ಶಿವಮೊಗ್ಗ : ಜವಾಹರಲಾಲ್ ನೆಹರು ನ್ಯೂ ಕಾಲೇಜ್ ಆಫ್ ಇಂಜಿನಿಯರಿಂಗ್ (ಜೆಎನ್ಎನ್‌ಸಿಇ) ನ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಎಂಬಿಎ) ವಿಭಾಗವು, ಇನ್‌ಸ್ಟಿಟ್ಯೂಷನ್‍ಸ್ ಇನೋವೇಶನ್ ಕೌನ್ಸಿಲ್ (IIC) ಸಹಯೋಗದಲ್ಲಿ, ನವೆಂಬರ್ 28 ಮತ್ತು 29 ರಂದು ಎರಡು ದಿನಗಳ ಔಟ್‌ಬೌಂಡ್ ತರಬೇತಿ ಕಾರ್ಯಕ್ರಮವನ್ನು ಪ್ರಥಮ ಸೆಮಿಸ್ಟರ್ ಎಂಬಿಎ ವಿದ್ಯಾರ್ಥಿಗಳಿಗೆ ಆಯೋಜಿಸಿತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ವೈ. ವಿಜಯಕುಮಾರ್ ಅವರು ಉದ್ಘಾಟಿಸಿದರು.
ಜೆ ಎನ್ ಎನ್ ಸಿ ಇ ನಿರ್ದೇಶಕರಾದ ಡಾ. ಸಿ. ಶ್ರೀಕಾಂತ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳ ಸೃಜನಶೀಲತೆ, ಲ್ಯಾಟರಲ್ ಥಿಂಕಿಂಗ್, ತಂಡ ಮನೋಭಾವ, ಆತ್ಮವಿಶ್ವಾಸ, ನಾಯಕತ್ವ ಕೌಶಲ್ಯಗಳನ್ನು ವೃದ್ಧಿ ಪಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.
ಕಾರ್ಯಕ್ರಮಕ್ಕೆ ಖ್ಯಾತ ತರಬೇತುದಾರರಾದ ಬಿಜ್ ಡಯಾಗ್ನೋಸ್ಟಿಕ್ಸ್ ಸಂಸ್ಥಾಪಕರಾದ ಶ್ರೀ ರಮಣಿ ವೆಂಕಟ್ ಮತ್ತು ತಂಡದವರು ವಿದ್ಯಾರ್ಥಿಗಳಿಗೆ ಅಮೂಲ್ಯ ಜ್ಞಾನ, ಅನುಭವ, ತರಬೇತಿಯನ್ನು ನೀಡಿದರು.
ಎರಡು ದಿನಗಳ ಈ ಔಟ್‌ಬೌಂಡ್ ಕಾರ್ಯಕ್ರಮದಲ್ಲಿ ಗ್ಯಾಮಿಫಿಕೇಶನ್ ಮತ್ತು ಅನುಭವಾಧಾರಿತ ಕಲಿಕೆ ವಿಧಾನಗಳನ್ನು ಬಳಸಿ ನಾಯಕತ್ವ ಹಾಗೂ ನಿರ್ವಹಣಾ ತತ್ತ್ವಗಳನ್ನು ವಿದ್ಯಾರ್ಥಿಗಳು ಸರಳವಾಗಿ ಮನಗೊಳ್ಳುವಂತೆ ಮಾಡಲಾಯಿತು.
ವಿದ್ಯಾರ್ಥಿಗಳು ಆಸ್ಟ್ರೇಲಿಯನ್ ವಾಕ್, ಪಾಸಿಂಗ್ ದ ಬಾಲ್, ಫಿಲ್ ಇನ್ ದ ಬ್ಲ್ಯಾಂಕ್ಸ್ ಚಾಲೆಂಜ್, ಪಿಕ್ಚರ್ ಅನಾಲಿಸಿಸ್ ಮತ್ತು ಕಾರ್ ಪಾರ್ಕಿಂಗ್ ಗೇಮ್‌ಗಳಲ್ಲಿ ತೊಡಗಿಸಿಕೊಂಡರು.
ಈ ಪ್ರತಿಯೊಂದು ಚಟುವಟಿಕೆಯೂ ತಂಡಭಾವ, ಸೃಜನಶೀಲತೆ, ತಂತ್ರಾತ್ಮಕ ಚಿಂತನೆ ಹಾಗೂ ಸಮಸ್ಯೆ ಪರಿಹಾರ ಕೌಶಲ್ಯಗಳನ್ನು ವೃದ್ಧಿ ಪಡಿಸುವ ಆಟಗಳನ್ನೊಳಗೊಂಡಿತ್ತು.
ಕಾರ್ಯಕ್ರಮವನ್ನು ವಿಭಾಗದ ತರಬೇತಿ ಮತ್ತು ನೇಮಕಾತಿ ಸಂಯೋಜಕರಾದ ಡಾ. ಹರ್ಷ ಸಿ. ಮಠದ್ ಮತ್ತು ಡಾ. ಪ್ರವೀಣ್ ಕುಮಾರ್ ಬಿ. ಎಚ್., ಯಶಸ್ವಿಯಾಗಿ ನಿರ್ವಹಿಸಿದರು. ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಅತ್ಯಂತ ಪರಿಣಾಮಕಾರಿಯಾಗಿ ನೆರವೇರಿತು.
ವರದಿ: ಕೊಡಕ್ಕಲ್ ಶಿವಪ್ರಸಾದ್




















