
ಗುರುಮಠಕಲ್: ಪೋಕ್ಸೊ ಕಾಯಿದೆ ಕುರಿತು ಮಾಹಿತಿ ತಿಳಿದುಕೊಂಡು ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ರೀತಿಯ ಅಪರಾಧ ನಡೆಯದಂತೆ ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮರಿಯಪ್ಪ ತಿಳಿಸಿದರು.
ಪಟ್ಟಣದ ಎಸ್. ವಿ ಪಿಯು ಕಾಲೇಜು ಆವರಣದಲ್ಲಿ ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಢಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹ, ಹದಿಹರಿಯದ ಆಕರ್ಷಣೆ, ಶೋಷಣೆ, ಮಕ್ಕಳ ಕಾನೂನು ಕುರಿತು ಕಾನೂನು ಅರಿವು -ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹಿಂದೆ ಮಹಿಳೆಯರ ಮೇಲೆ ಆದ ಶೋಷಣೆಗೆ ಕಾನೂನಿನಲ್ಲಿ ಶಿಕ್ಷೆ ನೀಡುವ ಅಧಿಕಾರವಿತ್ತು. ಆದರೆ ಅಪ್ರಾಪ್ತರ ಮೇಲಿನ ಶೋಷಣೆಗೆ ವಿಶೇಷ ಕಾನೂನು ಇರಲಿಲ್ಲ. ಪೋಕ್ಸೊ ಕಾಯಿದೆ 2012 ಅನುಷ್ಠಾನಕ್ಕೆ ಬಂದ ಮೇಲೆ ಅಪ್ರಾಪ್ತ ಬಾಲಕರ ಮೇಲಿನ ಶೋಷಣೆ ತಡೆಗಟ್ಟುವಲ್ಲಿ ಈ ಕಾನೂನು ಸಹಾಯವಾಗಿದೆ ಎಂದರು.
18 ವರ್ಷದ ಒಳಗಿನ ಹುಡುಗಿ ಅಥವಾ ಹುಡುಗರು ಲೈಂಗಿಕವಾಗಿ ಶೋಷಣೆಗೆ ಒಳಗಾದ ಸಂದರ್ಭ ಅವರು ಸಂತ್ರಸ್ತರು ಎನಿಸಿಕೊಳ್ಳುತ್ತಾರೆ. ಈ ರೀತಿಯ ಸಂತ್ರಸ್ತರು ಕಂಡು ಬಂದಲ್ಲಿ ತಕ್ಷಣ ಮಕ್ಕಳ ಸಹಾಯವಾಣಿ ಸಂಪರ್ಕಿಸಿ ಅವರನ್ನು ರಕ್ಷಿಸಬೇಕು ಎಂದರು.
ಅದೇ ರೀತಿ 18 ವರ್ಷದ ಒಳಗಿನ ಹೆಣ್ಣು ಅಥವಾ ಗಂಡು ಮಕ್ಕಳು ವಿವಾಹವಾಗುವುದು ಬಾಲ್ಯವಿವಾಹ ಎಂದು ಪರಿಗಣಿಸಲಾಗುತ್ತದೆ. ಮದುವೆ ಮಾಡಿಸುವುದು, ಬೆಂಬಲ ನೀಡುವುದು ಸಹ ಪೋಕ್ಸೊ ಕಾಯಿದೆ ವ್ಯಾಪ್ತಿಗೆ ಬರುತ್ತದೆ. ಇಂತಹ ಅಪರಾಧಗಳಿಗೆ 20 ವರ್ಷಗಳ ಕಾಲ ಕಾರಾಗೃಹ ವಾಸ, ದಂಡ ವಿಧಿಸಲು ಕಾನೂನಿನಲ್ಲಿಅವಕಾಶವಿದೆ. ಪೋಕ್ಸೊ ಕಾಯಿದೆ ಕುರಿತು ಜಾಗೃತಿ ಮೂಡಿಸುವುದೆ ಇದಕ್ಕೆ ಪರಿಹಾರ ಎಂದರು.
ಬಾಲ್ಯ ವಿವಾಹ ಇನ್ನೂ ಜೀವಂತವಾಗಿದೆ ಎಂದರೆ ತಲೆ ತಗ್ಗಿಸುವ ವಿಚಾರವಾಗಿದೆ. ಅಪ್ರಾಪ್ತ ವಯಸ್ಸಿನ ಗರ್ಭಿಣಿ ಹಾಗೂ ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು. ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ ಬಾಲ್ಯ ವಿವಾಹದ ಬಗ್ಗೆ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಬಾಲ್ಯ ವಿವಾಹ ಮಾಡುವುದು ನಿಲ್ಲಬೇಕು’ ಎಂದು ತಿಳಿಸಿದರು.
