
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಬಾಗಲಕೋಟೆ, ಶಿವಮೊಗ್ಗ, ಚಿತ್ರದುರ್ಗ ಹಾಗೂ ಮುರುಡೇಶ್ವರ ಸೇರಿದಂತೆ ರಾಜ್ಯದ ವಿವಿಧೆಡೆ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆ, ಕಲ್ಲು ತೂರಾಟ ಮತ್ತು ಕೊಲೆಯಂತಹ ಹೇಯ ಕೃತ್ಯಗಳನ್ನು ವಿರೋಧಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ, ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಇಂದು ಮಂಗಳೂರಿನ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬಾಗಲಕೋಟೆಯಲ್ಲಿ ಎಸ್‌ಪಿ ಸಿದ್ದಾರ್ಥ್ ಗೋಯಲ್ ಅವರ ಮೇಲೆಯೇ ನಡೆದ ಕಲ್ಲು ತೂರಾಟ ಹಾಗೂ ಶಿವಮೊಗ್ಗದ ಬಾಲಕ ತಿಲಕ್‌ನ ಕ್ರೂರ ಹತ್ಯೆಯು ರಾಜ್ಯದ ಹದಗೆಟ್ಟ ಕಾನೂನು ಸುವ್ಯವಸ್ಥೆಗೆ ಸಾಕ್ಷಿಯಾಗಿದೆ ಎಂದು ಸಮಿತಿ ಆತಂಕ ವ್ಯಕ್ತಪಡಿಸಿದೆ.
ಈ ವ್ಯವಸ್ಥಿತ ದಾಳಿಗಳ ಬಗ್ಗೆ ಎನ್‌ಐಎ (NIA) ತನಿಖೆ ನಡೆಸಬೇಕು, ತಪ್ಪಿತಸ್ಥರ ಮೇಲೆ ‘ಕೋಕಾ’ ಕಾಯ್ದೆ ಜಾರಿಗೊಳಿಸಬೇಕು ಮತ್ತು ಸಂವೇದನಾಶೀಲ ಪ್ರದೇಶಗಳಲ್ಲಿ ಹಿಂದೂಗಳಿಗೆ ಸಮರ್ಪಕ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಸಮಿತಿ ಆಗ್ರಹಿಸಿದೆ. ಸರ್ಕಾರವು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಮಿತಿ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಯೋಜಕರು ಶ್ರೀ ದಿನಕರ ಪೂಜಾರಿ, ಹಿಂದೂ ಜನಜಾಗೃತಿ ಸಮಿತಿಯ ಪವಿತ್ರ ಕುಡ್ವ, ವಿಠಲ ನಾಯಕ್ ಎಯ್ಯಾಡಿ, ಭಾಸ್ಕರ್ ಸುವರ್ಣ ಕೊಳ್ನಾಡು, ಹಿಂದೂ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ರೈ, ಜಿ. ಸುರೇಂದ್ರ, ಉದ್ಯಮಿ ಚಂದ್ರಕಾಂತ್, ನ್ಯಾಯವಾದಿಗಳಾದ ಈಶ್ವರ ಕೊಟ್ಟಾರಿ, ಯತೀಶ್ ಹಾಗೂ ಜಯಪ್ರಕಾಶ್ ಉಪಸ್ಥಿತರಿದ್ದರು.
ವರದಿ : ಚಂದ್ರಶೇಖರ ಹೆಬ್ಬಾರ್ ಕೊಲ್ಯ



















