ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೂಢನಂಬಿಕೆ ಅಳಿಸಿದ ಕ್ರಾಂತಿಕಾರಿ ವಚನಕಾರ,ಅಂಬಿಗರ ಚೌಡಯ್ಯನವರ 906ನೇ ಜಯಂತೋತ್ಸವ

ಶ್ರೀಅಂಬಿಗರ ಚೌಡಯ್ಯ ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿದ್ದ ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆಯೊಂದಿಗೆ, ಸಮ ಸಮಾಜ ಕಟ್ಟುವಿಕೆಯಲ್ಲಿ ಶಿವಶರಣರ ಪಾತ್ರ ಆಮೂಲಾಗ್ರವಾದದ್ದು. ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಸಮಕಾಲೀನರಾದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರು ಆ ಕಾಲದ ಅಸಂಖ್ಯಾತ ಶರಣ ಸಂಕುಲದಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿರುವ ವೀರಗಣಾಚಾರಿ, ತತ್ವನಿಷ್ಠ ಶ್ರೇಷ್ಠ ತತ್ವಜ್ಞಾನಿಯಾಗಿ, ವಚನಕಾರನಾಗಿ, ಕ್ರಾಂತಿಯ ಕೆಂಡದುಂಡೆಯಾಗಿ ಹೊರ ಹೊಮ್ಮುತ್ತಾರೆ. ಅನೇಕ ಬಿರುದಾಂಕಿತ ಚೌಡಯ್ಯನವರು ‘ಮುಚ್ಚುಮರೆಯಿಲ್ಲದೆ ಬಿಚ್ಚು ಮನಸ್ಸಿನ; ಕಂಡದ್ದನ್ನು ಕಂಡಂತೆ ಹೇಳುವ; ಕೆಚ್ಚು ಡಂಬಾಚಾರವನ್ನು ಕಂಡರೆ ಸಾತ್ವಿಕವಾದ ರೊಚ್ಚು: ಇದು ವ್ಯಕ್ತಿತ್ವದ ಪಡಿಯಚ್ಚು; ನಿಜದ ನಗಾರಿ, ನಿರ್ಭಯತೆಯ ಭೇರಿ, ಅನುಭವ ವಿಹಾರಿ ಚಿನ್ಮಯ ಚಕೋರಿ’ ಎಂದು ಕಾವ್ಯಾನಂದದ ಕಾವ್ಯವಾಣಿ ನುಡಿದಿದೆ.
ಅಂತಹ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಅಗ್ರಗಣ್ಯ, ನಿಜಶರಣ, ವಚನಕಾರರು.

ಅಂಬಿಗರ ಚೌಡಯ್ಯನವರು ತಮ್ಮ ಪ್ರಖರ, ಹರಿತವಾದ ನೇರ ನಿಷ್ಠುರ, ದಿಟ ನುಡಿಗಳಿಗೆ ಹೆಸರುವಾಸಿಯಾಗಿ ಸಮಾಜದ ಅಂಕುಡೊಂಕುಗಳಿಗೆ ಅಂಕುಶವಿತ್ತವರು.

ತಮ್ಮ ಕಠೋರ, 30, ಪಡಿನುಡಿಗಳಿಂದ ಮೂಢನಂಬಿಕೆಗಳ ಅಂಧ ಆಚರಣೆಗಳಿಗೆ ಲಗಾಮು ಹಾಕಿ ಸುಭದ್ರ ಸಮಾನತೆಯ ಸಮಾಜದ ನಿರ್ಮಾಣಕ್ಕೆ ಕಾರಣೀಭೂತರಾದವರು.