ಸಮಾಜದಲ್ಲಿ 5 ವರ್ಷದ ಬಾಲಕಿಯರ ಮೇಲೆ
ಆತ್ಯಾಚಾರ ಕೇಳಿ ಬರುತ್ತಿವೆ. ಇದಕ್ಕೆಲ್ಲ ಕಾರಣ ಪರಿಚಿತರ ವ್ಯಕ್ತಿಗಳಿಂದ. ಇದರಿಂದ ಸಂಬಂಧಿಕರನ್ನು ನಂಬಬೇಡಿ ಸೀಮಿತ ಹದ್ದಿನಲ್ಲಿ ಇರಬೇಕಾಗಿದೆ. ಅಷ್ಟೇ ಅಲ್ಲದೆ ಮಹಿಳೆಯರನ್ನು ಅವರ ಉಡುಗೆ ತೊಡುಗೆ ಗಳಿಂದಲೂ ಮತ್ತು ಗೃಹಣಿ ಕೆಲಸಗಳಿಂದಲೂ ಅವರನ್ನು ಪುರುಷ ಸಮಾಜ ದಲ್ಲಿ ಕೀಳಾಗಿ ನೋಡುವುದು ತಪ್ಪಿಸಬೇಕಾಗಿದೆ. ಅಡುಗೆ ಮನೆಯಲ್ಲಿ ಅಡುಗೆ ಯನ್ನು ಮಹಿಳೆಯರೇ ಯಾಕೆ ಮಾಡಬೇಕು ಪುರುಷನು ಸಹ ಅಡಿಗೆ ಮಾಡಬೇಕು ಸಾಮಾಜೀಕರಣ ಆಗಲು ಸಾಧ್ಯ ವಾಗುತ್ತದೆ ಎಂದು ಅವರು ಸಲಹೆ ನೀಡಿದರು.
ಹೆಣ್ಣು ಮಕ್ಕಳು ಕಾನೂನು ಸೇವೆಗಳನ್ನು ಪಡೆಯಲು ವನಿತಾ ಸಹಾಯವಾಣಿ 1091 ಸಂಖ್ಯೆಗೆ ಸಂಪರ್ಕಿಸಿ ಸಹಾಯ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪಿ. ಐ. ವೀರಣ್ಣ ದೊಡಮನಿ ಮಾತನಾಡಿ, ಪ್ರೀತಿ, ಪ್ರೇಮ ಹಾಗು ಪ್ರಣಯದಲ್ಲಿ ಬಿದ್ದು ಕುಟುಂಬದ ಕಣ್ಣೀರು ಪಾಲು ಮಾಡಬೇಡಿ, 18 ವರ್ಷ ದಾಟಿದ ಮೇಲೆ ವಾಹನ ಗಳನ್ನು ನಡೆಸಿ,ಯಾರೇ ಬಾಲ್ಯ ವಿವಾಹ ಮಾಡಿದರೆ ಮತ್ತು ಅದನ್ನು ಪ್ರೋತ್ಸಾಹಿಸಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬಹುದೆಂಬ ಕಾನೂನು ತಿಳಿಸಬೇಕು’ ಎಂದು ಸಲಹೆ ನೀಡಿದರು.
ನಮ್ಮ ಪೊಲೀಸ್ ಇಲಾಖೆ 112 ಸಂಖ್ಯೆ ಗೆ ಕರೆ ಮಾಡಿ 15 ನಿಮಿಷ ದೊಳಗೆ ನಾವು ನಿಮ್ಮ ಹತ್ತಿರ ಬರುತ್ತೇವೆ ಮತ್ತು ರಕ್ಷಣೆ ನೀಡುತ್ತೇವೆ ಎಂದು ಭರವಸೆ ನೀಡಿದರು. ಯುವಕರು ಗಾಂಜಾ, ಸಿಗರೇಟ್ ಹಾಗು ಮಧ್ಯ ಸೇವನೆಗೆ ಗುಲಾಮ ರಾಗಬೇಡಿ, ಅಪರಾಧಿ ಕೆಲಸ ದಲ್ಲಿ ಪಾಲ್ಗೊಳ್ಳದೆ ಉತ್ತಮವಾಗಿ ಓದಿ ಉದ್ಯೋಗಿಗಳಾಗಿ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ನುಡಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಖಜಾಂಚಿ ಜ್ಞಾನೇಶ್ವರರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಕಾರ್ಯದರ್ಶಿ ಎಂ. ಬಿ. ನಾಯಕಿನ್, ಪ್ರಚಾರ್ಯ ಗುಂಡಪ್ಪ ಸಜ್ಜನ ವೇದಿಕೆ ಮೇಲಿದ್ದರು. ಉಪನ್ಯಾಸಕ ನವಾದ್ ರೆಡ್ಡಿ ಕಾರ್ಯಕ್ರಮ ನಿರೂಪಿಸಿದರೆ, ಉಪನ್ಯಾಸಕ ರಮೇಶ್ ಸ್ವಾಗತಿಸಿದರು. ಉಪನ್ಯಾಸಕ ಸಾಬರೆಡ್ಡಿ ವಂದಿಸಿದರು.ಇದೇ ವೇಳೆ ಉಪನ್ಯಾಸಕರಾದ ವಿರೇಶ್, ಮಹೇಶ್, ನರಸಿರೆಡ್ಡಿ, ವೈಷ್ಣವಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ




















