ವಿಜಯನಗರ / ಹೊಸಪೇಟೆ : ಹಂಪಿ ಕನ್ನಡ ವಿಶ್ವವಿದ್ಯಾಲಯವು ಈ ಸಾಲಿನ ಪ್ರತಿಷ್ಠಿತ ‘ನಾಡೋಜ’ ಗೌರವ ಪದವಿಗೆ ಮೂವರು ಗಣ್ಯರನ್ನು ಆಯ್ಕೆ ಮಾಡಿದೆ. ಬೆಂಗಳೂರಿನ ಡಾ. ಜಿ. ರಾಮಕೃಷ್ಣ, ಡಾ. ಸಿ. ಮಹಾದೇವಪ್ಪ ಹಾಗೂ ಡಾ. ಹೆಚ್.ಸಿ. ಸತ್ಯಂ ಅವರು ಈ ಬಾರಿ ನಾಡೋಜ ಗೌರವಕ್ಕೆ ಭಾಜನರಾಗಿದ್ದಾರೆ.
ವಿಶ್ವವಿದ್ಯಾಲಯದಿಂದ ಬಿಡುಗಡೆಗೊಂಡಿರುವ ಹೊಸ ಅಪ್‌ಡೇಟ್ ಪ್ರಕಾರ, ಫೆಬ್ರವರಿ 24ರಂದು ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ಕುಲಾಧಿಪತಿಯಾದ ಥಾವರ್ ಚಂದ್ ಗೆಹ್ಲೋಟ್ ಅವರು ಈ ಸಾಧಕರಿಗೆ ನಾಡೋಜ ಗೌರವ ಪದವಿ ಪ್ರದಾನ ಮಾಡಲಿದ್ದಾರೆ. ಸಮಾರಂಭಕ್ಕೆ ಗಣ್ಯರು, ವಿದ್ಯಾವಂತರು, ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಸಮಾರಂಭದ ಅಂಗವಾಗಿ ಸಾಧಕರ ಜೀವನ ಸಾಧನೆ, ಕನ್ನಡಾಭಿವೃದ್ಧಿಗೆ ನೀಡಿದ ಕೊಡುಗೆ ಹಾಗೂ ಅವರ ವೈಚಾರಿಕ ಪಯಣವನ್ನು ಒಳಗೊಂಡ ಪರಿಚಯ ವಾಚನ ನಡೆಯಲಿದೆ. ವಿಶ್ವವಿದ್ಯಾಲಯ ಆವರಣದಲ್ಲಿ ಭದ್ರತಾ ಹಾಗೂ ಕಾರ್ಯಕ್ರಮದ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ.
ಹಂಪಿ ಕನ್ನಡ ವಿಶ್ವವಿದ್ಯಾಲಯವು ಸ್ಥಾಪನೆಯಾದ ದಿನದಿಂದಲೂ ಕನ್ನಡ ಅಧ್ಯಯನ, ಸಂಶೋಧನೆ ಮತ್ತು ಪರಂಪರೆಯ ಸಂರಕ್ಷಣೆಗೆ ಮಹತ್ವ ನೀಡುತ್ತಾ ಬಂದಿದ್ದು, ನಾಡೋಜ ಗೌರವ ಪದವಿ ಅದರ ಪ್ರಮುಖ ಪರಂಪರೆಯಾಗಿದೆ. ಈ ವರ್ಷದ ಗೌರವ ಸಮಾರಂಭವೂ ಕನ್ನಡಾಭಿಮಾನಿಗಳಿಗೆ ವಿಶೇಷ ಆಕರ್ಷಣೆಯಾಗಲಿದೆ.
ವರದಿ : ಜಿಲಾನಸಾಬ್ ಬಡಿಗೇರ್



