ಅಂಬಿಗರ ಚೌಡಯ್ಯ ನವರ ಜೀವನ:
ಅಂಬಿಗರ ಚೌಡಯ್ಯನವರು 1120 ನೇ ಇಸವಿ ಜನವರಿ 21ರಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚೌಡಯ್ಯದಾನಪುರ (ಮೊದಲ ಹೆಸರು ಶಿವಪುರ)ದಲ್ಲಿ ವಿರುಪಾಕ್ಷ ಮತ್ತು ಪಂಪಾದೇವಿ ದಂಪತಿಗಳ ಪವಿತ್ರ ಪುತ್ರನಾಗಿ ಜನಿಸಿದರು. ಚೌಡಯ್ಯನವರ ತಂದೆ ವಿರುಪಾಕ್ಷ, ಗುತ್ತಲ ಅರಸನ ಸಂಸ್ಥಾನದಲ್ಲಿ ಮಾಂಡಲಿಕ ಅರಸನಾಗಿದ್ದ. ಅಂಬಿಗರ ಚೌಡಯ್ಯನವರ ಆರಂಭಿಕ ಹೆಸರು ಚೌಡೇಶ ಎಂಬುದಾಗಿತ್ತು. ಅಂಬಿಗರ ಚೌಡಯ್ಯನವರಿಗೆ ಸುಲೋಚನಾ ಎಂಬ ಪತ್ನಿ, ಈ ದಂಪತಿಗಳಿಗೆ ‘ಪುರವಂತ’ ಎಂಬ ಪುತ್ರನಿದ್ದನು. ಈತನೇ ಪುರವಂತರ ಮೂಲ ಪುರುಷನಾಗಿ ಪುರವಂತಿಕೆ ಹುಟ್ಟು ಹಾಕಿದವನು.

ಅಂಬಿಗರ ಚೌಡಯ್ಯನವರು ತುಂಗಭದ್ರಾ ನದಿಯ ಒಂದು ತಟದಿಂದ ಮತ್ತೊಂದು ತಟಕ್ಕೆ ಜನರನ್ನು ಸುಭದ್ರವಾಗಿ ದೋಣಿಯ ಮೂಲಕ ಹೊಳೆದಾಟಿಸುವ ಅಂಬಿಗ ವೃತ್ತಿಯನ್ನು ನಡೆಸುತ್ತಿದ್ದರು. ಚೌಡಯ್ಯದಾನಪುರ ಹೆಸರು ಬಂದಿದ್ದು ಹೇಗೆ? : ಚೌಡಯ್ಯನವರ ಕಾಲದಲ್ಲಿ ಆ ಪ್ರಾಂತ್ಯದ ಅರಸ ಗುತ್ತಲ ರಾಜನ ಮಗನು ಕಡಿತದಿಂದ ಹಾವು ಜೀವನ್ ಮರಣದ ಹೋರಾಟದ ಹಾಸಿಗೆಯಲ್ಲಿರುವಾಗ ಅಂಬಿಗರ ಚೌಡಯ್ಯನವರು ತಮ್ಮಲ್ಲಿದ್ದ ದಿವ್ಯ ಔಷಧವನ್ನು ನೀಡಿ ಗುತ್ತಲ ರಾಜನ ಮಗನ ಜೀವವನ್ನು ಉಳಿಸುತ್ತಾರೆ. ಇದಕ್ಕೆ ಪ್ರತಿ ಕಾಣಿಕೆಯಾಗಿ ಗುತ್ತಲ ರಾಜನು ಅಪಾರ ಪ್ರಮಾಣದ ಭೂಮಿಯನ್ನು ಅಂಬಿಗರ ಚೌಡಯ್ಯನವರಿಗೆ ನೀಡುತ್ತಾರೆ. ಆದರೆ ಅಂಬಿಗರ ಚೌಡಯ್ಯನವರು ಶರಣತ್ವದ ಕಡೆ ತಮ್ಮ ಚಿತ್ತವ ಹರಿಸಿ, ತಮ್ಮಲ್ಲಿ ಕಿಂಚಿತ್ತೂ ಭೂಮಿ ಇಟ್ಟುಕೊಳ್ಳದೇ ತಮ್ಮ ಗುರುಗಳಾದ ಶಿವಪುರದ ಶಿವ ದೇವ ಮುನಿಗಳಿಗೆ ಸೇವಾ ದಾನವಾಗಿ ನೀಡಿದರು.

