ಮಂಗಳೂರು/ವಿಟ್ಲ : ಪ್ರಾಮಾಣಿಕತೆ, ದಕ್ಷತೆ ಮತ್ತು ಕರ್ತವ್ಯ ನಿಷ್ಠೆಯನ್ನು ತಮ್ಮ ಧ್ಯೇಯವನ್ನಾಗಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಮತ್ತು ಪೊಲೀಸ್ ಕಮಿಷನರ್ರನ್ನು ರಾಜಕೀಯ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡುವ ಸದ್ದು, ವದಂತಿಗೆ ಜಿಲ್ಲೆಯ ಜನತೆ ಆತಂಕಿತರಾಗಿದ್ದಾರೆ. ಸಮಾಜದ ಹಿತ ಬಯಸುವ ಜಿಲ್ಲೆಯ ಪ್ರಜ್ಞಾವಂತ ಪ್ರಮುಖರು ಈಗಾಗಲೇ ಈ ವರ್ಗಾವಣೆಯ ಪಿತೂರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಜವಾಗಿ ಈ ವರ್ಗಾವಣೆ ಕೇವಲ ಇಬ್ಬರು ಅಧಿಕಾರಿಗಳ ವಿರುದ್ಧದ ಅನ್ಯಾಯವಷ್ಟೇ ಅಲ್ಲ. ಕಾನೂನು ಪ್ರಭುತ್ವ, ಆಡಳಿತಾತ್ಮಕ ಸ್ವಾತಂತ್ರ್ಯ ಮತ್ತು ಸಾರ್ವಜನಿಕ ನಂಬಿಕೆಗೆ ಮಾಡಿರುವ ನೇರ ದಾಳಿಯಾಗಿದೆ. ಅಪರಾಧ ನಿಯಂತ್ರಣ, ಸಾರ್ವಜನಿಕ ಸುರಕ್ಷತೆ ಮತ್ತು ನ್ಯಾಯಸಮ್ಮತ ಆಡಳಿತಕ್ಕೆ ತಮ್ಮ ಶ್ರಮವನ್ನು ಸಮರ್ಪಿಸಿರುವ ಅಧಿಕಾರಿಗಳನ್ನು, ಅವರ ಪ್ರಾಮಾಣಿಕತೆಯೇ ಅಪರಾಧವೆಂಬಂತೆ ಕಾಣುವುದು ಅಪಾಯಕಾರಿ ಪ್ರವೃತ್ತಿಯಾಗಿದೆ. ರಾಜಕೀಯ ಹಸ್ತಕ್ಷೇಪದಿಂದಾಗಿ ಕರ್ತವ್ಯನಿಷ್ಠ ಅಧಿಕಾರಿಗಳನ್ನು ಎತ್ತಂಗಡಿ ಮಾಡಿದರೆ, ಅದು ವ್ಯವಸ್ಥೆಯೊಳಗೆ ಭಯ, ನಿರುತ್ಸಾಹ ಮತ್ತು ಅವಕಾಶವಾದಿತ್ವವನ್ನು ಬೆಳೆಸುತ್ತದೆ. ಅದರ ಪರಿಣಾಮವಾಗಿ ಸಮಾಜ ಮತ್ತಷ್ಟು ಕೆಟ್ಟು ಹೋಗುವುದು.
ಆದ್ದರಿಂದ ಸನ್ಮಾನ್ಯ ಮುಖ್ಯಮಂತ್ರಿಯವರು ಯಾವ ಕಾರಣಕ್ಕೂ ಒತ್ತಡಕ್ಕೆ ಮಣಿದು, ಜಿಲ್ಲೆಯ ಜನತೆ ಇಷ್ಟಪಟ್ಟ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಬಾರದು. ದಕ್ಷಿಣ ಕನ್ನಡ ಜಿಲ್ಲೆಯ ಸಂವೇದನಾಶೀಲ ಪರಿಸ್ಥಿತಿ ತಮಗೆ ಚೆನ್ನಾಗಿ ತಿಳಿದಿದೆ. ಕಾನೂನು ಸುವ್ಯವಸ್ಥೆಯಲ್ಲಿನ ಸಣ್ಣ ನಿರ್ಲಕ್ಷ್ಯವೂ ಭಾರೀ ಅನಾಹುತಗಳನ್ನು ಉಂಟುಮಾಡುವ ಇತಿಹಾಸ ದ. ಕ. ಜಿಲ್ಲೆಯದ್ದು. ಇಂತಹ ಜಿಲ್ಲೆಯಲ್ಲಿ ಪಕ್ಷಪಾತರಹಿತವಾಗಿ, ಧೈರ್ಯದಿಂದ, ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಾರ್ಯನಿರ್ವಹಿಸುತ್ತಿರುವ ಪೋಲಿಸ್ ಅಧಿಕಾರಿಗಳನ್ನು ವರ್ಗಾಯಿಸುವುದು ಅನ್ಯಾಯ, ಅಶಾಂತಿಗೆ ಆಹ್ವಾನ ನೀಡಿದಂತೆ ಆಗುತ್ತದೆ.
