
ಬೆಳಗಾವಿ: ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಶನಿವಾರ ಬೃಹತ್ ರೈತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಪ್ರತಿಭಟನೆಯಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಬಂದ ಸಾವಿರಾರು ರೈತರು, ರೈತ ಮುಖಂಡರು ಹಾಗೂ ರಾಜಕಾರಣಿಗಳು ಭಾಗವಹಿಸಿದರು.
ರೈತರು ಕಬ್ಬಿನ ಖರೀದಿ ದರವನ್ನು ಕನಿಷ್ಠ ಪ್ರತಿ ಟನ್ ಗೆ ₹3500 ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಬೇಕು ಹಾಗೂ ಎಲ್ಲಾ ಸಕ್ಕರೆ ಕಾರ್ಖಾನೆಗಳು ಈ ದರವನ್ನು ಅನುಸರಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು.
ಸರ್ಕಾರ ಮತ್ತು ಕಾರ್ಖಾನೆ ಮಾಲೀಕರು ಸೇರಿಕೊಂಡು ರೈತರ ಹಕ್ಕು ಕಸಿದುಕೊಳ್ಳುತ್ತಿರುವುದಾಗಿ ಸಂಘದ ನಾಯಕರು ಆರೋಪಿಸಿದರು.
ಈ ಸಂದರ್ಭದಲ್ಲಿ ಅಥಣಿಯ ಮಾಜಿ ಶಾಸಕ ಶಹಜಾನ್ ಡೊಂಗರಗಾಂವ್ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರ ಪರವಾಗಿ ಧ್ವನಿ ಎತ್ತಿದರು. ಅವರು ತಮ್ಮ ಭಾಷಣದಲ್ಲಿ ಹೇಳಿದರು:
“ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಕ್ಕರೆ ಕಾರ್ಖಾನೆಗಳೊಂದಿಗೆ ಸೇರಿಕೊಂಡು ರೈತರನ್ನು ಮೋಸಗೊಳಿಸುತ್ತಿವೆ. ಪ್ರತಿ ಟನ್ನಿಗೆ ₹5000 ನೀಡಿದರೂ ಸಹ ಯಾವುದೇ ಕಾರ್ಖಾನೆ ನಷ್ಟದಲ್ಲಿರುವುದಿಲ್ಲ. ”
ಅವರ ಈ ಹೇಳಿಕೆಗೆ ರೈತರಿಂದ ಭಾರೀ ಚಪ್ಪಾಳೆ ಮೊಳಗಿತು.
ಪ್ರತಿಭಟನೆಯನ್ನು ರಾಜ್ಯ ರೈತ ಸಂಘದ ಅಧ್ಯಕ್ಷರಾದ ಚನ್ನಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದು, ಯುವ ಪೂಜ್ಯರಾದ ಶಶಾಂಕ್ ಪಡಸಲಗಿ ಗುರುಗಳು ರೈತರಿಗೆ ಆಶೀರ್ವಾದ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಗುರ್ಲಾಪುರ ಕ್ರಾಸ್‌ನಲ್ಲಿ ನಡೆದ ಈ ಬೃಹತ್ ಪ್ರತಿಭಟನೆಯಲ್ಲಿ ರೈತರು ಕಬ್ಬಿನ ದರದ ನ್ಯಾಯಯುತ ನಿರ್ಧಾರ ಕೈಗೊಳ್ಳದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
ವರದಿ. ವಿಠ್ಠಲ ಖೋಕಾಟೆ



