ಅಂದಿನಿಂದ ಮೊದಲಿದ್ದ ಶಿವಪುರ ಹೆಸರು ಕಳೆದು ಹೋಗಿ ಚೌಡಯ್ಯದಾನಪುರ ಎಂಬ ಹೆಸರು ಬಂದಿತು.

ವಚನಕಾರರಾಗಿ ಅಂಬಿಗರ ಚೌಡಯ್ಯ:
ಹನ್ನೆರಡನೇ ಶತಮಾನದ ಶರಣರು ಬಹುತೇಕವಾಗಿ ತಮ್ಮ ಕುಲದೇವರ ಹೆಸರನ್ನು ಅಂಕಿತನಾಮವನ್ನಿಟ್ಟುಕೊಂಡು ವಚನಗಳನ್ನು ರಚಿಸಿದರೆ ಅಂಬಿಗರ ಚೌಡಯ್ಯನವರು ತಮ್ಮ ಅಂಬಿಗ ವೃತ್ತಿಯನ್ನೇ ಸೇರಿಸಿ ಅಂಬಿಗರ ಚೌಡಯ್ಯ ಎಂಬ ನಾಮದೊಂದಿಗೆ ವಚನ ಗಳನ್ನು ರಚಿಸಿ ಅಂಬಿಗ ಸಮಾಜಕ್ಕೆ ಗೌರವ ಸಿಗುವಂತೆ ಮಾಡಿದರು.

ಅಂಬಿಗರ ಚೌಡಯ್ಯನವರು ಅಂದಾಜು 330 ವಚನಗಳನ್ನು ರಚಿಸಿದ್ದಾರೆ. ಅಂಬಿಗರ ಚೌಡ ಯ್ಯನವರು ತಮ್ಮ ವಚನಗಳಲ್ಲಿ ಸಮಾಜದಲ್ಲಿದ್ದ ಪ್ರಚಲಿತದಲ್ಲಿದ್ದ ಕಂದಾಚಾರ, ಬೂಟಾಟಿಕೆ, ಮೂಢನಂಬಿಕೆಗಳ ವಿರುದ್ಧ ತಮ್ಮ ಕಠೋರ ನುಡಿಗಳಿಂದ ಸಮರ ಸಾರಿ ಅವುಗಳಿಗೆ ಕಡಿವಾಣ ಹಾಕಿದರು. ಚೌಡಯ್ಯನವರು ತಮ್ಮ ಒಂದು ವಚನದಲ್ಲಿ

‘ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗಿ ಹೊಟ್ಟೆಯಡಿಯಾಳಾಗಿ ಬೀಳುವ ಲೊಟ್ಟೆ ಮೂಳನ ಕಂಡರೆ ಮೆಟ್ಟಿದ ಎಡ ಪಾದರಕ್ಷೆಯ ತಗೊಂಡು ಲೊಟಲೊಟನೆ ಪಟಪಟನೆ ಹೊಡೆಯೆಂತೆಂದ’

ನಿಜಶರಣ ಅಂಬಿಗರ ಚೌಡಯ್ಯ ಎಂದು ಹೇಳುತ್ತಾರೆ. ಅಂದರೆ ಮೂಲ ಮನೆ ದೇವರ ಆರಾಧನೆ ಬಿಟ್ಟು, ಆ ಕಡೆ ಈ ಕಡೆ ಅಲೆದಾಡುವ ಡಾಂಭಿಕರ ಮನೋಧೋರಣೆಯನ್ನು ಚೌಡಯ್ಯನವರು ಉಗ್ರವಾಗಿ ಖಂಡಿಸುತ್ತಾರೆ. ಹಾಗೇಯೇ ಮತ್ತೊಂದು ವಚನದಲ್ಲಿ ನಂಬಿದವರಿಗೆ ಅಂಬಿಗರು ಗುರುವಾಗಿರಲು

