
ಗುರುಮಠಕಲ್, ಜ.21: ನಿಜ ಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತಿ ಅಂಗವಾಗಿ ಪಟ್ಟಣದ ಮಲ್ಲಯ್ಯ ಕಟ್ಟ ಶಾಲೆಯ ಮಕ್ಕಳಿಗೆ ಬುಧವಾರ ಪುಸ್ತಕ, ಪೆನ್ನುಗಳನ್ನು ಶಿಕ್ಷಣ ಪ್ರೇಮಿ ಮಾಜಿ ಕಾಡಾ ಅಧ್ಯಕ್ಷ ವಿಜಯ್ ಕುಮಾರ್ ನೀರೆಟಿ ವಿತರಿಸಿದರು.
ಸಮ ಸಮಾಜದ ಸುಧಾರಕ, ಕಾಯಕಯೋಗಿ ಬಸವಣ್ಣನವರ ಅನುಯಾಯಿ, ನಾಡಿನ ಶ್ರೇಷ್ಠ ತತ್ವಜ್ಞಾನಿ ಶರಣ ಶ್ರೀ ಅಂಬಿಗರ ಚೌಡಯ್ಯನವರು 12ನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ಮಧ್ಯದಲ್ಲಿ ಪ್ರಜ್ವಲಿಸಿದರು ಎಂದು ಹೇಳಿದರು.
ಶಾಲೆಯ ಇತಿಹಾಸ ವಿವರಿಸಿ ನಮ್ಮ ತಂದೆ ನಿವೃತ್ತ ಶಿಕ್ಷಕರಾಗಿದ್ದ ಹಣಮಂತಪ್ಪ ನೀರೆಟಿ 1982 ರಲ್ಲಿ ಆಗಿನ ಶಾಸಕ ಮಲ್ಲಿಕಾರ್ಜುನ ಖರ್ಗೆಯವರಲ್ಲಿ ಮನವಿ ಮಾಡಿ ಶಾಲೆ ಮಂಜೂರಿಸಿಕೊಂಡರು. ಶಾಲೆಗೆ ಮನೆಯಿಂದ ಖುರ್ಚಿ ಸಹ ನೀಡಿದ್ದು ಈಗಲೂ 43 ವರ್ಷ ಬಳಿಕ ಖುರ್ಚಿ ಶಾಲೆಯಲ್ಲಿ ಸುರಕ್ಷಿತವಾಗಿ ಇಟ್ಟಿರುವದು ಖುಷಿ ತಂದಿದೆ, ಇಂದು ನೂರಾರು ಬಡ ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ ಇದೊಂದು ಶೈಕ್ಷಣಿಕ ಕ್ರಾಂತಿ ಎಂದು ಹೇಳಿದರು.
ಶಾಲೆಯ ಮುಖ್ಯಗುರುಗಳು ಶ್ರೀನಿವಾಸಗೌಡ, ಸಹ ಶಿಕ್ಷಕರಾದ ವೆಂಕಟೇಶ್ ನೀರೆಟಿ , ಸುನಂದಾ, ಎಸ್‌ಡಿಎಂಸಿ ಅಧ್ಯಕ್ಷ ಬಸ್ಸಪ್ಪ ಎಡೆಪಲ್ಲಿ, ಕಬ್ಬಲಿಗ ಸಮಾಜದ ಭೀಮಶಂಕರ ಪಡಿಗೆ, ಸವಿತಾ ಸಮಾಜ ಅಧ್ಯಕ್ಷ ರಮೇಶ್ ಹಡಪದ, ಅಜಯ್ ಡೊಂಗುರ್, ಭೀಮಪ್ಪ, ಓಂಪ್ರಕಾಶ್ ಹಾಜರಿದ್ದರು.
- ಕರುನಾಡ ಕಂದ



















