
ಗುತ್ತಿಗೆ ಬದಲಾವಣೆ ನೆಪದಲ್ಲಿ ಅನುಭವಿಗಳ ಕೈಬಿಡುತ್ತಿರುವುದರ ವಿರುದ್ಧ ಹೋರಾಟದ ಎಚ್ಚರಿಕೆ
ಗುರುಮಠಕಲ್: ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ವಿಂಡ್ ಫ್ಯಾನ್ ಸಂಸ್ಥೆ (Vayona Energy) ವಿರುದ್ಧ ಕಾರ್ಮಿಕರ ಆಕ್ರೋಶ ಭುಗಿಲೆದ್ದಿದೆ. ಹಲವು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದ ನೌಕರರನ್ನು “ಕಾಂಟ್ರಾಕ್ಟ್ ಬದಲಾವಣೆ” ಎಂಬ ನೆಪದಲ್ಲಿ ಏಕಾಏಕಿ ಕೆಲಸದಿಂದ ದೂರಗೊಳಿಸಿರುವ ಘಟನೆ ಕಾರ್ಮಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಹೊಸ ಗುತ್ತಿಗೆದಾರರು ಅಧಿಕಾರ ವಹಿಸಿಕೊಂಡ ಬಳಿಕ, ಹಳೆಯ ನೌಕರರನ್ನು ಪರಿಗಣಿಸದೆ ಹೊಸಬರ ಆಯ್ಕೆ ಪ್ರಕ್ರಿಯೆಗೆ ಮುಂದಾಗಿರುವುದು ಅಸಮಾಧಾನಕ್ಕೆ ದಾರಿ ಮಾಡಿಕೊಟ್ಟಿದೆ. “ನಾವು ವರ್ಷಗಳ ಕಾಲ ಕಂಪನಿಗೆ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇವೆ. ಯಾವುದೇ ದೋಷ, ಅನುತ್ತೀರ್ಣ, ಕಾರ್ಯಕ್ಷಮತೆ ಬಗ್ಗೆ ಸೂಚನೆ ನೀಡಲಾಗಿಲ್ಲ, ಪೂರ್ವ ನೋಟಿಸ್ ಸಹ ನೀಡದೆ ಕೈಬಿಟ್ಟಿರುವುದು ಅನ್ಯಾಯ” ಎಂದು ಹಳೆಯ ನೌಕರರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರ ಪ್ರಕಾರ, ಕೆಲಸದ ಸ್ವರೂಪದಲ್ಲಿ ಯಾವುದೇ ವ್ಯತ್ಯಾಸವಿಲ್ಲ; ಕಾರ್ಯ ನಿರಂತರವಾಗಿಯೇ ಮುಂದುವರಿಯುತ್ತಿದೆ. ಇಂತಹ ಸಂದರ್ಭದಲ್ಲೂ ಅನುಭವ ಹೊಂದಿದ ಕಾರ್ಮಿಕರನ್ನು ಬದಲಿಸುವುದು ಕಾನೂನುಬದ್ಧವಾಗಿಯೂ ಪ್ರಶ್ನಾರ್ಹ ಎಂದು ಅವರು ಹೇಳಿದ್ದಾರೆ.
ಕುಟುಂಬದ ಜೀವನ ಸಂಕಷ್ಟಕ್ಕೀಡಾಗಿದ್ದು, ಮಕ್ಕಳ ವಿದ್ಯಾಭ್ಯಾಸ ಹಾಗೂ ದಿನನಿತ್ಯದ ವೆಚ್ಚ ನಿರ್ವಹಣೆಯಲ್ಲಿ ತೀವ್ರ ತೊಂದರೆ ಉಂಟಾಗಿದೆ ಎಂದು ಹಲವರು ಕಣ್ಣೀರಿಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಹಳೆಯ ನೌಕರರು ಒಟ್ಟಾಗಿ ಮನವಿ ಪತ್ರ ಸಲ್ಲಿಸಲು ಹಾಗೂ ಅಗತ್ಯವಿದ್ದಲ್ಲಿ ಕಾರ್ಮಿಕ ಇಲಾಖೆಗೆ ದೂರು ನೀಡಲು ತೀರ್ಮಾನಿಸಿದ್ದಾರೆ.
ಸಮಸ್ಯೆಗೆ ಶೀಘ್ರ ಪರಿಹಾರ ಸಿಗದಿದ್ದಲ್ಲಿ ಹೋರಾಟದ ಮಾರ್ಗ ಹಿಡಿಯುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಕಾರ್ಮಿಕರ ಹಕ್ಕುಗಳ ಕುರಿತು ಜಾರಿಯಲ್ಲಿರುವ Contract Labour (Regulation and Abolition) Act, 1970 ಪ್ರಕಾರ, ಗುತ್ತಿಗೆದಾರ ಬದಲಾದರೂ ಕೆಲಸ ನಿರಂತರವಾಗಿದ್ದರೆ ಹಳೆಯ ನೌಕರರಿಗೆ ಆದ್ಯತೆ ನೀಡಬೇಕೆಂಬ ತತ್ವವನ್ನು ವಿವಿಧ ನ್ಯಾಯಾಲಯಗಳ ತೀರ್ಪುಗಳಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನಲೆಯಲ್ಲಿ ಸಂಬಂಧಿತ ಅಧಿಕಾರಿಗಳು ತಕ್ಷಣ ಮಧ್ಯಸ್ಥಿಕೆ ವಹಿಸಿ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಬೇಕೆಂದು ಸಾರ್ವಜನಿಕ ವಲಯದಲ್ಲೂ ಆಗ್ರಹ ವ್ಯಕ್ತವಾಗಿದೆ.
ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಜಗದೀಶ್ ಕುಮಾರ್ ಭೂಮಾ



