‘ಅಂಬಿಗರಿಗೆ ಗುರುವೇತಕವಯ್ಯಾ’

ವ್ಯಾಸ. ಭೀಷ್ಮ. ಅಗಸ್ತ್ಯ ಮೊದಲಾದ ಸಮಾಜದ ಮೂಲ ಗುರುಗಳಿರಲು
ಗುರುವಿಲ್ಲವೆಂದವರಿಗೆ ಎದೆಗೆ ಒದ್ದು ಹೊಗೆಂದು

ನಮ್ಮ ನಿಜಶರಣ ಅಂಬಿಗರ ಚೌಡಯ್ಯನವರು ಬರೆಯುತ್ತಾರೆ. ಅಂಬಿಗರಿಗೆ ಗುರುವಿಲ್ಲವೆನ್ನುವ ಕಪಟಿಗಳಿಗೆ ಕಟು ತಿರುಗೇಟು ನೀಡುತ್ತಾರೆ. ಮತ್ತೊಂದು ವಚನದಲ್ಲಿ ಅಂಬಿಗರ ಚೌಡಯ್ಯನವರು ಮೇಲು-ಕೀಳು ಎಂಬುವ ವ್ಯವಸ್ಥೆಯ ವಿರುದ್ಧ ಕಟು ನಡೆಯನ್ನು ವ್ಯಕ್ತಪಡಿಸಿದ್ದಾರೆ.

‘ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ,
ತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದು
ಅಕ್ಕಿ ಕಣಕವ ಕೊಂಡುಹೋಗುವ ಗುರುವಿನ ಕಂಡರೆ,
ಕೆಡವಿ ಹಾಕಿ ಮೂಗನೆ ಕೊಯ್ಧುಇಟ್ಟಂಗಿಯ ಕಲ್ಲಿಲೆ ತಿಕ್ಕಿ
ಸಾಸಿವೆಯ ಹಿಟ್ಟನೆ ತಳಿದು
ಮೇಲೆ ಲಿಂಬಿಯ ಹುಳಿಯನೆ
ಹಿಂಡಿ ಪಡುವ ಗಾಳಿಗೆ ಹಿಡಿಯೆಂದಾತ
ನಮ್ಮ ಅಂಬಿಗರ ಚೌಡಯ್ಯ.

ಅರ್ಥ:
ಒಬ್ಬ ಗುರುವಾದವನು ಯಾವುದೇ ಜಾತಿ-ಕುಲದ ಭೇದ ಮಾಡದೆ, ಕೀಳುಕುಲದವನೆನ್ನದೆ ಒಬ್ಬ ಶಿಷ್ಯನಿಗೆ ಜ್ಞಾನದ ಅನುಗ್ರಹವನ್ನು ಮಾಡಬೇಕು. ಆದರೆ, ಹಾಗೆ ಅನುಗ್ರಹಿಸಿದ ನಂತರ ಮರಳಿ ಅವನ ಮನೆಯಲ್ಲೇ ಊಟ ಅಥವಾ ಪ್ರತಿಫಲವನ್ನು ಅಪೇಕ್ಷಿಸದೆ ಇರುವವನೇ ನಿಜವಾದ “ಕುಲಜ” (ಶ್ರೇಷ್ಠ ಕುಲದವನು ಅಥವಾ ನಿಜವಾದ ಗುರು) ಎಂದು ಸರ್ವಜ್ಞ ಹೇಳಿದ್ದಾನೆ.
ಅಂದರೆ, ವಿದ್ಯೆಯನ್ನು ಅಥವಾ ಜ್ಞಾನವನ್ನು ನೀಡುವಾಗ ಸಮಾನತೆ ಇರಬೇಕು ಮತ್ತು ಅದನ್ನು ಒಂದು ವ್ಯಾಪಾರವನ್ನಾಗಿ ಮಾಡದೆ ನಿಸ್ವಾರ್ಥವಾಗಿ ಇರಬೇಕು ಎಂಬುದು ಇದರ ಆಶಯವಾಗಿದೆ.

