ಬಳ್ಳಾರಿ / ಕಂಪ್ಲಿ : ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ತಂಡ ಮಂಗಳವಾರ ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿತು.
2016ರ ಮಕ್ಕಳ ರಕ್ಷಣಾ ನಿಯಮದಂತೆ ಪ್ರಸ್ತುತ ಶಾಲೆಗೆ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳುವಾಗ ಅವರ ಅಪರಾಧ ಹಿನ್ನೆಲೆ ಕುರಿತು ಪೊಲೀಸ್ ಇಲಾಖೆಯಿಂದ ಪ್ರಮಾಣಪತ್ರ ಪಡೆಯಬೇಕಿತ್ತು. ಆದರೆ ಶಾಲೆಗೆ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳುವಾಗ ಅದಾವುದು ನಡೆದಿಲ್ಲ ಎಂದು ಅಧಿಕಾರಿಗಳ ತಂಡ ಸ್ಪಷ್ಟಪಡಿಸಿದೆ.
ಅತ್ಯಾಚಾರ ಘಟನೆ ಕುರಿತಂತೆ ಮುಖ್ಯ ಶಿಕ್ಷಕ ಸೇರಿ ಎಲ್ಲಾ ಶಿಕ್ಷಕರಿಗೆ ತಿಳಿದಿದ್ದರೂ ಮೌನವಹಿಸಿದ್ದಾರೆ. ಇಬ್ಬರು ಶಿಕ್ಷಕರನ್ನು ಹೊರತುಪಡಿಸಿ ಶಾಲೆಯ ಉಳಿದ ಎಲ್ಲ ಶಿಕ್ಷಕರಿಂದ ದೈಹಿಕ, ಮಾನಸಿಕ ವಿವಿಧ ದೌರ್ಜನ್ಯಗಳಾಗಿದ್ದರೂ ಮಕ್ಕಳ ಸಹಾಯವಾಣಿಗೆ ತಿಳಿಸಿಲ್ಲ. ಮಕ್ಕಳು ಸತತ ಗೈರಾಗಿದ್ದರೂ ಮೇಲಧಿಕಾರಿಗಳ ಗಮನಕ್ಕೆ ತಂದಿಲ್ಲ. ಆಗಸ್ಟ್ 2025ರಿಂದ ಎಸ್‌ಡಿಎಂಸಿ ಸಭೆ ನಡೆಸಿಲ್ಲ ಜತೆಗೆ ಮಕ್ಕಳ ರಕ್ಷಣಾ ನೀತಿ ಸಭೆಯೂ ನಡೆಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಎಸ್‌ಡಿಎಂಸಿ ಸದಸ್ಯರ ಆರೋಪದಂತೆ ಮುಖ್ಯ ಶಿಕ್ಷಕರು ಸರಿಯಾಗಿ ಶಾಲೆಗೆ ಬಂದಿಲ್ಲ. ಅವರ ಉದಾಸೀನದಿಂದ ಶಾಲೆ ಪರಿಸರ ಹದಗೆಟ್ಟಿದೆ.
ಅತ್ಯಾಚಾರ ಪ್ರಕರಣ ಬಳಿಕ ಮುಖ್ಯಶಿಕ್ಷಕನನ್ನು ವಿಚಾರಣೆ ನಡೆಸದೆ ಬೇರೆ ಶಾಲೆಗೆ ವರ್ಗಾಯಿಸಲಾಗಿದೆ. ಶಾಲೆಯ ಒಟ್ಟು 615 ಮಕ್ಕಳಲ್ಲಿ 276ಮಕ್ಕಳು ಮಂಗಳವಾರ ಹಾಜರಾಗಿದ್ದು, ಈ ಎಲ್ಲಾ ಸಮಗ್ರ ವರದಿಯನ್ನು ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಅಧಿಕಾರಿಗಳ ತಂಡ ತಿಳಿಸಿತು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ, ಘಟಕದ ಆಪ್ತ ಸಮಾಲೋಚಕರು, ಮಕ್ಕಳ ಸಹಾಯವಾಣಿ ಸಂಯೋಜಕರು, ಅಕ್ಕ ಪಡೆ ಸದಸ್ಯರು, ಶಿಕ್ಷಣ ಇಲಾಖೆ ಇಸಿಒ ಗಳು, ಎಸ್‌ಡಿಎಂಸಿ ಸದಸ್ಯರು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















