ಗುರುಮಠಕಲ್/ಇಡ್ಲೂರು: ಮಾ. 08: ಆಂಧ್ರ–ಕರ್ನಾಟಕ ಗಡಿ ಭಾಗದಲ್ಲಿರುವ ಇಡ್ಲೂರು ಗ್ರಾಮದ ಶ್ರೀ ಶಂಕರಲಿಂಗೇಶ್ವರ ಜಾತ್ರೆ ಭಕ್ತಿಭಾವ ಮತ್ತು ಸಂಭ್ರಮದ ನಡುವೆ ಭವ್ಯವಾಗಿ ನಡೆಯುತ್ತಿದೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿಯೇ ದೊಡ್ಡ ಜಾತ್ರೆಗಳಲ್ಲಿ ಒಂದಾದ ಈ ಜಾತ್ರೆ ಪ್ರತಿವರ್ಷ ಸಾವಿರಾರು ಭಕ್ತರನ್ನು ಸೆಳೆಯುವ ಮೂಲಕ ವಿಶೇಷತೆ ಪಡೆದಿದೆ.
ಜಾತ್ರೆಯ ಪ್ರಮುಖ ಆಕರ್ಷಣೆಯಾದ ಶ್ರೀ ಶಂಕರಲಿಂಗೇಶ್ವರರ ರಥೋತ್ಸವ ಭಕ್ತರಲ್ಲಿ ಅಪಾರ ಭಕ್ತಿ ಹಾಗೂ ಉತ್ಸಾಹ ಮೂಡಿಸುತ್ತದೆ. ಹೂವು ಮತ್ತು ತಳಿರು ತೋರಣಗಳಿಂದ ಅಲಂಕರಿಸಲ್ಪಟ್ಟ ಭವ್ಯ ತೇರು, ಅದನ್ನು ಎಳೆಯಲು ಹಾತೊರೆಯುವ ಸಾವಿರಾರು ಭಕ್ತರು, ಜಯಘೋಷಗಳಿಂದ ಮೊಳಗುವ ವಾತಾವರಣ ಜಾತ್ರೆಯ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತವೆ.
ಪ್ರತಿ ವರ್ಷವೂ ಹುಣ್ಣಿಮೆಯ ನಂತರ ಐದನೇ ದಿನದಂದು ನಡೆಯುವ ರಥೋತ್ಸವ ಪುರಾತನ ಸಂಪ್ರದಾಯದಂತೆ ನಡೆಯುತ್ತಿದೆ. ಜಾತ್ರೆಯ ಅಂಗವಾಗಿ ಮೊದಲ ದಿನ ಪಲ್ಲಕ್ಕಿ ಉತ್ಸವ ನಡೆಯುತ್ತಿದ್ದು, ಶ್ರೀ ಶಂಕರಲಿಂಗೇಶ್ವರರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ದೇವಾಲಯದ ಸನ್ನಿಧಿಗೆ ಕರೆತರುತ್ತಾರೆ. ಮೆರವಣಿಗೆಯಲ್ಲಿ ನಂದಿಕೋಲು ಕುಣಿತ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಜನಪದ ಕಲಾಪ್ರಕಾರಗಳು ನಡೆಯುತ್ತವೆ.
ಮರುದಿನ ಬೆಳಿಗ್ಗೆ ಅಗ್ನಿಕುಂಡ ಕಾರ್ಯಕ್ರಮ ಹಾಗೂ ಸಂಜೆ ಉಚ್ಚಾಯ ರಥೋತ್ಸವ ನಡೆಯುತ್ತದೆ. ಎರಡನೇ ದಿನ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿ ಸಂಜೆ ವೇಳೆಗೆ ಅರ್ಚಕರು ರಥೋತ್ಸವಕ್ಕೆ ಚಾಲನೆ ನೀಡುತ್ತಾರೆ. ಸಾವಿರಾರು ಭಕ್ತರು ಜಯಘೋಷಗಳ ನಡುವೆ ಭಕ್ತಿಭಾವದಿಂದ ತೇರು ಎಳೆಯುತ್ತಾರೆ. ದೇವಾಲಯದಿಂದ ಸುಮಾರು 400 ಮೀಟರ್ ದೂರದಲ್ಲಿರುವ ಬಸವಣ್ಣನ ಗುಡಿಯವರೆಗೆ ತೇರು ಸಾಗಿದ್ದು, ನಂತರ ದೇವಾಲಯದತ್ತ ಹಿಂತಿರುಗುತ್ತದೆ.