ಹೀಗೆ ಅಂಬಿಗರ ಚೌಡಯ್ಯನವರು ಅಂದಿನ ಕಾಲದಲ್ಲಿದ್ದ ಪೂರ್ವಾ ಗ್ರಹಪೀಡಿತ, ಜಾತಿ.ಧಮ ಮತ, ಮೂಢನಂಬಿ ಕೆಗಳು, ಅಸಮಾನತೆ,ಶೋಷಣೆಗಳ ವಿರುದ್ಧ ಕೆಂಡಾಮಂಡಲಗೊಂಡು, ಸಿಡಿದೆದ್ದು ಅವುಗಳ ಉಚ್ಚಾಟನೆಯಲ್ಲಿ ಟೊಂಕ ಕಟ್ಟಿ ನಿಂತು ಉತ್ಕೃಷ್ಟರಾಗಿ, ಉದಾತ್ತ, ಚಿಂತನೆವುಳ್ಳವರಾಗಿದ್ದರು.

ಇವರ ವಚನಗಳು ಅಧರಕ್ಕೆ ಕಹಿಯಾದರೆ ಉದರಕ್ಕೆ ಸಿಹಿ; ನುಡಿದರೆ ಏಟೊಂದು ತುಂಡೆರಡು. ಇಚ್ಛಾಮರಣ ಶಕ್ತಿಯುಳ್ಳ ಅಂಬಿಗರ ಚೌಡಯ್ಯ ಶತಾಯುಷಿಗಳಾಗಿದ್ದು, ಕೊನೆಯ ದಿನಗಳಲ್ಲಿ ಶಿವಾನುಭವ ಚಿಂತನೆಗೈಯುತ್ತಾ ಗುರುನಾಮಸ್ಮರಣೆಯೊಂದಿಗೆ ತುಂಗಭದ್ರಾ ನದಿಯ ತೀರದಲ್ಲಿ ಗಂಗೆಯ ಮಡಿಲಲ್ಲಿ ಐಕ್ಯರಾದರು. ಇಂದಿಗೂ ಕೂಡಾ ಅಲ್ಲಿ ತುಂಗಭದ್ರಾ ನದಿಯ ಮಧ್ಯದಲ್ಲಿ ಅವರ ಐಕ್ಯಮಂಟಪವಿದ್ದು ನಿತ್ಯ ಪೂಜೆ, ಪುನಸ್ಕಾರಗಳು ನಡೆಯುತ್ತಿದ್ದು ಅಸಂಖ್ಯಾತ ಭಕ್ತರು ಭೇಟಿ ನೀಡುವ ಪುಣ್ಯ ತಾಣವಾಗಿದೆ. ಅಂಬಿಗರ ಚೌಡಯ್ಯನವರ, ಚಿಂತನೆಗಳು, ನಡೆ ನುಡಿಗಳು ಕಾಲಕ್ಕೂ ಪ್ರಸ್ತುತವಾಗಿದ್ದು, ಬೆಳಕು ಚೆಲ್ಲುವ ಪ್ರಖರ ದಿವ್ಯ ಜ್ಯೋತಿಗಳೆನಿಸಿದ್ದು ಅವರ ಸಮಾಜ ಸುಧಾರಣೆಯ ಸೇವೆ ಅಭೂತಪೂರ್ವವಾದದ್ದು.

ವಿಶೇಷ ಲೇಖನ : ಬಡಿಗೇರ್ ಜಿಲಾನಸಾಬ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!