ಸೇಡಂ/ಯಾನಾಗುಂದಿ: ಯಾನಾಗುಂದಿಯಲ್ಲಿರುವ ಮಾತಾ ಮಾಣಿಕೇಶ್ವರಿ ಅಮ್ಮನವರ ತಪೋಭೂಮಿಯಲ್ಲಿ ಭಕ್ತರಿಗೆ ಮೂಲಭೂತ ಸೌಲಭ್ಯಕ್ಕಾಗಿ ಸಮಗ್ರ ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಕಾಶ್ ರೆಡ್ಡಿ ಪಟೇಲ್ ಒತ್ತಾಯಿಸಿದ್ದಾರೆ.
ಕ್ಷೇತ್ರಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಸಮರ್ಪಕ ವಸತಿ, ಶುದ್ಧ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಕೊಠಡಿಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ತಕ್ಷಣ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.
ಅಮ್ಮನವರ ಟ್ರಸ್ಟ್ ವತಿಯಿಂದ ನಿಯಮಿತವಾಗಿ ಉಚಿತ ಆರೋಗ್ಯ ಶಿಬಿರಗಳು, ಕಣ್ಣಿನ ತಪಾಸಣೆ, ಸಾಮಾನ್ಯ ಆರೋಗ್ಯ ತಪಾಸಣೆ ಹಾಗೂ ಅಗತ್ಯ ಔಷಧಿಗಳ ವಿತರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಕ್ಷೇತ್ರದ ಆರಂಭಿಕ ದಿನಗಳಿಂದ ಅಮ್ಮನವರ ಜೊತೆ ಸೇವೆಯಲ್ಲಿ ತೊಡಗಿದ್ದ ಹಿರಿಯ ಭಕ್ತರನ್ನು ಕಡೆಗಣಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅವರನ್ನು ಮರು ನೇಮಕ ಮಾಡಿ ಆಶ್ರಮ ಸೇವೆಯಲ್ಲಿ ಅವಕಾಶ ನೀಡಬೇಕು ಎಂಬ ಬೇಡಿಕೆ ಕೇಳಿಬಂದಿದೆ.
ಇದಲ್ಲದೆ, ಮಾತಾಜಿಯವರ ಹೆಸರಿನಲ್ಲಿ ನಡೆಯುತ್ತಿರುವ ಶಾಲೆ, ಕಾಲೇಜು, ಕಲ್ಯಾಣ ಮಂಟಪ, ಅಂಗಡಿಗಳು ಹಾಗೂ ಬೆಟ್ಟದ ಮೇಲಿನ ಆದಾಯದ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಭಕ್ತರಿಂದ ಸಂಗ್ರಹವಾಗಿರುವ ದೇಣಿಗೆ, ನಗದು ಮತ್ತು ಆಸ್ತಿಪಾಸ್ತಿ ವಿವರಗಳನ್ನು ಪಾರದರ್ಶಕವಾಗಿ ಭಕ್ತರ ಮುಂದೆ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಅಮ್ಮನವರು ಧ್ಯಾನ ಮಾಡಿದ್ದ ಧ್ಯಾನ ಬಂಡೆ, ಧ್ಯಾನ ಮಂದಿರ ಹಾಗೂ ದರ್ಶನ ನೀಡುತ್ತಿದ್ದ ಪವಿತ್ರ ಸ್ಥಳಗಳನ್ನು ವಿಶೇಷವಾಗಿ ಗುರುತಿಸಿ, ಮಾಹಿತಿ ಫಲಕಗಳನ್ನು ಅಳವಡಿಸಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
“ಕೋಟಿಲಿಂಗ ಪ್ರತಿಷ್ಠಾಪನೆ” ಅಮ್ಮನವರ ಕೊನೆಯ ಉದ್ದೇಶ ಎಂದು ಹೇಳಲಾಗುತ್ತಿದೆ. ಈ ಕುರಿತು ಅಮ್ಮನವರು ಹೇಳಿರುವ ವಿಡಿಯೋ ಅಥವಾ ದಾಖಲಾತಿಗಳನ್ನು ಭಕ್ತರ ಮುಂದೆ ಇರಿಸಬೇಕು. ಪ್ರತಿಷ್ಠಾಪನೆಗೆ ಅತಿ ಹೆಚ್ಚು ಮೊತ್ತ ನಿಗದಿ ಮಾಡಿ ಭಕ್ತರನ್ನು ಮೋಸ ಮಾಡಲಾಗುತ್ತಿದೆ ಎಂಬ ಆರೋಪಗಳ ಕುರಿತು ಟ್ರಸ್ಟ್ ಸ್ಪಷ್ಟನೆ ನೀಡಬೇಕು, ಹಾಗೂ ಅಮ್ಮನವರ ಕೊನೆಯ ದಿನಗಳಲ್ಲಿ ಸಮರ್ಪಕ ಸೇವಾ ವ್ಯವಸ್ಥೆ ಇರಲಿಲ್ಲ ಎಂಬ ಆರೋಪಗಳ ಕುರಿತು ಟ್ರಸ್ಟ್‌ನ ಪ್ರಮುಖರಾದ ಶಿವಯ್ಯ ಸ್ವಾಮಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕ್ಷೇತ್ರದಲ್ಲಿ ನಿಯಮಿತ ಪೂಜೆ, ಧ್ವಜಾರೋಹಣ, ಧ್ವನಿವರ್ಧಕ ವ್ಯವಸ್ಥೆ ಹಾಗೂ ಪೂಜೆ ಸಮಯದ ಮಾಹಿತಿ ಭಕ್ತರಿಗೆ ಲಭ್ಯವಾಗುವಂತೆ ಪ್ರಕಟಣೆ ವ್ಯವಸ್ಥೆ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಕುರಿತು ಸಹ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಲಾಗಿದೆ.
ಭಕ್ತರ ನಂಬಿಕೆ ಮತ್ತು ಭಾವನೆಗಳಿಗೆ ಧಕ್ಕೆಯಾಗದಂತೆ ಪಾರದರ್ಶಕ ಆಡಳಿತ, ಸಮರ್ಪಕ ಸೌಲಭ್ಯ ಹಾಗೂ ಆಧ್ಯಾತ್ಮಿಕ ವಾತಾವರಣ ನಿರ್ಮಾಣ ಮಾಡುವ ಜವಾಬ್ದಾರಿ ಟ್ರಸ್ಟ್ ಮೇಲಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಇಲ್ಲವಾದಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆ ಮಾಡುವದಾಗಿ ಟ್ರಸ್ಟ್ ಸದಸ್ಯರಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸಜ್ಜನ್ ಕಾನಗಡ್ದ, ಸಿದ್ದು ಯಾನಾಗುಂದಿ, ಮೋನಪ್ಪ ದೊಡ್ಲಾ ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















