
ಹರಪನಹಳ್ಳಿ: ಸಮೀಪದ ಬಾಗಳಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಶಾರ್ಟ್ ಸರ್ಕೂಟ್ ಉಂಟಾಗಿ 11 ಕೆ.ವಿ ವಿದ್ಯುತ್ ತಂತಿಯು ಪಕ್ಕದ ಕಣದಲ್ಲಿದ್ದ ಮೆಕ್ಕೆಜೋಳದ ಗುಡ್ಡೆಗಳು ಮತ್ತು ರಾಗಿ ತೆನೆಯ ಬಣವೆಯ ಮೇಲೆ ಹರಿದು 8 ಎಕರೆ ಮೆಕ್ಕೆಜೋಳ ಹಾಗೂ 6ಎಕರೆಯಷ್ಟು ರಾಗಿ ತೆನೆಯ ಬಣವೆಯು ಸುಟ್ಟು ಕರಕಲಾಗಿದೆ.
ಮೆಕ್ಕೆಜೋಳ ಮತ್ತು ರಾಗಿ ಬಣವೆಗೆ ಬಿದ್ದಿರುವ ಬೆಂಕಿ ನಂದಿಸಲು ಗ್ರಾಮಸ್ಥರು ಕೈಜೋಡಿಸಿದರೂ ಬೆಂಕಿ ನಂದಿಸುವುದರೊಳಗೆ ಜೋಳ ಮತ್ತು ರಾಗಿ ಬಣವೆ ಹಾಗೂ ಎತ್ತಿನ ಬಂಡಿ ಸೇರಿದಂತೆ ಕಣದಲ್ಲಿ ಒಕ್ಕಲತನ ಮಾಡಲು ಇಟ್ಟಿದ್ದ ಕೃಷಿ ಸಲಕರಣೆಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.
ರೈತರಾದ ಹುಲ್ಲುಮನಿ ಜಾತಪ್ಪ ಹಾಗೂ ಹುಲ್ಲುಮನಿ ನಾಗರಾಜ ಇಬ್ಬರು ಸಹೋದರರಿಗೆ ಸಂಬಂದಿಸಿದ ಮೆಕ್ಕೆಜೋಳ ಹಾಗೂ ರಾಗಿ ತೆನೆಯ ಬಣವಿಗಳಿಗೆ ಮತ್ತು ಕೃಷಿ ಸಲಕರಣೆಗೆ ಬೆಂಕಿ ಹತ್ತಿ ಸುಟ್ಟು ಭಸ್ಮವಾಗಿವೆ.
ಅಂದಾಜು 13 ಲಕ್ಷಕ್ಕೂ ಅಧಿಕ ಮೌಲ್ಯದ ಮೆಕ್ಕೆಜೋಳ ಹಾಗೂ ರಾಗಿ ತೆನೆಯ ಬಣವಿ ಮತ್ತು ಎತ್ತಿನ ಬಂಡಿ ಸೇರಿದಂತೆ ಕೃಷಿ ಸಲಕರಣೆಗಳು ಸುಟ್ಟು ಭಸ್ಮವಾಗಿವೆ, ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಸಾಲ ಸೂಲ ಮಾಡಿ ಬೆಳೆಯನ್ನು ಬೆಳೆದಿದ್ದೆವು, ಅದರಲ್ಲಿ ಅತೀವೃಷ್ಠಿ ಮಳೆಯಿಂದ ಕೆಲ ಬೆಳೆಯು ಹಾನಿಯಗಿತ್ತು, ಉಳಿದ ಮೆಕ್ಕೆಜೋಳ ಮತ್ತು ರಾಗಿ ತೆನೆಯ ಬಣವೆಗಳ ಮೇಲೆ ಹಳೆಯ ವಿದ್ಯುತ್ ತಂತಿಯು ಹರಿದು ಉಳಿದ ಎಲ್ಲಾ ಬೆಳೆಯ ರಾಶಿಯು ಸುಟ್ಟು ಕರಕಲಾಗಿ ಹೋಯಿತು, ಕೃಷಿಗೆ ಮಾಡಿದ ಸಾಲವನ್ನು ತೀರಿಸುವ ಮತ್ತು ಕುಟುಂಬ ನಿರ್ವಹಣೆಯದು ಚಿಂತೆಯಾಗಿದೆ ಸಂಬಂದಿಸಿದ ಇಲಾಖೆಯವರು ನಷ್ಟದ ಪ್ರಮಾಣಕ್ಕೆ ತಕ್ಕಂತೆ ಸೂಕ್ತ ಪರಿಹಾರ ಒದಗಿಸಬೇಕೆಂದು ರೈತ ಹುಲ್ಲುಮನಿ ಜಾತಪ್ಪ ತನ್ನ ನೋವನ್ನು ವ್ಯಕ್ತಪಡಿಸಿದರು.
ಹರಪನಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್




















