಾರ್ಗದರ್ಶನ ನೀಡುತ್ತಿದ್ದರು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ನಾಗರಾಜ ಕವಿತಾಳ ವಹಿಸಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ವೆಂಕನಗೌಡ ವಟಗಲ್ಲು, ಶಿಕ್ಷಕರಾದ ರಾಮದಾಸ್ ನಾಯಕ್, ಸಣ್ಣ ಚೆನ್ನಪ್ಪ, ಮುಖ್ಯಗುರು ಶಂಕರ್ ರಾಜಾರಾಮ್ ಇತರರು ಮಾತನಾಡಿದರು.
ವೇದಿಕೆಯ ಮೇಲೆ ವಾರ್ಡಿನ ಮುಖಂಡರಾದ ನಿರುಪಾದಿ ನಾಗಲಾಪುರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷೆ ಮಾನಮ್ಮ ನಾಯ್ಕ, ಹುಸೇನಪ್ಪ ಬಾಲಿ, ದುರುಗೇಶ ಬಾಲಿ, ವಿಜಯ್ ಕುಮಾರ, ಸಂಘದ ಪದಾಧಿಕಾರಿಗಳಾದ ಹುಸೇನ್ ಬಾಷಾ, ನಿವೃತ್ತ ಶಿಕ್ಷಕರಾದ ಸುಮಿತ್ರ, ಶಿಕ್ಷಕರಾದ ನಂದಾದೀಪ, ಸುಕಾಲ್ ಪೇಟೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಹೊನ್ನೂರಪ್ಪ ಕಟ್ಟಿಮನಿ, ಶಿಕ್ಷಕರಾದ ಪರಮೇಶ್ವರಪ್ಪ, ಶಿಕ್ಷಕರಾದ ತಿಮ್ಮಾರೆಡ್ಡಿ, ಶಿವಾರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ



















