ಕಂಪ್ಲಿ: ಸಾರಿಗೆ ಇಲಾಖೆಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ, ಅಧಿಕಾರದ ಅವಧಿಯಲ್ಲಿ ಸಂಚಾರಿ ನಿಯಂತ್ರಣಾಧಿಕಾರಿಯಾಗಿ ವಿಪ್ರದ ತಿಮ್ಮಪ್ಪ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಿದ್ದಾರೆ ಎಂದು ನಂ.10 ಮುದ್ದಾಪುರದ ಸಮಾಜ ಸೇವಕ ಜಡೆ ಮಹಾದೇವ ಹೇಳಿದರು.
ಕುರುಗೋಡು ಪಟ್ಟಣದ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಬುಧವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಿವೃತ್ತ ಸಂಚಾರಿ ನಿಯಂತ್ರಣಾಧಿಕಾರಿ ವಿಪ್ರದ ತಿಮ್ಮಪ್ಪ ಭಾಗ್ಯವತಿ (ಚಾಮುಂಡಿ) ದಂಪತಿ ಇವರಿಗೆ ಸನ್ಮಾನಿಸಿ ಗೌರವಿಸಿದ ನಂತರ ಮಾತನಾಡಿ, ಸರ್ಕಾರಿ ಕೆಲಸ ದೇವರ ಕೆಲಸ ಎಂಬಂತೆ ಸತತ 34 ವರ್ಷ ಸಾರಿಗೆ ಇಲಾಖೆಯಲ್ಲಿ ಶ್ರದ್ದೆ, ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಯಾವುದೇ ಕಪ್ಪುಚಿಕ್ಕೆ ಇಲ್ಲದೇ ಸೇವೆ ಸಲ್ಲಿಸಿದ್ದಾರೆ.
ಸರ್ಕಾರಿ ಸೇವೆಯಲ್ಲಿ ವಯೋ ನಿವೃತ್ತಿ ಸಾಮಾನ್ಯ ಆದ್ದರಿಂದ ಈಗ ನಿವೃತ್ತಿ ಹೊಂದಿ ವಯೋ ವೃದ್ಧ ಜೀವನಕ್ಕೆ ನಾಂದಿ ಹಾಡಿದ್ದಾರೆ. ಈ ನಿವೃತ್ತ ಬದುಕು ಸುಖ, ಸಮೃದ್ಧ, ಸಂತಸದಿಂದ ಕೂಡಿರಲಿ ಎಂದರು.
ಸನ್ಮಾನ ಸ್ವೀಕರಿಸಿ ನಿವೃತ್ತ ಸಂಚಾರಿ ನಿಯಂತ್ರಣಾಧಿಕಾರಿ ವಿಪ್ರದ ತಿಮ್ಮಪ್ಪ ಮಾತನಾಡಿ, 1992ರಲ್ಲಿ ಕೂಡ್ಲಿಗಿಯಲ್ಲಿ ಕಂಡಕ್ಟರ್ ಆಗಿ ಕೆಲಸ ಆರಂಭಿಸಿ, ನಂತರ ಹೊಸಪೇಟೆ, ಕುಷ್ಟಗಿ, ಯಲಬುರ್ಗಾ, ಬಳ್ಳಾರಿ ಜಿಲ್ಲಾ ವ್ಯಾಪ್ತಿಯ ಕಂಪ್ಲಿಯಲ್ಲಿ ಸಂಚಾರಿ ನಿಯಂತ್ರಣಾಧಿಕಾರಿಯಾಗಿ ಸತತ ಐದು ವರ್ಷ ಸೇವೆ ಸಲ್ಲಿಸಿರುವೆ, ಇನ್ನಷ್ಟು ದಿನ ಸೇವೆ ಸಲ್ಲಿಸುತ್ತೇವೆ ಅಂದರೂ ಸೇವೆಗೆ ಅವಕಾಶ ಇಲ್ಲ. ಹೊಸದಾಗಿ ಬರುವವರಿಗೆ ಅವಕಾಶ ಮಾಡಿಕೊಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪ್ರತಿಯೊಬ್ಬರ ಸಹಕಾರದಿಂದ ಇಷ್ಟುದಿನ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದರು.
ನಂತರ ನಿವೃತ್ತಿ ಹೊಂದಿದ ತಿಮ್ಮಪ್ಪಗೆ ಅದ್ಧೂರಿಯಾಗಿ ಸನ್ಮಾನಿಸಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಡಿಪೋ ವ್ಯವಸ್ಥಾಪಕ ತಿರುಮಲೇಶ, ನಿವೃತ್ತ ಆರ್ ಟಿ ಒ ವೆಂಕಟೇಶರಾವ್, ಸಂಚಾರಿ ನಿಯಂತ್ರಣಾಧಿಕಾರಿಯಾದ ಹೊಸಪೇಟೆ ವಾಸಪ್ಪ, ದೇವರೆಡ್ಡಿ, ಮುಖಂಡರಾದ ವಿಪ್ರದ ಭೀಮೇಶ, ಬಳ್ಳಾರಿ ಮಾಧವ, ಮಾರೇಶ ಪಟ್ಟಣಸೆರಗು, ಹುಸೇನಪ್ಪ, ರಾಮಚಂದ್ರಪ್ಪ ಸೇರಿದಂತೆ ಸಾರಿಗೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















