ಕೊಪ್ಪಳ /ಗಂಗಾವತಿ : ಇಲ್ಲಿನ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿರುವ ಪ್ರಕಾಶ್ ಮಾಳೆ, ಸುಮಾರು ಎರಡು ವರ್ಷದ ಬಳಿಕ ಇದೀಗ ಮಸ್ಕಿ ವೃತ್ತಕ್ಕೆ ವರ್ಗಾವಣೆಯಾಗಿದ್ದು, ತೆರವಾದ ಸ್ಥಾನಕ್ಕೆ ಬರಲು ಕೆಲ ಪೊಲೀಸ್ ಅಧಿಕಾರಿಗಳು ವಿಪರೀತವಾದ ಡಿಮ್ಯಾಂಡ್ ಮತ್ತು ಕಾಂಪಿಟೇಷನ್ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
2024ರ ನವಂಬರ್ 28ರಂದು ನಗರಠಾಣೆಯ ಪಿಐ ಆಗಿ ಅಧಿಕಾರ ಸ್ವೀಕರಿಸಿದ ಪ್ರಕಾಶ್ ಮಾಳೆಯ ಕರ್ತವ್ಯದಲ್ಲಿ ಎರಡು ಮೂರು ಪ್ರಕರಣಗಳು ಇನ್ನಿಲ್ಲದಂತೆ ಬಾಧಿಸಿ ಹಿನ್ನೆಡೆ ಮಾಡಿದ್ದವು.
ನಗರಠಾಣೆಯ ವ್ಯಾಪ್ತಿಯಲ್ಲಿ ಈಗಲೂ ಅಕ್ರಮ ಮರ ಳು, ಇಸ್ಪೀಟ್ ದಂಧೆ, ಮಟ್ಕಾ, ಲಿಕ್ಕರ್ ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿರುವ ಆರೋಪ ಇವೆ.
ರಾಜಕಾರಣಿಗಳು ಮತ್ತವರ ಪುಢಾರಿ ಬೆಂಬಲಿಗರ ಮೂಗಿನ ನೇರಕ್ಕೆ ನಡೆಯುವ ಇಂತಹ ಹಲ್ಕಾ ದಂಧೆಗಳನ್ನು ಅಧಿಕಾರಿಗಳು ನಿಯಂತ್ರಿಸಿದರೂ ಕಷ್ಟ, ನಿಯಂತ್ರಿಸದೆ ಹೋದರೂ ಕಷ್ಟ ಹೀಗಾಗಿ ಬಹುತೇಕ ಅಧಿಕಾರಿಗಳು, ಗೊತ್ತಿದ್ದರೂ ಗೊತ್ತಿಲ್ಲದಂತೆ ಇದ್ದು ಬಿಡುತ್ತಾರೆ.
ಆದರೆ ಇದೆಲ್ಲಕ್ಕಿಂತ ಮುಖ್ಯವಾಗಿ ಪ್ರತಿಭಟನೆ ನಿರತ ಮಹಿಳೆಯರ ಮೇಲೆ ದಬ್ಬಾಳಿಕೆ ಮಾಡಿದ ಮತ್ತು ಬಿಜೆಪಿ ಯುವ ಮುಖಂಡ ವೆಂಕಟೇಶ ಕೊಲೆ ಪ್ರಕರಣದಲ್ಲಿ ಆರೋಪಿಗಳ ಬಂಧನ ವಿಳಂಬ ಪ್ರಕರಣದಲ್ಲಿ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುವಂತಾಗಿತ್ತು.
ಯಾವ ಪ್ರಕರಣ ಏನು ವಿವರ : ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರ ವಿರುದ್ಧ ಗಂಗಾವತಿ ಶಾಸಕ ಜಿ. ಜನಾರ್ದನರೆಡ್ಡಿ, ಕಟು ಶಬ್ದಗಳಲ್ಲಿ ರಾಜಕೀಯ ಉದ್ದೇಶಿತ ಟೀಕೆ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲೆಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆದಿದ್ದವು.