ಸುಮಾರು ಹನ್ನೆರಡು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಯಾದಗಿರಿ ಜಿಲ್ಲೆಯಷ್ಟೇ ಅಲ್ಲದೆ ನೆರೆಯ ಜಿಲ್ಲೆಗಳು ಹಾಗೂ ಆಂಧ್ರ, ತೆಲಂಗಾಣ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ದೇವಾಲಯದ ವತಿಯಿಂದ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ತಮ್ಮ ಬೆಳೆಗಳಲ್ಲಿ ಒಂದು ಭಾಗವನ್ನು ದಾಸೋಹಕ್ಕೆ ನೀಡುವ ಮೂಲಕ ಸೇವೆಯಲ್ಲಿ ಭಾಗಿಯಾಗುತ್ತಾರೆ.
ಜಾತ್ರೆಯ ಅಂಗವಾಗಿ ಎತ್ತಿನ ಜಾತ್ರೆ, ಸಿಹಿತಿಂಡಿ ಅಂಗಡಿಗಳು, ಬಳೆ ಮತ್ತು ಮಕ್ಕಳ ಆಟಿಕೆಗಳ ಮಳಿಗೆಗಳು, ವಿವಿಧ ಜೋಕಾಲಿಗಳು ಸೇರಿದಂತೆ ಅನೇಕ ಮೇಳಗಳು ಜಾತ್ರೆಯ ಕಳೆಗಟ್ಟಿಸುತ್ತವೆ.
ಆಂಧ್ರ–ಕರ್ನಾಟಕ ಗಡಿ ಗ್ರಾಮವಾದ ಇಡ್ಲೂರಿನಲ್ಲಿ ಇರುವ ಶ್ರೀ ಶಂಕರಲಿಂಗೇಶ್ವರ ದೇವಾಲಯವು ಪುರಾತನ ತ್ರಿಕೂಟ ವಿನ್ಯಾಸದ ದೇವಾಲಯವಾಗಿದ್ದು, ಕರಿಯ ಕಲ್ಲಿನಲ್ಲಿ ಕೆತ್ತಲಾದ ಶಿವಲಿಂಗ ವಿಶೇಷವಾಗಿದೆ. ಗರ್ಭಗುಡಿಯ ಬಳಿ ವೀರಭದ್ರೇಶ್ವರ ಮೂರ್ತಿ ಹಾಗೂ ನಾಲ್ಕು ಅಡಿ ಎತ್ತರದ ನಂದಿ ವಿಗ್ರಹವು ಶಿಲ್ಪಕಲೆಯ ಅದ್ಭುತವನ್ನು ತೋರಿಸುತ್ತದೆ.
ಹಳ್ಳದ ದಂಡೆಯ ಮೇಲೆ ಪ್ರಕೃತಿಯ ಮಧ್ಯೆ ನೆಲೆಸಿರುವ ಈ ದೇವಾಲಯದಲ್ಲಿ ಶ್ರೀ ಶಂಕರಲಿಂಗೇಶ್ವರರ ದರ್ಶನ ಪಡೆದ ಭಕ್ತರು ಮನಸ್ಸಿಗೆ ಶಾಂತಿ ಮತ್ತು ಧನ್ಯತಾಭಾವವನ್ನು ಅನುಭವಿಸುತ್ತಾರೆ.
ವರದಿ: ಜಗದೀಶ್ ಕುಮಾರ್ ಭೂಮಾ



