ಈಗಿನ ಪೊಲೀಸ್ ವ್ಯವಸ್ಥೆಯ ನಂತರ ಜಿಲ್ಲೆ ಶಾಂತವಾಗಿದೆ. ಗೂಂಡಾಗಿರಿ, ರಾಜಕೀಯ ರೌಡಿಸಮ್, ಮಾಫಿಯಾ ಚಟುವಟಿಕೆಗಳು ಹಿನ್ನಡೆಗೊಂಡಿವೆ. ಆದ್ದರಿಂದಲೇ ಜಿಲ್ಲೆಯ ಜನಸಾಮಾನ್ಯರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಹಿಂದೂ-ಮುಸ್ಲಿಮರು ಅನ್ಯೋನ್ಯತೆಯಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಈ ಶಾಂತಿಯೇ ಕೆಲ ರಾಜಕೀಯ ಶಕ್ತಿಗಳಿಗೆ ಅಸಹನೀಯವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದ್ದರಿಂದಲೇ, ವರ್ಗಾವಣೆಯ ಸದ್ದು ಮತ್ತು ವದಂತಿಯ ಕುರಿತು ಜಿಲ್ಲೆಯ ಶಾಸಕರು ತುಟಿಬಿಚ್ಚುತ್ತಿಲ್ಲ. ಜನಪರವಾಗಿ ಮಾತನಾಡುವ ಧೈರ್ಯ ತೋರುತ್ತಿಲ್ಲ. ಎರಡೂ ಪಕ್ಷಗಳ ಪ್ರತಿನಿಧಿಗಳು ವರ್ಗಾವಣೆಯನ್ನೇ ಒಗ್ಗಟ್ಟಿನಿಂದ ಇಷ್ಟಪಟ್ಟಂತಿದೆ. ಪ್ರಾಯಶಃ ಮತ್ತೆ ಅಮಾಯಕ ಹಿಂದೂ-ಮುಸ್ಲಿಮರ ನೆತ್ತರು ಹರಿಸಿ, ಶವವನ್ನು ಕುಕ್ಕಿ ತಿನ್ನಲು ರಾಜಕೀಯ ರಣಹದ್ದುಗಳು ಇಣುಕುತ್ತಿರುವ ಭಾವನೆ ಜನರಲ್ಲಿ ಮೂಡುತ್ತಿದೆ.
ವಿಚಿತ್ರವೆಂದರೆ: ಇಲ್ಲಿ ಕೋಳಿ ಅಂಕ, ಕಂಬಳ, ಪಿಲಿನಲಿಕೆ, ಡಿ.ಜೆ., ಉರುಸ್ ಮುಂತಾದ ವಿಚಾರಗಳಲ್ಲೇ ಜಿಲ್ಲೆಯ ಸಂಸದರು ಮತ್ತು ಶಾಸಕರು ಕ್ರಿಯಾಶೀಲರಾಗಿದ್ದಾರೆ. ಹೊಂಡಗಳು ತುಂಬಿರುವ ಜಿಲ್ಲೆಯ ಕೆಟ್ಟ ರಸ್ತೆಗಳು, ಜನರ ಮೂಲಭೂತ ಅಗತ್ಯಗಳು ಮತ್ತು ದಿನನಿತ್ಯದ ಸಮಸ್ಯೆ, ಸವಾಲುಗಳ ಕುರಿತು ಜನಪ್ರತಿನಿಧಿಗಳಿಗೆ ಯಾವ ಕಾಳಜಿಯೂ ಇಲ್ಲ. ಏನಿದ್ದರೂ ಜಿಲ್ಲೆಯಲ್ಲಿ ಶಾಶ್ವತ ಶಾಂತಿ ನೆಲೆಸಬೇಕು. ಇದು ಅಬ್ಬಕ್ಕ ರಾಣಿಯ ಮಣ್ಣಿನ ಆಗ್ರಹ. “ಒಂದೇ ಕುಲ, ಒಂದೇ ಮತ, ಒಂದೇ ದೇವರು” ಎಂಬ ಬ್ರಹ್ಮಶ್ರ ನಾರಾಯಣ ಗುರುಗಳ ಸಹಬಾಳ್ವೆ, ಸಾಮರಸ್ಯದ ಉದಾತ್ತ ಸಂದೇಶ ಮೆಚ್ಚುವ ಪ್ರತಿಯೊಬ್ಬರ ಆಗ್ರಹ. ಆದ್ದರಿಂದ ಕಾನೂನು ಪ್ರಭುತ್ವವನ್ನು ದುರ್ಬಲಗೊಳಿಸುವ ಎಲ್ಲಾ ಹಸ್ತಕ್ಷೇಪಗಳಿಗೆ ಸ್ಪಷ್ಟ ಅಂತ್ಯ ಹಾಡಬೇಕು. ಸಮಾಜದ ಹಿತಕ್ಕಾಗಿ ಪ್ರಾಮಾಣಿಕತೆಗೇ ಶಿಕ್ಷೆಯಾಗಬಾರದು. ನ್ಯಾಯ, ಧೈರ್ಯ ಮತ್ತು ನಿಷ್ಠೆಗೆ ಬೆಂಬಲ ನೀಡುವುದೇ ಆರೋಗ್ಯಕರ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಗುರುತು. ವರ್ಗಾವಣೆಯ ಗುಸುಗುಸುಗೆ ಜಿಲ್ಲೆಯ ಜನತೆ ಆತಂಕಿತರಾಗಿದ್ದಾರೆ. ಆದ್ದರಿಂದ ಈ ವಿಷಯಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳು ಇತಿಶ್ರೀ ಹಾಡಬೇಕು ಎಂದು ಮಂಗಳೂರು ತಾಲೂಕಿನ ಶ್ರೀ ಮಹಮ್ಮದ್ ಸಿದ್ದಿಕ್ , ಜಕ್ರಿಬೆಟ್ಟು ಇವರು ಬಹಿರಂಗ ಪತ್ರದಲ್ಲಿ ಒತ್ತಾಯಿಸಿದ್ದಾರೆ.
- ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ-ಬೆಂಗಳೂರು




