ಇದರ ಭಾಗವಾಗಿ ಗಂಗಾವತಿಯ ಕೃಷ್ಣದೇವರಾಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರೆಡ್ಡಿ ಭಾವಚಿತ್ರಕ್ಕೆ ಕೈ ಕಾರ್ಯಕರ್ತರು ಥಳಿಸಲು ಮುಂದಾದಾಗ, ಕೆಪಿಸಿಸಿ ವಕ್ತಾರೆ ಶೈಲಜಾ ಅವರ ಕೈಯಲ್ಲಿದ್ದ ಭಾವಚಿತ್ರವನ್ನು, ಮಾಳೆ ಒತ್ತಾಯ ಪೂರ್ವಕ ಕಿತ್ತುಕೊಂಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ಇದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತಲ್ಲದೆ, ಪೊಲೀಸ್ ಅಧಿಕಾರಿಗಳ ಮೇಲೆ ಕೈ ನಾಯಕರ ಅಸಮಾಧಾನಕ್ಕೂ ಕಾರಣವಾಗಿತ್ತು. ಪ್ರಕರಣ ಸರ್ಕಾರದವರೆಗೂ ಹೋಗಿತ್ತು. ಮಹಿಳಾ ಆಯೋಗಕ್ಕೂ ಕೈ ಪಕ್ಷದ ಕಾರ್ಯಕರ್ತರು ದೂರು ನೀಡಿದ್ದರು. ಅದು ಹೇಗೋ ಅಲ್ಲಿಗಲ್ಲಿಗೆ ಮುಗಿಯಿತು.
ಬಳಿಕ ಬಿಜೆಪಿ ಯುವ ಮುಖಂಡ ವೆಂಕಟೇಶನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಏಳು ಜನರ ಪೈಕಿ ಮರ್ಡರ್ ಮಿಸ್ಟರಿಯ ರೂವಾರಿ ರವಿಯನ್ನು ಬಂಧಿಸುವಂತೆ ಮಾಡಿತ್ತು. ಪೊಲೀಸ್ ಇಲಾಖೆಯ ಬಗ್ಗೆ ಜನರಿಗೆ ಅನುಮಾನ ಮೂಡುವಂತೆ ಮಾಡಿತ್ತು.
ಕಾಂಪಿಟೇಷನ್ ಡಿಮ್ಯಾಂಡ್ :
ಅಂತೂ ಇಂತೂ ಎಲ್ಲ ಸಂಕಷ್ಟಗಳಿಂದ ಪಾರಾಗಿರುವ ಮಾಳೆ, ಕಳೆದ ಸುಮಾರು ಹತ್ತು ವರ್ಷದಿಂದ ಕೊಪ್ಪಳ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದು, ಇದೀಗ ರಾಯಚೂರು ಜಿಲ್ಲೆಗೆ ವರ್ಗಾವಣೆಯಾಗಿದ್ದಾರೆ. ತೆರವಾದ ಸ್ಥಾನಕ್ಕೆ ಬರಲು ಹಲವು ಅಧಿಕಾರಿಗಳು ತುದಿಗಾಲ ಮೇಲೆ ನಿಂತಿದ್ದಾರೆ ಎನ್ನಲಾಗಿದೆ.
ಬಳ್ಳಾರಿ, ಯಾದಗಿರಿ, ಬಾಗಲಕೋಟೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಹಲವು ಪಿಐಗಳು ಗಂಗಾವತಿಗೆ ಬರಲು ತುದಿಗಾಲ ಮೇಲೆ ನಿಂತಿದ್ದಾರೆ. ಬಂಡವಾಳ ಹಾಕಿ ಲಾಭ ತೆಗೆಯುವ ಆಯಾಕಟ್ಟಿನ ಹುದ್ದೆಗಳಂತಾಗಿರುವ ಪಿಐ ಒಂದೊಂದು ಮೊತ್ತದ ಹಣ ಹುದ್ದೆಗೆ ಒಬ್ಬೊಬ್ಬರು ನೀಡಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಇದೆ.
ಈಗಾಗಲೆ ಹಲವು ಅಧಿಕಾರಿಗಳು, ಒಂದು ವರ್ಷದ ಅವಧಿಗೆ ಗಂಗಾವತಿಗೆ ಪೋಸ್ಟಿಂಗ್ ಮಾಡಿಸಿ ಕೊಡುವಂತೆ ರಾಜಕಾರಣಿಗಳ ಬೆನ್ನು ಬಿದ್ದಿದ್ದು, 30ರಿಂದ 70 ಲಕ್ಷ ದವರೆಗೂ ‘ವಿಟಾಮಿನ್ ಎಂ’ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್



















