ಬಳ್ಳಾರಿ / ಕಂಪ್ಲಿ : ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪೌರಕಾರ್ಮಿಕರಿಗಾಗಿ ಬಳ್ಳಾರಿಯ ಸ್ವಾಸ್ತ್ಯ ಹೆಲ್ತ್ ಫೌಂಡೇಷನ್ ನಿಂದ ಆರೋಗ್ಯ ಉಚಿತ ತಪಾಸಣೆ ಜರುಗಿತು.
ಪ್ರಭಾರ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಮಾತನಾಡಿ, ಪ್ರತಿದಿನ ಬೆಳಗಿನ ಜಾವ ಪಟ್ಟಣದ ಸ್ವಚ್ಛತೆಯಲ್ಲಿ ತೊಡುಗುವ ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು, ಪಟ್ಟಣ ಸ್ವಚ್ಚಗೊಳಿಸುವ ಪೌರಕಾರ್ಮಿಕರಿಗೆ ಹಲವು ರೋಗಗಳು ಕಾಡಬಹುದಾಗಿದ್ದು, ವಿಶೇಷ ಗಮನ ಕೊಡಬೇಕು. ತಮ್ಮ ಮನೆಗಳ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಮುತುವರ್ಜಿ ವಹಿಸಬೇಕು. ಈ ಹಿನ್ನಲೆಯಲ್ಲಿ ಬಳ್ಳಾರಿಯ ಸ್ವಾಸ್ತ್ಯ ಹೆಲ್ತ್ ಫೌಂಡೇಷನ್ ಪೌರಕಾರ್ಮಿಕರಿಗಾಗಿ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ಏರ್ಪಡಿಸಿದ್ದು, ಪೌರಕಾರ್ಮಿಕರು ಇದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದರು.
ಸ್ವಾಸ್ಥ್ಯ ಹೆಲ್ತ್ ಫೌಂಡೇಷನ್ ವೈದ್ಯ ಡಾ.ರವೀಂದ್ರ ಮಾತನಾಡಿ, ನಮ್ಮ ಸಂಸ್ಥೆಯಿಂದ ಪೌರಕಾರ್ಮಿಕರಿಗಾಗಿ ಉಚಿತವಾಗಿ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಂಡಿದ್ದು, ಪೌರಕಾರ್ಮಿಕ ಆರೋಗ್ಯ ತಪಾಸಣೆ ಮಾಡಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದರ ಜೊತೆಗೆ ರಿಯಾಯಿತಿ ದರದಲ್ಲಿ ಔಷಧಿಗಳನ್ನು ಸಹಿತ ವಿತರಿಸಲಾಗುವುದು, ಪೌರಕಾರ್ಮಿಕರ ಸಾಮಾನ್ಯ ರೋಗ ತಪಾಸಣೆಗಳನ್ನು ನಡೆಸಿದರಲ್ಲದೆ, ನೇತ್ರ ತಪಾಸಣೆಯನ್ನು ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಪುರಸಭೆಯ ನೈರ್ಮಲ್ಯ ನಿರೀಕ್ಷರಾದ ಪ್ರಕಾಶಬಾಬು, ಜೀವನ್ ಸ್ವಾತಿ, ಪುರಸಭೆ ಸಿಬ್ಬಂದಿಗಳು ಮಹಿಳಾ ಹಾಗೂ ಪುರುಷ ಪೌರ ಕಾರ್ಮಿಕರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















