ಬಾಗಲಕೋಟೆ/ ಜಮಖಂಡಿ ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದಲ್ಲಿ ನಡೆದ ಶ್ರೀಗುರುದೇವ ಸತ್ಸಂಗದ ದಾಸೋಹಿ ಸಂಗಮೇಶ ಬಾದರದಿನ್ನಿ ದಂಪತಿಯನ್ನು ಸನ್ಮಾನಿಸಲಾಯಿತು. ಮಹಾದೇವಿ ಅಕ್ಕ, ಜ್ಞಾನಮಯಾನಂದ ಶ್ರೀ, ಹರ್ಷಾನಂದ ಶ್ರೀ ಇದ್ದರು.
ಗಿಡ-ಮರಗಳಂತೆ ಮನುಷ್ಯರಿಗೆ ನೆರಳು ನೀಡಲು ಆಗುವುದಿಲ್ಲ. ಆದರೆ, ನೆರವು ನೀಡಬಹುದು. ಪರಹಿತ ಬಯಸುವುದು ಮತ್ತು ಪರೋಪಕಾರ ಮಾಡುವುದು ಸಾರ್ಥಕ ಬದುಕಿನ ಉಪಾಯವಾಗಿದೆ ಎಂದು ಅಮಲಝರಿ-ಮೆಳ್ಳಿಗೇರಿಯ ಶ್ರದ್ಧಾನಂದ ಮಠದ ಜ್ಞಾನಮಯಾನಂದ ಮಹಾಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳ ನಾಲ್ಕನೇ ಭಾನುವಾರ ಹಮ್ಮಿಕೊಳ್ಳುವ ಮಾಸಿಕ ಕಾರ್ಯಕ್ರಮ ‘ಶ್ರೀಗುರುದೇವ ಸತ್ಸಂಗ’ದ ಸಾನ್ನಿಧ್ಯ ವಹಿಸಿ ‘ಸಾರ್ಥಕ ಬದುಕಿಗೆ ಸರಳ ಸೂತ್ರಗಳು’ ಕುರಿತು ಅವರು ಆಶೀರ್ವಚನ ನೀಡಿದರು.
ಎಲ್ಲವೂ ನಾನೆ, ಎಲ್ಲವೂ ನನ್ನಿಂದಲೆ, ಎಲ್ಲವೂ ನನಗಾಗಿ ಎಂಬ ಸ್ವಾರ್ಥ ಭಾವನೆಗಳನ್ನು ತ್ಯೆಜಿಸಿ ಪರಮಾತ್ಮ ಕೊಟ್ಟಿದ್ದರಲ್ಲಿ ಸಂತೃಪ್ತ ಬದುಕು ನಡೆಸುವ ಸದ್ಭಾವ ಬೆಳೆಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ. ಕಣ್ಣು ತೆರೆದು ನಿಸರ್ಗವನ್ನು ಗಮನಿಸಿದಾಗ ಬದುಕಿನ ಸಾರ್ಥಕತೆ ಅರಿವಿಗೆ ಬರುತ್ತದೆ ಎಂದರು.
ಶ್ರೀಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ದೇಹ, ಇಂದ್ರಿಯ, ಮನಸ್ಸು, ಚಿತ್ತ, ಬುದ್ದಿಯನ್ನು ಬಳಸಿಕೊಂಡು ಸತ್ಕಾರ್ಯದಲ್ಲಿ ತೊಡಗಿಸಿಕೊಂಡು ಆತ್ಮಜ್ಞಾನಿ, ಅನುಭಾವಿ ಆಗಬೇಕು. ಅಂದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಆಶೀರ್ವಚನ ನೀಡಿದರು.
ಸಿದ್ದಾಪುರದ ಅಡವಿ ಸಿದ್ಧೇಶ್ವರ ಮಠದ ಮಾತೋಶ್ರೀ ಮಹಾದೇವಿ ಅಕ್ಕನವರು ಸಾನ್ನಿಧ್ಯ ವಹಿಸಿ ಮಾತನಾಡಿ ದಾನ, ಧರ್ಮ, ಪರೋಪಕಾರ ಮಾಡಬೇಕು. ಉಳ್ಳವರು ಇತರರ ಮೇಲೆ ದಯೆ ತೋರಬೇಕು ಎಂದು ಆಶೀರ್ವಚನ ನೀಡಿದರು.
ಯಲ್ಲಪ್ಪ ಶಿವಪುರ ಮಾತನಾಡಿದರು. ನರೇಂದ್ರ ಬಾವಿಕಟ್ಟಿ, ವೇದಾ ಬಾವಿಕಟ್ಟಿ, ಚಿತ್ರಕಲೆ ಶಿಕ್ಷಕ ಸುರೇಶ ಜನವಾಡ, ಮಹಾಪ್ರಸಾದದ ದಾಸೋಹಿ ಸಂಗಮೇಶ ಬಾದರದಿನ್ನಿ ದಂಪತಿ ಅವರನ್ನು ಶ್ರೀಮಠದ ಪರವಾಗಿ ಸನ್ಮಾನಿಸಲಾಯಿತು.
ಶ್ರೀಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸುಗೌಡ ಪಾಟೀಲ, ಪರಮೇಶ್ವರ ತೇಲಿ, ಶಿವಾಜಿ ಜಾಧವ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು.
ಸಂಗಮೇಶ ತೆಲಸಂಗ ನಿರೂಪಿಸಿದರು.
- ಕರುನಾಡ ಕಂದ ಪತ್ರಿಕೆ




















